ಸಾರಾಂಶ
ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ೭೬೬ಇ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಈ ರಸ್ತೆಯಲ್ಲಿ ತುರ್ತಾಗಿ ಹೊಂಡಬಿದ್ದ ಸ್ಥಳಗಳನ್ನು ದುರಸ್ತಿಗೊಳಿಸಬೇಕು. ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಇಲ್ಲಿನ ತಾಲೂಕು ಸೌಧದ ಎದುರು ಕರವೇ ಸ್ವಾಭಿಮಾನಿ ಬಣದ ವತಿಯಿಂದ ಶುಕ್ರವಾರ ಕಂಬಳಿ ಹಾಸಿ ಕುಳಿತು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ದೀಪಕ ನಾಯ್ಕ, ಕುಮಟಾ-ಶಿರಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದೇ ಕಾಮಗಾರಿಯನ್ನು ಶೀಘ್ರವಾಗಿ ಸಮಯಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ. ಆದರೆ ಕುಮಟಾ-ಶಿರಸಿ ರಸ್ತೆಯಲ್ಲಿ ಬಸ್ ಮತ್ತು ಭಾರಿ ವಾಹನಗಳನ್ನು ಹೊರತುಪಡಿಸಿ ಇತರ ಎಲ್ಲ ವಾಹನಗಳ ಓಡಾಟ ನಡೆದೇ ಇದೆ. ಎಲ್ಲಿಯೂ ಕಾಮಗಾರಿ ಸರಿಯಾಗಿ ನಡೆಯುತ್ತಲೇ ಇಲ್ಲ. ಕತಗಾಲದಿಂದ ಮಾಸ್ತಿಹಳ್ಳ ವರೆಗೆ ಸುಮಾರು ೪ ಕಿಮೀ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎಸಿ ಮತ್ತು ಶಾಸಕರ ಎದುರಲ್ಲಿ ವರ್ಷದ ಹಿಂದೆಯೇ ಒಪ್ಪಿಕೊಂಡಿದ್ದ ಗುತ್ತಿಗೆ ಪಡೆದಿರುವ ಆರ್.ಎನ್.ಎಸ್. ಕಂಪನಿಯವರು ವರ್ಷ ಕಳೆದರೂ ರಸ್ತೆ ಸರಿಪಡಿಸಿಲ್ಲ. ದಿನನಿತ್ಯ ಜನ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರೂ ನೋಡುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ಕತಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನಿಯೋಜಿಸಬೇಕು. ಸರ್ಕಾರಕ್ಕೆ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಿಸುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದರು.ಇಲ್ಲಿ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ತಾಲೂಕುಸೌಧದ ಬಾಗಿಲಲ್ಲಿ ಕುಳಿತುಕೊಳ್ಳುವುದು ಬೇಡ ಎಂದು ಉಪವಿಭಾಗಧಿಕಾರಿ ಪ್ರತಿಭಟನಾಕಾರರಿಗೆ ಹೇಳಿದರು. ಆದರೆ ಪಟ್ಟು ಸಡಿಲಿಸಿದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಕುಳಿತಿದ್ದೇವೆ. ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದರು.
ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಪ್ರತಿಭಟನಾ ಸ್ಥಳಕ್ಕೆ ಸಾಕಷ್ಟು ತಡವಾಗಿ ಆಗಮಿಸಿದ ಆರ್.ಎನ್.ಎಸ್. ಕಂಪನಿ ಮತ್ತು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಸಾಕಷ್ಟು ಚರ್ಚೆಯ ಬಳಿಕ ಕತಗಾಲದಿಂದ ಮಾಸ್ತಿಹಳ್ಳದ ವರೆಗಿನ ೪ ಕಿಮೀ ರಸ್ತೆಯನ್ನು ಶೀಘ್ರ ದುರಸ್ತಿ ಮಾಡುವ ಭರವಸೆ ದೊರೆತಿದ್ದರಿಂದ ಪ್ರತಿಭಟನಾಕಾರರು ಅಲ್ಲಿಂದ ಮರಳಿದರು.ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ತಾಲೂಕಾಧ್ಯಕ್ಷ ಮಾರುತಿ ಆನೆಗುಂದಿ, ನಾಗರಾಜ ಹೆಗಡೆ, ದೀಪಕ ನಾಯ್ಕ, ಈಶ್ವರ ಉಪ್ಪಾರ, ಮಾರುತಿ ಆನೆಗುಂದಿ, ವಿಶ್ವ ಮಾನವ ಹಕ್ಕು ಆಯೋಗ (ಆರ್.ಕೆ. ಫೌಂಡೇಷನ್)ದ ಉ.ಕ. ಕಾನೂನು ಸಲಹೆಗಾರ್ತಿ ಅರ್ಚನಾ ಜಯಪ್ರಕಾಶ, ಜಿಲ್ಲಾಧ್ಯಕ್ಷ ಮಹೇಂದ್ರ ನಾಯ್ಕ ಹಾಗೂ ಅಳಕೋಡ, ಕತಗಾಲ, ಅಂತ್ರವಳ್ಳಿ, ಕೋಡಂಬಳೆ, ಹರೀಟಾ ಭಾಗದ ಜನರು ಹಾಜರಿದ್ದರು. ಪಿಎಸ್‌ಐ ರವಿ ಗುಡ್ಡಿ, ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.
;Resize=(128,128))
;Resize=(128,128))