ಸಾರಾಂಶ
- ವಾಹನಗಳ ಸವಾರರು ಬೀಳುತ್ತಾ, ಏಳುತ್ತಾ ಸಾಗುವಂಥ ದುಸ್ಥಿತಿ
- - -ಚನ್ನಗಿರಿ: ಪಟ್ಟಣದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಜಿನುಗುತ್ತಿರುವ ಮಳೆಯಿಂದ ಪಟ್ಟಣದ ಬಸವೇಶ್ವರ ನಗರ, ಮುರುಘರಾಜೇಂದ್ರ ಬಡಾವಣೆ, ಚರ್ಚ್ ರಸ್ತೆ, ವಡ್ನಾಳ್ ರಾಜಣ್ಣ ಬಡಾವಣೆ, ಸಂತೆ ರಸ್ತೆ ಈ ಪ್ರದೇಶಗಳಲ್ಲಿನ ಸಂಪರ್ಕ ರಸ್ತೆಗಳು ಕೆಸರಿನಿಂದ ಕೂಡಿವೆ. ಸುರಕ್ಷಿತವಾಗಿ ಸಂಚರಿಸಲು ಬಾರದಂತಹ ಸ್ಥಿತಿ ತಲುಪಿವೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಬೀಳುತ್ತಾ, ಏಳುತ್ತಾ ಸಾಗುವಂಥ ದುಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ಕಾಮಗಾರಿ ಮೇ 20ರಿಂದಲೇ ನಡೆಯುತ್ತಿದೆ. ಬೇಸಿಗೆ ಕಾಲದಲ್ಲಿ ರಸ್ತೆ ಅಗೆದು ಪೈಪ್ ಜೋಡಣೆ ಕೆಲಸವಾಗಿದ್ದರೆ ರಸ್ತೆಗಳು ಹೀಗೆ ಕೆಸರಾಗುತ್ತಿರಲಿಲ್ಲ. ಯುಜಿಡಿಗೆ ಸಂಬಂಧಪಟ್ಟಂತೆ ಮಿಷನ್ ಹೋಲ್ ತೆಗೆಯುವುದು, ಅದನ್ನು ಮುಚ್ಚಿದ ನಂತರ ಮಿಷಿನ್ ಹೋಲ್‌ಗೆ ಮುಖ್ಯ ಪೈಪ್‌ಗಳ ಜೋಡಣೆ, ಇದಾದ ನಂತರ ಮನೆಗಳಿಗೆ ಸಂಪರ್ಕ ಕೊಡುವ ಸಣ್ಣ ಛೇಂಬರ್ ಗಳ ನಿರ್ಮಾಣ ಹೀಗೆ 7-15 ದಿನಗಳಿಗೊಮ್ಮೆ ರಸ್ತೆಗಳನ್ನು ಅಗೆಯುತ್ತ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಮಳೆಯು ಬರುತ್ತಿರುವುದರಿಂದ ಬಡಾವಣೆಗಳ ರಸ್ತೆಗಳೆಲ್ಲ ಕೆಸರಿನ ರಾಡಿಯಿಂದ ಕೂಡಿವೆ ಎಂದು ಬಸವೇಶ್ವರ ಬಡಾವಣೆ ನಿವಾಸಿಗಳಾದ ಮಲ್ಲೇಶಪ್ಪ, ರೇವಣಸಿದ್ದಪ್ಪ, ಚಂದ್ರಪ್ಪ, ಕುಮಾರಣ್ಣ, ಶಿವಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂರ್ಣ ಪ್ರಮಾಣದ ಮಳೆಗಾಲ ಆರಂಭ ಆಗುವುದರೊಳಗೆ ರಸ್ತೆ ಅಗೆಯುವ ಕೆಲಸಗಳನ್ನು ಅಧಿಕಾರಿ-ಸಿಬ್ಬಂದಿ ಪೂರ್ಣಗೊಳಿಸಿ, ಜನರಿಗೆ ನೆರವಾಗಲಿ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.- - -
-17ಕೆಸಿಎನ್‌ಜಿ2, 3.ಜೆಪಿಜಿ: ಬಸವೇಶ್ವರ ನಗರ, ಮುರುಘ ರಾಜೇಂದ್ರ ಬಡಾವಣೆ ರಸ್ತೆಗಳ ದುಸ್ಥಿತಿ.