ಕನ್ನಡಿಗರ ದೀರ್ಘ ಕಾಲದ ಹೋರಾಟದ ಫಲವೇ ಏಕೀಕೃತ ಕರ್ನಾಟಕ: ಡಾ. ತೋಂಟದ ಸಿದ್ಧರಾಮ ಶ್ರೀ

| Published : Dec 03 2024, 12:32 AM IST

ಕನ್ನಡಿಗರ ದೀರ್ಘ ಕಾಲದ ಹೋರಾಟದ ಫಲವೇ ಏಕೀಕೃತ ಕರ್ನಾಟಕ: ಡಾ. ತೋಂಟದ ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಲಿಂಗಾಯತ ಪ್ರಗತಿಶೀಲ ಸಂಘದ 2721ನೇ ಶಿವಾನುಭವದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀಗಳು ಕನ್ನಡ ಏಕೀಕರಣ ಹೋರಾಟಗಾರರನ್ನು ಸ್ಮರಿಸಿದರು.

ಗದಗ: ಕರ್ನಾಟಕದ ಏಕೀಕರಣ ಹೋರಾಟದ ಹಿಂದೆ ಅನೇಕ ಮಹಾತ್ಮರ, ಹೋರಾಟಗಾರರ ಶ್ರಮವಿದೆ. ನಾಡಿನ ಭವ್ಯ ಪರಂಪರೆ ಇತಿಹಾಸವಿದೆ. ಕನ್ನಡಿಗರ ದೀರ್ಘ ಕಾಲದ ಹೋರಾಟದ ಫಲವೇ ಕರ್ನಾಟಕ ಏಕೀಕರಣ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2721ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡ ಭಾಷೆ ಮಾತನಾಡುವ ಜನರು ಅರ್ಧದಷ್ಟು ಮೈಸೂರು ಪ್ರಾಂತ್ಯದಲ್ಲಿ, ಇನ್ನರ್ಧದಷ್ಟು ಮುಂಬೈ ಪ್ರಾಂತ್ಯದಲ್ಲಿ, ಮತ್ತೊಂದಿಷ್ಟು ಹೈದರಾಬಾದ್ ಪ್ರಾಂತ್ಯದಲ್ಲಿ ಹರಿದು ಹಂಚಿಹೋಗಿದ್ದರು. ಕನ್ನಡ ಭಾಷಿಕರ ಪ್ರದೇಶವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರು, ದೊಡ್ಡಮೇಟಿ ಅಂದಾನಪ್ಪನವರು, ಕೌತಾಳ ವೀರಪ್ಪನವರು, ಹುಯಿಲಗೋಳ ನಾರಾಯಣರಾಯರು, ಡೆಪ್ಯೂಟಿ ಚೆನ್ನಬಸಪ್ಪನವರು ಹೀಗೆ ಅನೇಕ ಮಹಾತ್ಮರು ಹೋರಾಟ ಮಾಡಿ ಕನ್ನಡ ತಲೆಯೆತ್ತಿ ನಿಲ್ಲುವಂತೆ ಮಾಡಿದರು. ಕೆಎಲ್‌ಇ ಸಂಸ್ಥೆಯ ಸಪ್ತರ್ಷಿಗಳು ಮರಾಠಿಗರ ಕಿರುಕುಳ ಸಹಿಸಿಕೊಂಡು ಕನ್ನಡ ಕಟ್ಟಿದರು. ಹಾಗೆಯೇ ಅನೇಕ ಮಠ-ಮಾನ್ಯಗಳು ಕನ್ನಡ ಉಳಿಸುವ ಕಾರ್ಯವನ್ನು ಮಾಡಿದವು. ಅದರಲ್ಲಿ ಬೆಳಗಾವಿಯ ನಾಗನೂರುಮಠ ಮುಂಚೂಣಿಯಲ್ಲಿದೆ. ಬೀದರಿನಲ್ಲಿ ಭಾಲ್ಕಿ ಪಟ್ಟದೇವರು ಹೊರಗೆ ಉರ್ದು ಶಾಲೆ ಎಂದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದರು ಎಂದು ಸ್ಮರಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರಿಯ ಕಲ್ಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಡಾ. ಜಿ.ವಿ. ಮಂಜುನಾಥ ಉಪನ್ಯಾಸ ನೀಡಿದರು. ಸಹಕಾರ ರತ್ನ ಪುರಸ್ಕಾರ ಪಡೆದ ಶಂಕರಣ್ಣ ಮುನವಳ್ಳಿ ಅವರನ್ನು ಮಠದಲ್ಲಿ ಸನ್ಮಾನಿಸಲಾಯಿತು. ಬಿವಿಬಿ ಕಾಲೇಜಿನ ಪ್ರಾಧ್ಯಾಪಕ ವಿರುಪಾಕ್ಷಯ್ಯ ಹೊಸಳ್ಳಿಮಠ ಇವರಿಂದ ಬಾನ್ಸುರಿ ವಾದನ ನಡೆಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗೀತ ಸೇವೆ ನೀಡಿದರು. ಅತಿಥಿಗಳಾಗಿ ಸಂಶಿಮಠ ಹಾಗೂ ಈಶಣ್ಣ ಮುನವಳ್ಳಿ ಆಗಮಿಸಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಮಿತಿ ಚೇರ್‌ಮನ್‌ ಐ.ಬಿ. ಬೆನಕೊಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಪರಿಚಯಿಸಿದರು, ಮಂಜುಳಾ ಹಾಸೀಲಕರ ಕಾರ್ಯಕ್ರಮ ನಿರೂಪಿಸಿದರು.