ಸಾರಾಂಶ
ಮುಂದಿನ ದಿನಗಳಲ್ಲಿ ಇನ್ನಷ್ಟು ಅಂಗನವಾಡಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯದ ಜತೆಗೆ ಇನ್ನೂಳಿದ ಸಮಾಜಸೇವೆಯ ಕಾರ್ಯ ಮಾಡುತ್ತೇವೆ
ಕುಷ್ಟಗಿ: ಪಟ್ಟಣದ ಡಂಬರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿನ 25 ಜನ ಮಕ್ಕಳಿಗೆ ಕುಷ್ಟಗಿಯ ಆರ್ಯ ವೈಶ್ಯ ವಾಸವಿ ಮಹಿಳಾ ಸಮಾಜದಿಂದ ಸಮವಸ್ತ್ರ ವಿತರಿಸಿದರು.
ವಾಸವಿ ಮಹಿಳಾ ಸಮಾಜದ ಮುಖ್ಯಸ್ಥೆ ಶಾರದಾ ಶೆಟ್ಟರ ಮಾತನಾಡಿ, ಸರ್ಕಾರ 1ನೇ ತರಗತಿಯಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಕಾರ್ಯಗಳು ನಡೆಯುತ್ತಿದ್ದು, ಜತೆಗೆ ಅಂಗನವಾಡಿಯಲ್ಲಿನ ಮಕ್ಕಳಿಗೂ ಸಮವಸ್ತ್ರ ವಿತರಣೆಯ ನಿರ್ಧಾರ ಮಾಡಬೇಕು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಹಾಕಿಕೊಂಡು ಮಕ್ಕಳು ಶಾಲೆಗೆ ಬರುತ್ತಿರುವ ಪರಿಣಾಮವಾಗಿ ಅವರಲ್ಲಿ ನಾವೆಲ್ಲ ಒಂದು ಎಂಬ ಮನೋಭಾವನೆ ಮೂಡುತ್ತಿದೆ ಆದ್ದರಿಂದ ಇಲ್ಲಿಯ ಮಕ್ಕಳಿಗೂ ಸಮವಸ್ತ್ರ ವಿತರಣೆ ಮಾಡಿದರೆ ಇಲ್ಲಿಯ ಮಕ್ಕಳು ನಾವೆಲ್ಲ ಒಂದು ಎಂಬ ಮನೋಭಾವನೆ, ಶಿಸ್ತು, ಸಂಯಮದಿಂದ ಅಭ್ಯಾಸ ಮಾಡಲು ಅನುಕೂಲ ಎಂದರು.
ಇಂದು ನಮ್ಮ ಸಮಾಜದಿಂದ ಕೈಲಾದಷ್ಟು ಮಟ್ಟಿಗೆ ಸಹಕಾರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂಗನವಾಡಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯದ ಜತೆಗೆ ಇನ್ನೂಳಿದ ಸಮಾಜಸೇವೆಯ ಕಾರ್ಯ ಮಾಡುತ್ತೇವೆ ಎಂದರು.ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಮಾತನಾಡಿ, ವಾಸವಿ ಮಹಿಳಾ ಸಮಾಜದವರು ನಮ್ಮ ಶಾಲೆಯ ಮಕ್ಕಳಿಗೆ ಸಮವಸ್ತ್ರ ನೀಡಿರುವ ಕಾರ್ಯವೂ ಶ್ಲಾಘನೀಯವಾಗಿದ್ದು, ಇದೆ ರೀತಿ ದಾನಿಗಳ ಮೂಲಕ ಎಲ್ಲ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರಗಳು ದೊರೆತರೆ ಅಂಗನವಾಡಿಗಳು ಅಭಿವೃದ್ಧಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಮಾಜದ ನಿರ್ದೇಶಕಿ ಶಾರದಾ ಕಂದಕೂರ್, ಚಿತ್ರಾ ಕಂದಕೂರ, ವರ್ಣ ಕೋರಾ, ಮೇಘನಾ ತೆಮ್ಮಿನಾಳ, ರೋಜಾ ಕಂದಕೂರ, ಶೋಭಾ ಇಲ್ಲೂರ್, ಭಾಗ್ಯ ಅರಳಿಹಳ್ಳಿ, ಶುಭಾ ಶೆಟ್ಟರ, ಗಿರಿಜಾ ಅರಳಿಹಳ್ಳಿ, ಸವಿತಾ ಖ್ಯಾಡೇದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.