ಧಾರವಾಡ:
ಈ ದಂಪತಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸರ್ಕಾರದ ಸಹಾಯಧನದಲ್ಲಿ ಅಕ್ಕ ಕ್ಯಾಂಟೀನ್ ನಡೆಸುತ್ತಿದ್ದು, ದಾನದ ರೂಪದಲ್ಲಿ ಬಂದ ಲಾಭವನ್ನು ಸಮಾಜಕ್ಕೆ ಮರಳಿಸುತ್ತಿದ್ದಾರೆ. ಇದೀಗ ಮತ್ತೊಂದು ಉತ್ಕೃಷ್ಟ ಕಾರ್ಯ ಮಾಡಿದ್ದಾರೆ.ಕುಂದಗೋಳ ತಾಲೂಕಿನ ಮಂಜುನಾಥ ಮತ್ತು ರಾಜೇಶ್ವರಿ ದಂಪತಿ ಈ ಮೊದಲಿನಿಂದಲೂ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದು, ಅಕ್ಕ ಕ್ಯಾಂಟೀನ್ ನಂತರವಂತೂ ಅದರ ಲಾಭವನ್ನು ಬಡ ಮಕ್ಕಳಿಗೆ ವಿತರಿಸುತ್ತಿದ್ದಾರೆ. ಖಾಸಗಿ ಶಾಲಾ ಮಕ್ಕಳಿಗೆ ಪಾಲಕರು ಶಾಲಾವಸ್ತ್ರ ಕೊಡಿಸುತ್ತಾರೆ. ಆದರೆ, ಸರ್ಕಾರದಿಂದ ಇತ್ತೀಚೆಗೆ ಆರಂಭಿಸಿರುವ ಎಲ್‌ಕೆಜಿ-ಯುಕೆಜಿ ಶಾಲಾ ಮಕ್ಕಳಿಗೂ ಈ ಭಾಗ್ಯ ದೊರೆಯಲಿ ಎಂದು ಮಾಳಮಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ್ದಾರೆ.
ಈ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಸ್ಚತಃ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಆಗಮಿಸಿ ಮಂಜುನಾಥ-ರಾಜೇಶ್ವರ ದಂಪತಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಿಂದ ಪಡೆದ ಲಾಭವನ್ನು ಮರಳಿ ಸಮಾಜಕ್ಕೆ ಕೊಡುವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ಈ ದಂಪತಿ ಬಂದ ಲಾಭವನ್ನು ಮರಳಿ ಸಮಾಜಕ್ಕೆ ವಿವಿಧ ರೂಪದಲ್ಲಿ ನೀಡುತ್ತಿರುವ ಕಾರ್ಯ ಮತ್ತೊಬ್ಬರಿಗೆ ಮಾದರಿ ಎಂದರು.