ಕೇಂದ್ರ ಬಜೆಟ್‌: ಉ.ಕ. ಭಾಗದ ಹಲವು ನಿರೀಕ್ಷೆ!

| Published : Feb 01 2024, 02:02 AM IST

ಸಾರಾಂಶ

ಈಗ ಮೊದಲಿಗಿಂತ ರೈಲ್ವೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಕೆಲ ಮಾರ್ಗಗಳಿಗೆ ಮಂಜೂರಾತಿ ದೊರೆತಿದೆ. ಇನ್ನೂ ಕೆಲವು ಈಗಲೂ ಬರೀ ಸಮೀಕ್ಷೆಗಳಲ್ಲೇ ಗಿರಕಿ ಹೊಡೆಯುತ್ತಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್‌ ಕೂಡ ಇದರಲ್ಲೇ ಬರುವುದರಿಂದ ಸಾಕಷ್ಟು ನಿರೀಕ್ಷೆಗಳು ಉತ್ತರ ಕರ್ನಾಟಕ ವ್ಯಾಪ್ತಿಯ ಜನರದ್ದು.

ರೈಲ್ವೆ ಕಾಮಗಾರಿ, ರೈಲ್ವೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಕಾಲೇಜ್‌, ವಿಶೇಷ ರೈಲುಗಳೆಂಬುದನ್ನು ರದ್ದುಪಡಿಸಲಿ ಸೇರಿದಂತೆ ಹಲವು ನಿರೀಕ್ಷೆ ಜನತೆಯದ್ದು.

ಹಾಗೇ ನೋಡಿದರೆ ಈಗ ಮೊದಲಿಗಿಂತ ರೈಲ್ವೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಆದರೂ ತಾಳಗುಪ್ಪ- ಶಿರಸಿ- ಹುಬ್ಬಳ್ಳಿ, ಧಾರವಾಡ -ಬೆಳಗಾವಿ, ತುಮಕೂರ-ದಾವಣಗೆರೆ ಮಾರ್ಗಗಳಿಗೆ ಮಂಜೂರಾತಿ ದೊರೆತಿವೆ. ಈಗಲೂ ಬರೀ ಸಮೀಕ್ಷೆಗಳಲ್ಲೇ ಗಿರಕಿ ಹೊಡೆಯುತ್ತಿವೆ. ಕೆಲಸ ಮಾತ್ರ ಈವರೆಗೂ ಪ್ರಾರಂಭವಾಗುತ್ತಿಲ್ಲ. ಹಳೇ ಕಾಮಗಾರಿಗಳಾದ ಬಾಗಲಕೋಟೆ- ಕುಡಚಿ ಮಾರ್ಗ, ಗಿಣಗೇರ- ರಾಯಚೂರು, ಕಡೂರು- ಸಂಕಲೇಶಪುರ, ಗದಗ- ವಾಡಿ ಕೆಲಸಗಳು ವರ್ಷಗಳಿಂದಲೇ ಬರೀ ಕುಂಟುತ್ತಲೇ ಸಾಗಿವೆ. ಹೊಸ ಮಾರ್ಗಗಳ ಕೆಲಸಗಳು ಬೇಗನೇ ಶುರುವಾಗಬೇಕು. ಹಳೆ ಕೆಲಸ ಬೇಗನೆ ಮುಕ್ತಾಯವಾಗಬೇಕು. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು.

ಡಿಪ್ಲೋಮಾ ಕಾಲೇಜ್‌ ಏನಾಯ್ತು?

ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಿದ್ದಾಗ 2011-12ರ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ದೇಶದ ಆರು ಕಡೆಗಳಲ್ಲಿ ರೈಲ್ವೆ ಎಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಕಾಲೇಜ್‌ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದು ಬರೀ ಘೋಷಣೆಯಾಗಿಯೇ ಉಳಿದಿದೆ. ಕಾಲೇಜ್‌ ಶುರುವಾಗಿಲ್ಲ. ಹುಬ್ಬಳ್ಳಿಯ ಎಂಟಿಎಸ್‌ ಕಾಲನಿಯಲ್ಲಿ ರೈಲ್ವೆ ಇಲಾಖೆಯ 13 ಎಕರೆ ಜಾಗೆಯಲ್ಲಿ ರೈಲ್ವೆ ಎಂಜಿನಿಯರಿಂಗ್‌ ಡಿಪ್ಲೋಮಾ ಕಾಲೇಜ್‌ ಸ್ಥಾಪಿಸಬೇಕು. ಇದರಿಂದ ಈ ಭಾಗದ ಯುವಕರ ಕೌಶಲ್ಯ ಹೆಚ್ಚಿಸಲು ಸಹಾಯ ಕೂಡ ಆಗುತ್ತದೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸಬೇಕು ಎಂಬ ಬೇಡಿಕೆ ಪ್ರಜ್ಞಾವಂತರದ್ದು.

ವಂದೇ ಭಾರತ ರೈಲು

ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚರಿಸುತ್ತಿದೆ. ಬೆಂಗಳೂರಿನಿಂದ ಬೆಳಗ್ಗೆ ಬರುವ ಈ ರೈಲು ಮಧ್ಯಾಹ್ನ ಧಾರವಾಡದಿಂದ ಹೊರಡುತ್ತದೆ. ಇದರೊಂದಿಗೆ ಬೆಳಗಾವಿ- ಬೆಂಗಳೂರು ಮಧ್ಯೆ ವಂದೇ ಭಾರತ ಹೊಸ ರೈಲು ಸಂಚರಿಸುವಂತಾಗಬೇಕು. ಬೆಳಗ್ಗೆ ಬೆಳಗಾವಿಯಿಂದ ಮಧ್ಯಾಹ್ನ ಬೆಂಗಳೂರಿನಿಂದ ಬಿಡುವಂತಾಗಬೇಕು. ಈಗ ಧಾರವಾಡದಿಂದ ಸಂಚರಿಸುತ್ತಿರುವ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಬೇಕು. ಇದರಿಂದ ಈ ಭಾಗದ ಜನರಿಗೆ ಬೆಳಗ್ಗೆ - ಮಧ್ಯಾಹ್ನ ಎರಡು ಸಮಯದಲ್ಲೂ ವಂದೇ ಭಾರತ ರೈಲು ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯ ಬೆಳಗಾವಿ ಭಾಗದ ಪ್ರಯಾಣಿಕರದ್ದು.

ವಿಶೇಷ ರೈಲು ನಾಮಕರಣ ಬೇಡ

ಕೊರೋನಾ ಬಳಿಕ ಎಲ್ಲ ರೈಲುಗಳನ್ನು ವಿಶೇಷ ರೈಲುಗಳೆಂದೇ ಹೆಸರಿಸಿ ಓಡಿಸಲಾಗುತ್ತಿದೆ. ವಿಶೇಷ ರೈಲು ಎಂದರೆ ಸೂಪರ್‌ ಫಾಸ್ಟ್‌ ಅಥವಾ ಎಕ್ಸ್‌ಪ್ರೆಸ್‌ ರೈಲುಗಳ ದರ ನೀಡಬೇಕಾಗುತ್ತದೆ. ಈ ರೀತಿ ವಿಶೇಷ ರೈಲು ಎಂದು ಹೆಸರಿಸಿ ಓಡಿಸುವ ಅವಕಾಶ ಆರು ತಿಂಗಳು ಕಾಲ ಮಾತ್ರ ಇದೆ ಎಂಬ ನಿಯಮ ಇದೆ. ಹಾಗಂತ ಇದನ್ನು ವಿಸ್ತರಿಸಲು ಬರುವುದಿಲ್ಲ ಅಂತೇನೂ ಇಲ್ಲ. ಪ್ರತಿ 6 ತಿಂಗಳಿಗೊಮ್ಮೆ ಇದರ ಅವಧಿ ವಿಸ್ತರಿಸಬಹುದಾಗಿದೆ. 3 ವರ್ಷಗಳಿಂದ ರೈಲ್ವೆ ಇಲಾಖೆ ಇದನ್ನೇ ಮಾಡುತ್ತಿದೆ. ಸಾಮಾನ್ಯ ರೈಲುಗಳ ದರಕ್ಕಿಂತ ಶೇ. 30- 40ರಷ್ಟು ಈ ಸ್ಪೆಷಲ್‌ ರೈಲುಗಳ ದರ ಹೆಚ್ಚಾಗುತ್ತಿದೆ. ಉದಾಹರಣೆಗೆ ಮೊದಲು ಕೊಪ್ಪಳಕ್ಕೆ ಪ್ಯಾಸೆಂಜರ್‌ ರೈಲಿನಲ್ಲಿ ಪ್ರಯಾಣಿಸಬೇಕೆಂದರೆ ₹25 ಆಗುತ್ತಿದ್ದ ದರ ಇದೀಗ ₹40- 45ಕ್ಕೆ ಆಗುತ್ತಿದೆ. ಏಕೆಂದರೆ ಈ ರೈಲನ್ನು ಪ್ಯಾಸೆಂಜರ್‌ ಸ್ಪೆಷಲ್‌ ಎಂದು ಓಡಿಸಲಾಗುತ್ತಿದೆ. ರೈಲುಗಳಿಗೆ ಹೆಸರಿಸಲಾಗಿರುವ ಸ್ಪೆಷಲ್‌ ಎಂಬುದನ್ನು ತೆಗೆದುಹಾಕಿ ಮೊದಲಿನಂತೆ ಕ್ರಮಬದ್ಧಗೊಳಿಸಿ ಓಡಿಸಬೇಕು. ದರದಲ್ಲಿ ಇಳಿಕೆಯಾಗಿ ಬಡ ಜನರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಜನರದ್ದು.

ಕಲಬುರಗಿ ವಿಭಾಗವಾಗಲಿ

ಸದ್ಯ ಸೊಲ್ಲಾಪುರ ವಿಭಾಗಕ್ಕೆ ಸೇರುವ ಕಲ್ಯಾಣ ಕರ್ನಾಟಕದ ಕಲಬುರಗಿ, ಸಿಕಂದರಬಾದ್‌ ವಿಭಾಗಕ್ಕೆ ಬೀದರ, ಗುಂತಕಲ್‌ ವಿಭಾಗಕ್ಕೆ ಸೇರುವ ರಾಯಚೂರ, ಯಾದಗಿರಿ ರೈಲ್ವೆ ನಿಲ್ದಾಣಗಳನ್ನು ಸೇರಿಸಿ ಕಲಬುರಗಿ ವಿಭಾಗವನ್ನು ಪ್ರತ್ಯೇಕವಾಗಿಸಬೇಕು. ಅದನ್ನು ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯೊಳಗೆ ಸೇರಿಸಬೇಕು ಎಂಬ ಬೇಡಿಕೆ ಜನರದ್ದು.

ಈ ಎಲ್ಲ ನಿರೀಕ್ಷೆಗಳನ್ನು ಈ ಬಜೆಟ್‌ನಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಬೇಡಿಕೆ. ಎಷ್ಟು ಈಡೇರುತ್ತವೆಯೋ ಕಾಯ್ದು ನೋಡಬೇಕಷ್ಟೇ.

ಈ ಕುರಿತು ಮಾತನಾಡಿರುವ ರೈಲ್ವೆ ಬಳಕೆದಾರರ ಸಲಹೆಗಾರರ ಸಂಘದ ಸದಸ್ಯ, ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ರೈಲ್ವೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಕಾಲೇಜ್‌ ಸ್ಥಾಪಿಸುವುದಾಗಿ 2011ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆ ಕೆಲಸ ಈವರೆಗೂ ಆಗಿಲ್ಲ. ಎಂಟಿಎಸ್‌ ಕಾಲನಿಯಲ್ಲಿನ ಇಲಾಖೆ ಜಾಗೆಯಲ್ಲಿ ಸ್ಥಾಪಿಸಬೇಕು. ಇಲ್ಲವೇ ಸುಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಕಲ್ಯಾಣ ಕರ್ನಾಟಕದ ಸ್ಟೇಷನ್‌ಗಳನ್ನೊಳಗೊಂಡ ಕಲಬುರಗಿ ವಿಭಾಗ ಪ್ರತ್ಯೇಕ ಮಾಡಿ ನೈರುತ್ಯ ವಲಯಕ್ಕೆ ಸೇರಿಸಬೇಕು. ವಿಶೇಷ ರೈಲುಗಳೆಂಬ ನಾಮಕರಣ ತೆಗೆದುಹಾಕಿ ಮೊದಲಿನಂತೆ ರೈಲುಗಳನ್ನು ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.