ಸಾರಾಂಶ
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಗೀತಾಮಂದಿರ ಪರಿಸರದಿಂದ ರಥಬೀದಿ ಸಂಪರ್ಕಿಸುವ ಸುಮಾರು 1 ಕೋಟಿ ರು. ವೆಚ್ಚದ ಸುವರ್ಣಪಥ ಮೇಲ್ಸೇತುವೆ ಕಾಮಗಾರಿಗೆ ಶನಿವಾರ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಗೀತಾಮಂದಿರ ಪರಿಸರದಿಂದ ರಥಬೀದಿ ಸಂಪರ್ಕಿಸುವ ಸುಮಾರು 1 ಕೋಟಿ ರು. ವೆಚ್ಚದ ಸುವರ್ಣಪಥ ಮೇಲ್ಸೇತುವೆ ಕಾಮಗಾರಿಗೆ ಶನಿವಾರ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೋಶಿ, ಪುತ್ತಿಗೆ ಶ್ರೀಪಾದರು ವಿಶ್ವದಾದ್ಯಂತ ಸ್ಥಾಪಿಸಿರುವ ಮಠಗಳಿಂದ ನಿರಂತರವಾಗಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತು ಈ ದೇಶದ ಮುಖ್ಯ ಗ್ರಂಥವಾದ ಭಗವದ್ಗೀತಾ ಪ್ರಚಾರದ ಉದ್ದೇಶದಿಂದ ಪೂಜ್ಯರು ನಡೆಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಆಂದೋಲನವನ್ನು ಪ್ರಶಂಸಿಸಿದರು. ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪ್ರಹ್ಲಾದ ಜೋಶಿ ಅವರನ್ನು ಆದರ್ಶ ರಾಜಕಾರಣಿ ಕಳಂಕ ರಹಿತ ರಾಜಕಾರಣಿ ಎಂದು ಪ್ರಶಂಸಿಸಿ ಸನ್ಮಾನಿಸಿದರು ಹಾಗೂ ಜೋಷಿ ದಂಪತಿಗಳಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿದರು.ಸಭೆಯಲ್ಲಿ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ನಾರಾಯಣ ಗಂಭೀರ್, ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಎಂ. ಪ್ರಸನ್ನ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.