ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ-ಬೆಳಗಾವಿ ಹೆದ್ದಾರಿಯನ್ನು ಆರು ಪಥ ಮಾರ್ಗವಾಗಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಬರೆದಿದ್ದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜ.15ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸುನೀಲಗೌಡ ಪಾಟೀಲ, ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗಿನ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದ್ದು, ಸುರಕ್ಷತೆಯ ಜೊತೆಗೆ ಸಂಚಾರದ ಸಮಯವೂ ತಗ್ಗಲಿದೆ. ಜೊತೆಗೆ ಆರ್ಥಿಕ ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಗಳ ಜೊತೆ ವಾಣಿಜ್ಯ ವ್ಯವಹಾರವೂ ವೃದ್ಧಿಸಿ ಪ್ರವಾಸೋದ್ಯಮದ ಅವಕಾಶವು ಹೆಚ್ಚಲಿದೆ. ಉದ್ಯೋಗ ಸೃಷ್ಠಿ, ಯುವಕರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಳ, ಹೊಸ ಕೈಗಾರಿಕೆಗಳ ಸ್ಥಾಪನೆ, ಆರೋಗ್ಯ, ಶಿಕ್ಷಣ ಮತ್ತೀತರ ಕ್ಷೇತ್ರಗಳಿಗೂ ಇದರಿಂದ ಲಾಭವಾಗಲಿದೆ ಎಂದು ಶಾಸಕರು ಪತ್ರದಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು.ಸಚಿವ ನಿತೀನ ಗಡ್ಕರಿ ಉತ್ತರಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಸುನೀಲಗೌಡ ಪಾಟೀಲ, ಸಚಿವರು ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಗಳನ್ನು ಶೀಘ್ರ ಆರು ಪಥಗಳ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.