ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರ ಭೇಟಿ

| Published : Aug 30 2024, 01:02 AM IST

ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಘೋಷಿತವಾದ ₹5300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸೆಪ್ಟಂಬರ್ ತಿಂಗಳ ಮೊದಲ ವಾರ ಕೇಂದ್ರ ಜಲಶಕ್ತಿ ಸಚಿವ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದೆಂದು ಸಂಸದ ಗೋವಿಂದ ಕಾರಜೋಳ ಭರವಸೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಘೋಷಿತವಾದ ₹5300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸೆಪ್ಟಂಬರ್ ತಿಂಗಳ ಮೊದಲ ವಾರ ಕೇಂದ್ರ ಜಲಶಕ್ತಿ ಸಚಿವ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದೆಂದು ಸಂಸದ ಗೋವಿಂದ ಕಾರಜೋಳ ಭರವಸೆ ನೀಡಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾದ "ಎದ್ದೇಳು ಜನಸೇವಕ- ತಮಟೆ ಚಳವಳಿ " ನಿರತರನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡಾ ಭೇಟಿ ಮಾಡಿ ಚರ್ಚಿಸಲಾಗುವುದು. ರಾಜ್ಯ ಸರ್ಕಾರ ತುರ್ತಾಗಿ ಗುತ್ತಿಗೆದಾರರ ಬಾಕಿ ಮೊತ್ತ ಪಾವತಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಇದುವರೆಗೂ ಆಳಿದ ಸರ್ಕಾರಗಳು ಕಾವೇರಿಗೆ ನೀಡಿದಷ್ಟು ಆದ್ಯತೆ ಕೃಷ್ಣೆಗೆ ನೀಡಿಲ್ಲ. ಈ ತಾರತಮ್ಯ ನಿವಾರಣೆಯಾಗಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆದಾಗ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿದ್ದರು. ಭದ್ರಾ ಮೇಲ್ದಂಡೆಗೆ ₹3100 ಕೋಟಿ ನೀಡಿದ್ದರು. ಭದ್ರಾ ಮೇಲ್ದಂಡೆಗೆ ಇದುವರೆಗೂ ₹9500 ಕೋಟಿ ಖರ್ಚಾಗಿದ್ದು ಇದರಲ್ಲಿ ಐದುವರೆ ಸಾವಿರ ಕೋಟಿ ರುಪಾಯಿಯಷ್ಟು ದೊಡ್ಡ ಮೊತ್ತವನ್ನು ಬಿಜೆಪಿ ಸರ್ಕಾರ ನೀಡಿದೆ. ಉಳಿದ ಸರ್ಕಾರಗಳು ಈ ವಿಷಯದಲ್ಲಿ ಬದ್ಧತೆ ಪ್ರದರ್ಶಿಸಿಲ್ಲವೆಂದು ಆಪಾದಿಸಿದರು.ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಒಯ್ದು ಜಲಶಕ್ತಿ ಸಚಿವರ ಕಂಡು ಎಲ್ಲ ಕಮಿಟಿಗಳ ಕ್ಲಿಯರೆನ್ಸ್ ಮಾಡಿ, ಕೇಂದ್ರ ಬಜೆಟ್ ಮುಂದೆ ಕಡತ ಮಂಡಿಸಲಾಗಿತ್ತು. ಈ ಕಾರಣಕ್ಕೆ 2023-24 ರ ಕೇಂದ್ರ ಬಜೆಟ್ ನಲ್ಲಿ ₹5300 ಕೋಟಿ ಅನುದಾನ ಕಾಯ್ದರಿಸಿಲಾಗಿತ್ತು ಎಂದರು.

ಅನುದಾನ ಪಡೆಯಲು ಕೇಂದ್ರ ಕೆಲ ತಾಂತ್ರಿಕ ಕಾರಣ ಮುಂದಿಟ್ಟಿದೆ. ಈ ವಿಚಾರವಾಗಿ ಪ್ರತ್ಯೇಕ ಖಾತೆ ತೆರೆಯುವಂತೆ ಸೂಚಿಸಿದೆ. ಮುಂದಿನ ವಾರ ಸಿಎ ಹಾಗೂ ಕೇಂದ್ರ ಜಲ ಶಕ್ತಿಸಚಿವರ ಜತೆ ಮಾತನಾಡಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ನೀರಾವರಿ ಹೋರಾಟದ ಜತೆ ತಾನೂ ದನಿಗೂಡಿಸುವುದಾಗಿ ಹೇಳಿದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಕಾರಣ, ಅವರು ಕೆಲಸ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಈಗಾಗಲೇ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಗೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ. ಗುತ್ತಿಗೆದಾರರ ಉಳಿಸಿಕೊಳ್ಳುವ ಪ್ರಯತ್ನಗಳು ಕಾಣಿಸುತ್ತಿಲ್ಲ. ಹಾಗೇನಾದರೂ ಅವರು ಕೆಲಸ ನಿಲ್ಲಿಸಿ ಹೋದಲ್ಲಿ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗುತ್ತದೆ. ಗುತ್ತಿಗೆದಾರರ ತಡೆಯುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಲಿ ಎಂದರು.ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂರು ತಿಂಗಳ ಹಿಂದೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದರೂ ಪ್ರಯೋಜನ ಇಲ್ಲ. ಎರಡು ಸಾವಿರ ಕೋಟಿ ರುಪಾಯಿ ಬಿಲ್ ಬಾಕಿ ಇರುವುದರಿಂದ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಎತ್ತಿನ ಹೊಳೆ ಯೋಜನೆಗೆ ನೀಡಿದ ಪ್ರಾಧಾನ್ಯತೆಯನ್ನು ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ನೀಡುತ್ತಿಲ್ಲವೆಂದರು. ಸಿಪಿಐ ಮುಖಂಡ ಸುರೇಶ್ ಬಾಬು ಮಾತನಾಡಿ, ಭದ್ರಾ ಕಾಮಗಾರಿ ಆರಂಭವಾಗಿ 17 ವರ್ಷಗಳಾಗಿದ್ದು ಇದುರೆಗೂ ಪೂರ್ಣಗೊಂಡಿಲ್ಲ. ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕೆಂದರು.ಸರ್ವೋದಯ ಕರ್ನಾಟಕದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ ಆಳುವ ಸರ್ಕಾರಗಳು ಮೋಸ ಮಾಡಿಕೊಂಡೇ ಬಂದಿವೆ. ಕಾವೇರಿ ಕೊಳ್ಳದ ಯೋಜನೆಗಳಿಗೆ ಕೊಟ್ಟಷ್ಟು ಗಮನ ಭದ್ರಾ ಮೇಲ್ದಂಡೆಗೆ ಕೊಡುತ್ತಿಲ್ಲ. ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ಜನ ನೋವು ಅನುಭವಿಸುವಂತಾಗಿದೆ ಎಂದರು.ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಇದುವರೆಗೂ ಸುಳ್ಳು ಭರವಸೆಯಲ್ಲಿಯೇ ದಿನಗಳ ನೂಕುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಯಾರಿಗೂ ಆಸಕ್ತಿ ಇಲ್ಲ. ನಾನು ಯುವಕನಾಗಿದ್ದಾಗ ಆರಂಭವಾದ ಚಳವಳಿ ಮೊಮ್ಮಕ್ಕಳಾದ ಮೇಲೂ ನೀರು ಬಂದಿಲ್ಲ. ರಾಜಕಾರಣದ ಅವಮಾನಕರ ಸಂಗತಿ ಇದು ಎಂದರು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಕಾರ್ಯಾಧ್ಯಕ್ಷ ಹೊರಕೇರಪ್ಪ, ಕರುನಾಡು ಸೇನೆಯ ಶಿವಕುಮಾರ್, ಸಿಪಿಐನ ಶಿವರುದ್ರಪ್ಪ, ದೊಡ್ಡಉಳ್ಳಾರ್ತಿ ಕರಿಯಣ್ಣ, ಸತ್ಯಕೀರ್ತಿ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಚೇತನ ಯಳನಾಡು, ಜಾನುಕೊಂಡ ತಿಪ್ಪೇಸ್ವಾಮಿ, ಸಿದ್ದೇಶ್ ಜಾನುಕೊಂಡ, ತಾಲೂಕು ಅಧ್ಯಕ್ಷ ಇಸಾಮುದ್ರ ಪ್ರಭು, ಮುದ್ದಾಪುರ ನಾಗಣ್ಣ, ರಂಗೇಗೌಡ, ಚಿಕ್ಕಪ್ಪನಹಳ್ಳಿ ರವಿ ಕುಮಾರ್, ಚಿದಾನಂದ, ಶೇಖರ್, ಲಕ್ಷ್ಮಣರೆಡ್ಡಿ, ಸಾವಿತ್ರ,ಮ್ಮ, ವಿನೋದ, ಕೌಸರ್, ಅಮಿನಾಬಿ, ಸುಜಾತ, ಆಶಾ ತಮಟೆ ಚಳವಳಿಯಲ್ಲಿ ಪಾಲ್ಗೊಂಡಿದ್ದರು.