ಮೈಸೂರು ಪೂರ್ವ ವಲಯ ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ

| Published : Nov 28 2024, 12:35 AM IST

ಸಾರಾಂಶ

ದಿನಕಳೆದಂತೆ ಮೈಸೂರು ನಗರದ ವಿಸ್ತೀರ್ಣ ಹೆಚ್ಚುತ್ತಿದ್ದು, ಜನವಸತಿ ಪ್ರದೇಶಗಳು ಕೂಡ ನಿರೀಕ್ಷೆಗೂ ಮೀರಿ ನೆಲೆಗೊಂಡಿವೆ

ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯವರೇ ಆಗಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಮೈಸೂರು ಪೂರ್ವವಲಯ ಬಡಾವಣೆಗಳ ಒಕ್ಕೂಟ ಆಗ್ರಹಿಸಿದೆ.ರಾಜ್ಯದ ಬೆಳೆಯುತ್ತಿರುವ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮೈಸೂರಿಗೆ ಸಾಂಸ್ಕೃತಿಕ, ಪಾರಂಪರಿಕ ಹಾಗೂ ನಿವೃತ್ತರ ನಗರ ಎಂಬ ಖ್ಯಾತಿ ಇದ್ದರೂ ಸಮಸ್ಯೆಗಳಿಂದ ಹೊರತಾಗಿಲ್ಲವಾದ್ದರಿಂದ ಮುಖ್ಯಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಿಸಿ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಎ.ಎಂ. ಬಾಬು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ದಿನಕಳೆದಂತೆ ಮೈಸೂರು ನಗರದ ವಿಸ್ತೀರ್ಣ ಹೆಚ್ಚುತ್ತಿದ್ದು, ಜನವಸತಿ ಪ್ರದೇಶಗಳು ಕೂಡ ನಿರೀಕ್ಷೆಗೂ ಮೀರಿ ನೆಲೆಗೊಂಡಿವೆ. ಇಂತಹ ಹೊತ್ತಿನಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದಲ್ಲಿ ಮೈಸೂರು ಕನಸಿನ ನಗರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸಲುವಾಗಿಯೇ ಮೈಸೂರು ಪೂರ್ವವಲಯ ಬಡಾವಣೆಗಳ ಒಕ್ಕೂಟ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ನಗರಕ್ಕೆ ಅಗತ್ಯವಿರುವ ಯೋಜನೆಗಳ ಅನುಷ್ಠಾನ ಸಂಬಂಧ ಮನವಿ ಸಲ್ಲಿಸಿದ್ದರೂ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ ಎಂದು ಹೇಳಿದರು.ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ ವ್ಯಾಪ್ತಿಯಲ್ಲಿ 27 ಬಡಾವಣೆಗಳಿದ್ದು, ನಿತ್ಯ ಒಂದಿಲ್ಲೊಂದು ಸಮಸ್ಯೆಗಳಿಂದ ನರಳುತ್ತಿವೆ. ಆದ್ದರಿಂದ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಈ ಬಡಾವಣೆಗಳಿಗೆ ಆದ್ಯತಾನುಸಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಅವರು ಮನವಿ ಮಾಡಿದರು.ನಮ್ಮ ಬಡಾವಣೆಗಳ ನಿವಾಸಿಗಳು ವ್ಯಾಪಕ ಪ್ರಮಾಣದ ಗಡುಸು ನೀರು ಸೇವಿಸುತ್ತಿರುವುದರಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ತ್ವರಿತವಾಗಿ ಕಾವೇರಿ ಅಥವಾ ಕಬಿನಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.ಬಡಾವಣೆಗಳ ನಿರ್ಮಾಣದ ವೇಳೆ ಇದ್ದ ರಾಜಕಾಲುವೆಗಳು ಕಸದಿಂದ ತುಂಬಿರುವುದು ಒಂದೆಡೆಯಾದರೆ, ಕೆಲ ಆಸೆಕೋರರಿಂದ ಒತ್ತುವರಿ ಆಗಿವೆ. ಅವುಗಳ ತೆರವು ಕಾರ್ಯರ ಆಗಬೇಕು ಎಂದು ಆಗ್ರಹಿಸಿದರು.ಈಗಾಗಲೇ ಅನುಷ್ಠಾಗೊಂಡಿರುವ ಯೋಜನೆಗಳು ಆಮೆ ವೇಗದಲ್ಲಿ ಸಾಗುತ್ತಿದ್ದು, ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು. ಅಮೃತ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯನ್ನು ಒಕ್ಕೂಟ ವ್ಯಾಪ್ತಿಯ ಬಡಾವಣೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಆರ್. ನರಸಿಂಹಯ್ಯ, ಶಿವಕುಮಾರಸ್ವಾಮಿ, ಸಿದ್ದು, ಡಿ.ಆರ್. ಜಯಸ್ವಾಮಿ, ಸಿದ್ದರಾಜೇಗೌಡ, ಬೊಮ್ಮೇಗೌಡ, ಶಿವಣ್ಣ, ಥಾಮಸ್ ಇದ್ದರು.