ಒಬ್ಬರ ಸ್ವಾರ್ಥಕ್ಕಾಗಿ ದೇವರನ್ನು ಪ್ರಾರ್ಥಿಸುವುದಕ್ಕಿಂತ ಸಮಾಜದ ಪ್ರತಿಯೊಬ್ಬರೂ ಒಗ್ಗೂಡಿ ಭಗವಂತನನ್ನು ಸ್ಮರಿಸಿದಾಗ ಇಡೀ ಸಮಾಜಕ್ಕೆ ಒಳಿತಾಗುತ್ತದೆ ಎಂದು ತೇವಡೆಹಳ್ಳಿ ಮಠದ ಶ್ರೀಗೋಸಲ ಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಒಬ್ಬರ ಸ್ವಾರ್ಥಕ್ಕಾಗಿ ದೇವರನ್ನು ಪ್ರಾರ್ಥಿಸುವುದಕ್ಕಿಂತ ಸಮಾಜದ ಪ್ರತಿಯೊಬ್ಬರೂ ಒಗ್ಗೂಡಿ ಭಗವಂತನನ್ನು ಸ್ಮರಿಸಿದಾಗ ಇಡೀ ಸಮಾಜಕ್ಕೆ ಒಳಿತಾಗುತ್ತದೆ ಎಂದು ತೇವಡೆಹಳ್ಳಿ ಮಠದ ಶ್ರೀಗೋಸಲ ಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.ಗುಬ್ಬಿ ತಾಲೂಕಿನ ಹೊಸಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಓಬಳ ನರಸಿಂಹಸ್ವಾಮಿ ದೇವಾಲಯದ ನೂತನ ಉತ್ಸವಮೂರ್ತಿ ಹಾಗೂ ನೂತನ ಹರಿಗೆಗಳ ಚರಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭಗವಂತನ ಸ್ಮರಣೆ ಎಂದರೆ ಕೇವಲ ಮಂತ್ರ ಪಠಣವಲ್ಲ. ಉತ್ತಮ ಆಲೋಚನೆ, ಸತ್ಯದ ಕಾಯಕ ಮತ್ತು ಪರೋಪಕಾರದ ಮೂಲಕ ದೇವರನ್ನು ಕಾಣಬೇಕು. ಇಂತಹ ಸದ್ಗುಣಗಳು ಎಲ್ಲರಲ್ಲಿಯೂ ಬೆಳೆದಾಗ ಮಾತ್ರ ಸಮಾಜವು ತಾನಾಗಿಯೇ ಸುರಕ್ಷಿತವಾಗುತ್ತದೆ. ಎಲ್ಲರೂ ಒಂದೇ ಮನಸ್ಸಿನಿಂದ ಭಗವಂತನನ್ನು ಸ್ಮರಿಸಿದಾಗ ಜನರಲ್ಲಿ ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆ ಮೂಡುತ್ತದೆ. ಉಪ್ಪಾರ ಸಮಾಜದ ಒಗ್ಗಟ್ಟೇ ಸಮಾಜವನ್ನು ಎಲ್ಲ ಸಂಕಷ್ಟಗಳಿಂದ ಕಾಪಾಡುವ ಶಕ್ತಿಯಾಗಿದೆ. ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಭಕ್ತರ ಉದ್ಧಾರಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಆದ್ದರಿಂದ ಭಕ್ತಿ ಮತ್ತು ಸನ್ನಡತೆಯ ಹಾದಿಯಲ್ಲಿ ಎಲ್ಲರೂ ನಡೆದಾಗ ಮಾತ್ರ ಭಗವಂತನ ರಕ್ಷಣೆ ದೊರೆಯುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್, ದೇವಾಲಯ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸಿದ್ದಪ್ಪ ದಯಾನಂದ್, ಕೃಷ್ಣಪ್ಪ, ಶಾಮೀಲ್ ನಟೇಶ್, ಜಗದೀಶ್, ನಾಗೇಶ್, ಪಂಚಾಕ್ಷರಯ್ಯ, ಆರಾಧ್ಯ, ಶಿವಲಿಂಗಣ್ಣ, ರೇಣುಕಪ್ಪ, ಹನುಮಂತಯ್ಯ, ಶಿವಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.