ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಸ್ವಾತಂತ್ರ್ಯ ಸಂಗ್ರಾಮ ವೇಳೆ ಕರೆ ನೀಡಿದ ದಿನವನ್ನು ಶುಕ್ರವಾರ ‘ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ’ಎಂದು ಕಂಪನಿ ಭೂತಗಳ ದಹನಮಾಡಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಡಿ ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟವು ಕಂಪನಿ ಭೂತಗಳ ದಹನಮಾಡಿ ಪ್ರತಿಭಟನೆ ನಡೆಸಿದವು.ಈ ವೇಳೆ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಬಿ,ಎನ್. ಮುನಿಕೃಷ್ಣಪ್ಪ ಮಾತನಾಡಿ, 1942ರ ಆಗಸ್ಟ್ 9ರಂದು ಬ್ರಿಟೀಷರೇ ದೇಶಬಿಟ್ಟು ತೊಲಗಿ ಎಂಬ ಕರೆ ನೀಡಲಾಗಿತ್ತು. ಈ ಕರೆಯಿಂದ ದೇಶದುದ್ದಗಲಕ್ಕೂ ಧೀರೋದಾತ್ತ ಹೋರಾಟಗಳು ನಡೆದವು. ಭಾರತೀಯರ ಈ ಸಂಕಲ್ಪ ಮತ್ತು ಆಕ್ರೋಶವನ್ನು ಕಂಡು ಬೆದರಿದ ಬ್ರಿಟೀಷರು ಜಾಗ ಖಾಲಿ ಮಾಡಿದರು. ಭಾರತ ಬ್ರಿಟಿಷ್ ದಾಸ್ಯದಿಂದ ಹೊರಬಂದಿತು ಎಂದರು.
ಜಾಗತೀಕರಣದಿಂದ ಕಂಪನೀಕರಣಸ್ವಾತಂತ್ರ್ಯದ ಬಳಿಕ ಬಂದ ಸಂವಿಧಾನ ಹಾಗೂ ಜನಹೋರಾಟಗಳ ಒತ್ತಡಗಳಿಂದಾಗಿ ರೂಪಗೊಂಡ ಕಾನೂನುಗಳು ದೊಡ್ಡ ಕಂಪನಿಗಳ ಮೇಲೆ ಹಲವು ನಿಯಂತ್ರಣಗಳನ್ನು ಹೇರಿದವು. ಸಾರ್ವಜನಿಕ ಉದ್ದಿಮೆಗಳಿಗೆ ಹಾಗೂ ಸಣ್ಣ ಉದ್ದಿಮೆಗಳಿಗೆ ಒಂದು ಮಟ್ಟದ ಭದ್ರತೆ ಸಿಕ್ಕಿತು. ಆದರೆ 1990ರ ದಶಕದಲ್ಲಿ ಪ್ರಾರಂಭಗೊಂಡ ಜಾಗತೀಕರಣದ ಅಸಲೀ ಅರ್ಥ ಕಂಪನೀಕರಣವಾಗಿತ್ತು ಎಂದು ಟೀಕಿಸಿದರು.ದೇಶದ ಮತ್ತು ವಿದೇಶದ ಕಂಪನಿಗಳಿಗೆ ದೇಶದ ಸಂಪತ್ತು, ಉದ್ದಿಮೆ ಮತ್ತು ಬದುಕಿನ ಮೇಲೆ ಸಂಪೂರ್ಣ ಹಿಡಿತ ನೀಡುವುದಾಗಿತ್ತು. ಕಂಪನಿಗಳ ಮೇಲಿದ್ದ ಹಿಡಿತವನ್ನು ಸಡಿಲಗೊಳಿಸುತ್ತಾ ಬರಲಾಯಿತು. 2014ರಲ್ಲಿ ಮೋದಿ ಸರ್ಕಾರ ರಚನೆಯಾದ ಮೇಲಂತೂ ಕಂಪನಿಗಳ ಮೇಲಿನ ಎಲ್ಲಾ ಕಟ್ಟುಪಾಡುಗಳನ್ನು ತೆಗೆದದ್ದು ಮಾತ್ರವಲ್ಲದೆ ಇಡೀ ದೇಶವನ್ನು ಅವರ ಪಾದತಳಕ್ಕೆ ಅರ್ಪಿಸಲಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಲಕ್ಷಾಂತರ ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಕಂಪನಿಗಳಿಗೆ ನೀಡಲಾಗಿದೆ. ಖಾಸಗೀಕರಣದ ಹೆಸರಿನಲ್ಲಿ ನೂರಾರು ಸಾರ್ವಜನಿಕ ಉದ್ದಿಮೆಗಳನ್ನು ದುಗ್ಗಾಣಿ ಬೆಲೆಗೆ ಕಂಪನಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆಳೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಹೊರಟಿದ್ದಾರೆ. ಐತಿಹಾಸಿಕ ರೈತ ಹೋರಾಟದಲ್ಲಿ 780 ರೈತ ವೀರರ ಆತ್ಮಾಹುತಿಗೆ ಈ ಕಾಯ್ದೆಗಳೇ ಕಾರಣವಾಗಿವೆ. ಕಂಪನಿಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗುತ್ತಿದೆ. ಜಿಎಸ್‌ಟಿ-ಸೆಸ್ ರೂಪಗಳಲ್ಲಿ ಜನಸಾಮಾನ್ಯರನ್ನು ಸುಲಿಯಲಾಗುತ್ತಿದೆ. ದೇಶದ ಮೂರನೇ ಒಂದು ಭಾಗದಷ್ಟು ಆಸ್ತಿ ದೇಶದ ಕೇವಲ ಶೇ1ರಷ್ಟು ಜನರ ಕೈಗಳಲ್ಲಿದೆ ಎಂದರು.
ಜನತೆಗೆ ತಿಳಿಸುವ ಉದ್ದೇಶಈ ಅವಧಿಯಲ್ಲಿ ಬಹು ಕೋಟ್ಯಧೀಶರ ಸಂಖ್ಯೆ 56ರಿಂದ 169ಕ್ಕೆ ಏರಿದೆ.ಅಭಿವೃದ್ಧಿಯ ಮುಖವಾಡದಲ್ಲಿ ನಡೆಯುತ್ತಿರುವ ದೇಶದ ಕೊಳ್ಳೆ ಮತ್ತು ಜನಸಾಮಾನ್ಯರ ಸುಲಿಗೆಯನ್ನು ನಾವು ಪ್ರತಿರೋಧಿಸಬೇಕಿದೆ. ಈ ವಾಸ್ತವವನ್ನು ಜನಸಾಮಾನ್ಯರ ಗಮನಕ್ಕೆ ತರಲು ಈ ಪ್ರತಿರೋಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸಾಂಕೇತಿಕ ಪ್ರತಿಭಟನೆಯಾದರೂ ಸಂದೇಶ ಸಾರುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ್ಯ ರೈತ ಸಂಘದ ಸದಸ್ಯರಾದ ಬಸವರಾಜ್, ಶಿವಪ್ಪ, ಮುನಿಯಪ್ಪ,ಕೃಷ್ಣಪ್ಪ,ಕೇಶವಾರ ಶ್ರೀನಿವಾಸ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್, ಬಿಸಿಯೂಟ ಸಂಘಟನೆಯ ಸಿಂಧುಶ್ರೀ,ಮ್ಯಾಡ್ಡಲಿನ್ ಮೇರಿ,ಲಕ್ಷ್ಮಮ್ಮ,ಚಾಂದ್ ಬೇಗಂ,ಮಮತಾ ಲಾವಣ್ಯಮತ್ತಿತರರು ಇದ್ದರು.