ಭಾರತದ ಸಂವಿಧಾನಕ್ಕೆ ವಿಶ್ವಮಾನ್ಯತೆ: ತಹಸೀಲ್ದಾರ್‌ ಅಮರೇಶ್‌

| Published : Jan 27 2024, 01:15 AM IST

ಭಾರತದ ಸಂವಿಧಾನಕ್ಕೆ ವಿಶ್ವಮಾನ್ಯತೆ: ತಹಸೀಲ್ದಾರ್‌ ಅಮರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರದ ಹಿರಿಯರ ತ್ಯಾಗ ಬಲಿದಾನಗಳು ಅಭಿವೃದ್ಧಿಯಲ್ಲಿ ಸಾಧನೆ ಮಾಡುವ ಮೂಲಕ ಸಾರ್ಥಕತೆ ತೋರಬೇಕು. ಅದುವೆ ಪ್ರಜಾರಾಜ್ಯೋತ್ಸವಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ತಹಸೀಲ್ದಾರ್ ಅಮರೇಶ ತಿಳಿಸಿದರು.

ಕೊಟ್ಟೂರು: ರಾಷ್ಟ್ರದ ಸರ್ವೋಚ್ಛ ಕಾನೂನು ನಮ್ಮ ಹೆಮ್ಮೆಯ ಸಂವಿಧಾನವಾಗಿದೆ. ಇದಕ್ಕೆ ವಿಶ್ವಮಾನ್ಯತೆ ಇದ್ದು, ಇಂತಹ ಸಂವಿಧಾನವನ್ನು ಅರ್ಥ ಕೆಡಿಸದಂತೆ ಜತನದಿಂದ ಕಾಪಾಡಿಕೊಳ್ಳುವುದರ ಜತೆಗೆ ಅಭಿವೃದ್ಧಿ ಪಥದತ್ತ ಸದಾ ಮುನ್ನಡೆಯಬೇಕು ಎಂದು ತಹಸೀಲ್ದಾರ್‌ ಅಮರೇಶ್‌ ಜಿ.ಕೆ. ತಿಳಿಸಿದರು.

ಇಲ್ಲಿನ ಗೊರ್ಲಿಶರಣಪ್ಪ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಮೈದಾನದಲ್ಲಿ ಕೊಟ್ಟೂರು ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ 75ನೇ ರಾಷ್ಟ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ನೆರವೇರಿಸಿ ಮಾತನಾಡಿದರು.

ರಾಷ್ಟ್ರದ ಹಿರಿಯರ ತ್ಯಾಗ ಬಲಿದಾನಗಳು ಅಭಿವೃದ್ಧಿಯಲ್ಲಿ ಸಾಧನೆ ಮಾಡುವ ಮೂಲಕ ಸಾರ್ಥಕತೆ ತೋರಬೇಕು. ಅದುವೆ ಪ್ರಜಾರಾಜ್ಯೋತ್ಸವಕ್ಕೆ ಕೊಡುವ ದೊಡ್ಡ ಕೊಡುಗೆ ಎಂದರು.

ಸಮಾರಂಭದಲ್ಲಿ ಧ್ವಜವಂದನೆ ಮತ್ತು ಪೊಲೀಸ್‌, ಎನ್‌ಸಿಸಿಗಳ ಪರೇಡ್ ವಂದನೆ ಸ್ವೀಕರಿಸಿದ ಶಾಸಕ ಕೆ. ನೇಮರಾಜ ನಾಯ್ಕ ಮಾತನಾಡಿ, ಸಂವಿಧಾನ ರಾಷ್ಟ್ರದ ಆತ್ಮವಾಗಿದ್ದು, ಇದರ ಆಶಯ ಪೂರ್ಣ ಪ್ರಮಾಣದಲ್ಲಿ ಈಡೇರಲು ರಾಷ್ಟ್ರದ ಪ್ರತಿಯೊಬ್ಬರೂ ಕಂಕಣಬದ್ಧರಾಗೋಣ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಶೆಫಿ, ತೋಟದ ರಾಮಣ್ಣ, ಲಕ್ಷ್ಮೀ ಚನ್ನಪ್ಪ, ಜಿ. ಸಿದ್ದಯ್ಯ, ಟಿ. ಜಗದೀಶ್, ಮರಬದ ಕೊಟ್ರೇಶ್‌, ವಿದ್ಯಾಶ್ರೀ ಮೇಘರಾಜ್, ಸರ್ಕಲ್‌ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ, ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ, ಪ್ರಾಚಾರ್ಯ ಡಾ. ಬಿ. ಸೋಮಶೇಖರ್ ಮತ್ತಿತರರು ಇದ್ದರು. ಉಪಪ್ರಾಚಾರ್ಯ ಸಿ. ಬಸವರಾಜ ಸ್ವಾಗತಿಸಿದರು. ಸಹ ಶಿಕ್ಷಕ ಹಳ್ಳಿ ಆನಂದ ನಿರೂಪಿಸಿದರು. ರೈತಗೀತೆ ಕೈಬಿಟ್ಟಿದ್ದಕ್ಕೆ ಆಕ್ರೋಶ

ಕಾರ್ಯಕ್ರಮದಲ್ಲಿ ನಾಡಗೀತೆ ನಂತರ ರೈತಗೀತೆ ಹಾಡಲೆಂದು ಕಳೆದ 15 ದಿನಗಳಿಂದ ತರಬೇತಿ ಪಡೆದು ರೈತ ವಸ್ತ್ರ ಧರಿಸಿ ಆಗಮಿಸಿದ್ದ ಪಟ್ಟಣದ ವಿಸ್ಡಂ ಶಾಲಾ ವಿದ್ಯಾರ್ಥಿಗಳ ಗಾಯನವನ್ನು ಮೊಟುಕುಗೊಳಿಸಿ ವಾಪಸ್‌ ಕಳಿಸಲಾಯಿತು. ಇದು ವಿದ್ಯಾರ್ಥಿ ಮತ್ತು ಶಿಕ್ಷಕರ ಬೇಸರಕ್ಕೆ ಕಾರಣವಾಯಿತು. ಅಲ್ಲದೆ ಶಾಸಕರು ಬೇರೊಂದು ಕಾರ್ಯಕ್ರಮದಲ್ಲಿ ತೆರಳಬೇಕೆನ್ನುವ ಕಾರಣಕ್ಕಾಗಿ ಕಾರ್ಯಕ್ರಮ ಪಟ್ಟಿಯಲ್ಲಿದ್ದ ರೈತಗೀತೆಯನ್ನು ಕೈ ಬಿಟ್ಟಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಯಿತಲ್ಲದೆ ತಾಲೂಕಿನ ಅಧಿಕಾರಿಗಳನ್ನು ನೆರೆದಿದ್ದವರು ಪ್ರಶ್ನಿಸಿದರಲ್ಲದೆ ಜಿಲ್ಲಾಡಳಿತದ ಗಮನಕ್ಕೆ ತರುವುದಾಗಿ ಹೇಳಿದರು.