ವಿವಿಗಳು ಮುಕ್ತ ವಿಚಾರಧಾರೆ ಬೆಳೆಸುವ ಕೇಂದ್ರಗಳಾಗಲಿ

| Published : Jan 31 2024, 02:23 AM IST

ವಿವಿಗಳು ಮುಕ್ತ ವಿಚಾರಧಾರೆ ಬೆಳೆಸುವ ಕೇಂದ್ರಗಳಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮಹಾತ್ಮಾಗಾಂಧಿ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ನನ್ನ ಪಿತಾಮಹ ಮಹಾತ್ಮಗಾಂಧಿ ಅನುವಾದಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಧಾರವಾಡ: ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ಒದಗಿಸುವ ಕೇಂದ್ರವಾಗದೇ, ಮುಕ್ತ ವಿಚಾರ ಧಾರೆಯನ್ನು ಬೆಳಸುವ ಕೇಂದ್ರಗಳಾಗಬೇಕು ಎಂದು ಮುಂಬೈನ ಸ್ಕೂಲ್ ಆಫ್ ಸಿವಿಲೈಜೇಷನ್ ವಿದ್ಯಾ ವಿಹಾರ ವಿಶ್ವವಿದ್ಯಾಲಯದ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಗಣೇಶ ದೇವಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮಹಾತ್ಮಾಗಾಂಧಿ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ಬ್ರಿಗೇಡಿಯರ್‌ ಎಸ್.ಜಿ. ಭಾಗವತ್‌ ಅವರ ''''ನನ್ನ ಪಿತಾಮಹ ಮಹಾತ್ಮಗಾಂಧಿ'''' ಅನುವಾದಿತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ವಿಶ್ವವಿದ್ಯಾಲಯ ಒಂದು ಸ್ವತಂತ್ರ ಸ್ಥಳವಾಗಿದೆ. ವಿಭಿನ್ನ ವಿಚಾರಗಳನ್ನು ಜ್ಞಾನವನ್ನು ಸಮಾಜಕ್ಕೆ ಒದಗಿಸುವ ಜ್ಞಾನ ಕೇಂದ್ರ. ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾದ ಮುಕ್ತ ಹಾಗೂ ಸ್ವಾತಂತ್ರ‍್ಯ ಸಂಗ್ರಾಮದ ವಿಚಾರ ಧಾರೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯ ವಿಶ್ವವಿದ್ಯಾಲಯಗಳು ಮಾಡಬೇಕಾಗಿದೆ. ಮಹಾತ್ಮ ಗಾಂಧಿ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಬ್ರಿಗೇಡಿಯರ್ ಎಸ್.ಜಿ. ಭಾಗವತ್ ತಮ್ಮ ಅನುವಾದಿತ ಪುಸ್ತಕದ ಕುರಿತು ಮಾತನಾಡಿ, ಈ ಪುಸ್ತಕ ಗಾಂಧಿ ವಿಚಾರಧಾರೆಗಳನ್ನು ಮಹಾತ್ಮಗಾಂಧಿ ಅವರ ಸಂಪೂರ್ಣ ಜೀವನವನ್ನು ತಿಳಿಸುತ್ತದೆ. ಇಂದಿನ ಯುವ ಸಮುದಾಯ ಮಹಾತ್ಮ ಗಾಂಧಿ ಅವರ ವಿಚಾರಗಳನ್ನು ಅರಿಯಬೇಕು ಎಂದರು.

ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಬ್ರಿಗೇಡಿಯರ್ ಎಸ್.ಜಿ. ಭಾಗವತ್ ಅವರ ಅನುವಾದಿತ ಕೃತಿಯ ಪರಿಚಯ ಭಾಷಣದಲ್ಲಿ ಮಾತನಾಡಿ, ಮಹಾತ್ಮಾ ಗಾಂಧಿ ಅವರ ಮೊಮ್ಮಗಳಾದ ಸುಮಿತ್ರಾ ಕುಲಕರ್ಣಿ ಅವರು ಜಾಗತಿಕ ಹಾಗೂ ವಿಶ್ವ ಮಟ್ಟದಲ್ಲಿ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ, ಸತ್ಯಾಗ್ರಹ, ಅವರ ತತ್ವ, ರಾಷ್ಟ್ರವಾದ ಹಾಗೂ ಅವರ ಸತ್ಯದ ಅನ್ವೇಷಣೆ ಕುರಿತು ಮೂಲ ಕೃತಿಯಲ್ಲಿ ಮಾರ್ಮಿಕವಾಗಿ ಪರಿಚಯಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ.ಬಿ. ಗುಡಸಿ, ಮಹಾತ್ಮ ಗಾಂಧಿ ಅವರ ಕುರಿತು ಇಂದಿನ ವಿದ್ಯಾರ್ಥಿಗಳು ಓದಬೇಕು. ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಗಳ ಕುರಿತು ದೂರದೃಷ್ಟಿಯನ್ನು ಹೊಂದಿದ್ದರು, ಪ್ರಸ್ತುತ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.

ಪ್ರೊ. ಮಲ್ಲಿಕಾರ್ಜುನ ಪಾಟೀಲ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ರಾಜೇಂದ್ರ ನಾಯಕ ಸೇರಿದಂತೆ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಹಾಜರಿದ್ದರು.