ಇಂದು ವಿಶ್ವವಿದ್ಯಾನಿಲಯಗಳೇ ಜಾತಿ ಕೇಂದ್ರಗಳಾಗಿವೆ: ಪ್ರೊ.ರಾಜಪ್ಪ ದಳವಾಯಿ

| Published : Apr 24 2024, 02:17 AM IST

ಇಂದು ವಿಶ್ವವಿದ್ಯಾನಿಲಯಗಳೇ ಜಾತಿ ಕೇಂದ್ರಗಳಾಗಿವೆ: ಪ್ರೊ.ರಾಜಪ್ಪ ದಳವಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ ಎನ್ನುವುದು ತಪ್ಪು. ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಡಾ. ಅಂಬೇಡ್ಕರ್ ಅವರು ಇಲ್ಲದಿದ್ದರೆ ದೇಶದಲ್ಲಿ ಶೇ.70 ಜನರಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಸಮಾಜದ ಕೊನೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬುದು ಡಾ. ಅಂಬೇಡ್ಕರ್ ಕನಸಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಜಾತಿ ಎನ್ನುವುದು ಕ್ರೂರವಾದದ್ದು. ಶಿಕ್ಷಣದಿಂದ ಅದು ನಿವಾರಣೆಯಾಗುತ್ತದೆ ಎಂಬ ಮಾತುಗಳಿವೆ. ಆದರೆ, ಇಂದು ವಿಶ್ವವಿದ್ಯಾನಿಲಯಗಳೇ ಜಾತಿ ಕೇಂದ್ರಗಳಾಗಿವೆ. ಜಾತಿಯನ್ನು ವ್ಯವಸ್ಥಿತವಾಗಿ ಅಲ್ಲಿ ಸಂರಕ್ಷಿಸಲಾಗುತ್ತದೆ ಎಂದು ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ವಿಷಾದಿಸಿದರು.

ನಗರದ ಯುವರಾಜ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರನ್ನು ತಪ್ಪಾಗಿ ವ್ಯಾಖ್ಯಾನ ಮಾಡಬಾರದು. ಅವರು ಎಸ್ಸಿ, ಎಸ್ಟಿಯವರಿಗೆ ಮಾತ್ರ ಸಂಬಂಧಪಟ್ಟವರಲ್ಲ. ಎಲ್ಲರಿಗೂ ಸಂಬಂಧಪಟ್ಟವರು. ಅವರ ಬರಹಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮ ಜತೆ ಇರುವವರನ್ನು ನೀವು ಯಾವ ಜಾತಿ ಎಂದು ಕೇಳದೆ ಇರುವುದೇ ದೊಡ್ಡ ಕೆಲಸ ಎಂದರು.

ಡಾ. ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ ಎನ್ನುವುದು ತಪ್ಪು. ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಡಾ. ಅಂಬೇಡ್ಕರ್ ಅವರು ಇಲ್ಲದಿದ್ದರೆ ದೇಶದಲ್ಲಿ ಶೇ.70 ಜನರಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಸಮಾಜದ ಕೊನೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬುದು ಡಾ. ಅಂಬೇಡ್ಕರ್ ಕನಸಾಗಿತ್ತು. ಇದನ್ನು ಸಾಕಾರಗೊಳಿಸಲು ಅವರು ಇಡೀ ಜೀವನವನ್ನೇ ಮುಡಿಪಾಗಿಟ್ಟರು ಎಂದು ಅವರು ತಿಳಿಸಿದರು.

ದಲಿತರು, ಮಹಿಳೆಯರು ಹಾಗೂ ಕಾಮಿಕರ ಪರವಾಗಿ ಹೋರಾಡಿ, ಅವರು ಸಮಾಜದಲ್ಲಿ ನೆಮ್ಮದಿಯುತ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿರುವ ಡಾ. ಅಂಬೇಡ್ಕರ್ ಅವರು, ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ. ಡಾ. ಅಂಬೇಡ್ಕರ್ ಅಂದರೆ ವಿಚಾರ ಶಕ್ತಿ. ಅವರ ಜೀವನವೇ ದೊಡ್ಡ ಆದರ್ಶ. ಹೀಗಾಗಿ ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಮೈಗೊಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಕೆ. ಮಹೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ. ವೆಂಕಟೇಶ್, ಜ್ಞಾನವಾಹಿನಿ ಸಮಿತಿ ಸಂಚಾಲಕ ಜಿ. ಕೃಷ್ಙಮೂರ್ತಿ ಮೊದಲಾದವರು ಇದ್ದರು.