ಕಾರವಾರದ ಐಎನ್‌ಎಸ್ ಟುಪಲೇವ್ ವೀಕ್ಷಣೆಗೆ ಸಿಗದ ಅವಕಾಶ!

| Published : Jan 31 2025, 12:45 AM IST

ಸಾರಾಂಶ

ಟುಪಲೇವ್ ಜೋಡಣೆಯಾಗಿ ಒಂದು ವರ್ಷ ಕಳೆದರೂ ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಒಳಗಿನ ಭಾಗವನ್ನು ನೋಡಲು, ಕಾರ್ಯವೈಖರಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಜಿ.ಡಿ. ಹೆಗಡೆಕಾರವಾರ: ಕೆಲ ತಿಂಗಳ ಹಿಂದೆ ಆಗಮಿಸಿ ಬಂದ್ ಆಗಿದ್ದ ಐಎನ್‌ಎಸ್ ಟುಪಲೇವ್ ನೋಡಲಾರದೆ ನಿರಾಸೆಯಿಂದ ತೆರಳಿದ್ದ ವಿದೇಶಿಗರು ಗುರುವಾರ ಮತ್ತೆ ಬಂದರೂ ವೀಕ್ಷಣೆಗೆ ಮುಕ್ತವಾಗದೆ ಇರುವುದರಿಂದ ಆಡಳಿತ ಯಂತ್ರಕ್ಕೆ ಹಿಡಿಶಾಪ ಹಾಕುತ್ತ ತೆರಳಿದ್ದಾರೆ.

ಯುಎಸ್, ಸ್ವಿಡ್ಜರ್‌ಲ್ಯಾಂಡ ಹಾಗೂ ರಷ್ಯಾದದಿಂದ ಐದು ಜನರು ಗುರುವಾರ ಟುಪಲೇವ್ ಯುದ್ಧ ವಿಮಾನ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಜಿಲ್ಲಾಡಳಿತ ವಿಮಾನದ ಒಳಗೆ ತೆರಳಲು ಪ್ರವಾಸಿಗರಿಗೆ ಅವಕಾಶ ನೀಡದ ಕಾರಣ ಈ ವಿದೇಶಿಗರು ಬೇಸರದಿಂದ ತೆರಳಿದ್ದಾರೆ. ಯುಎಸ್ ಮಹಿಳೆ ಕೆಲವು ತಿಂಗಳ ಹಿಂದೆ ಉತ್ತರ ಕನ್ನಡದ ಪ್ರವಾಸಕ್ಕೆ ಆಗಮಿಸಿದ್ದ ವೇಳೆ ಕಾರವಾರದಲ್ಲಿ ಚಾಪೆಲ್ ಹಾಗೂ ಟುಪಲೇವ್ ಬಗ್ಗೆ ತಿಳಿದುಕೊಂಡು ಆಗಮಿಸಿದ್ದರು. ಆಗ ಕೂಡಾ ತಾಂತ್ರಿಕ ಕಾರಣದಿಂದ ಟುಪಲೇವ್ ಬಂದ್ ಇಡಲಾಗಿತ್ತು.

ಪುನಃ ಆ ಮಹಿಳೆ ತನ್ನ ಸ್ನೇಹಿತರೊಂದಿಗೆ ಹಂಪಿಯಿಂದ ಗುರುವಾರ ಯುದ್ಧ ವಿಮಾನ ನೋಡಲು ಆಗಮಿಸಿದ್ದು, ಜಿಲ್ಲಾಡಳಿತ ಇದುವರೆಗೂ ಪ್ರವಾಸಿಗರಿಗೆ ನೋಡಲು ಅವಕಾಶ ಒದಗಿಸದ ಕಾರಣ ವಿಮಾನವನ್ನು ಒಳಗಿನಿಂದ ವೀಕ್ಷಣೆಗೆ ಸಾಧ್ಯವಾಗಿಲ್ಲ. ಆ ಮಹಿಳೆ ಹಿಂದೆ ಬಂದಾಗಲೇ ನೋಡಲು ಅವಕಾಶ ನೀಡಲಿಲ್ಲ. ಈಗಲೂ ನೀಡಲು ಸಾಧ್ಯವಿಲ್ಲವೇ ಎಂದು ಮೂಗು ಮುರಿದು ಹೋಗಿದ್ದಾಳೆ. ಟುಪಲೇವ್ ಯುದ್ಧ ವಿಮಾನ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿತ್ತು. ೨೦೨೦ರಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಕದಂಬ ನೌಕಾನೆಲೆ ಈ ಯುದ್ಧ ವಿಮಾನ ತರಲು ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ 2023ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನಿಂದ ೯ ಟ್ರಕ್‌ಗಳಲ್ಲಿ ವಿಮಾನದ ಬಿಡಿಭಾಗಗಳನ್ನು ನಗರಕ್ಕೆ ತರಲಾಯಿತು. ಬಳಿಕ ಅದೇ ವರ್ಷ ಅಕ್ಟೋಬರ್‌ನಲ್ಲಿ ಜೋಡಣೆ ಕಾರ್ಯ ಆರಂಭವಾಗಿ ಅಂದಾಜು 40 ದಿನಗಳ ಕಾಲ ನಡೆಯಿತು. ಜೋಡಣೆಯಾದ ಕೆಲವೇ ದಿನದಲ್ಲಿ ಕಾರವಾರಕ್ಕೆ ಆಗಮಿಸಿದ್ದ ನೂರಾರು ಪ್ರವಾಸಿಗರು ಟುಪಲೇವ್ ಉದ್ಘಾಟನೆ ಬಳಿಕ ತಮ್ಮನ್ನು ಸಂಪರ್ಕಿಸಿ ತಿಳಿಸುವಂತೆ ಮ್ಯೂಸಿಯಂನ ಸಿಬ್ಬಂದಿಗೆ ದೂರವಾಣಿ ಸಂಖ್ಯೆಯನ್ನೂ ನೀಡಿ ಹೋಗಿರುವುದು ಉಲ್ಲೇಖನೀಯವಾಗಿದೆ.

ಕಳೆದ ನವೆಂಬರ್- ಡಿಸೆಂಬರ್ ಶಾಲಾ ಮಕ್ಕಳ ಪ್ರವಾಸದ ಸಂದರ್ಭವಾಗಿದ್ದು, ನಿತ್ಯ ೪- ೫ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ ಇವರಿಗೂ ಕೂಡಾ ಐಎನ್‌ಎಸ್ ಚಾಪೆಲ್ ಮಾತ್ರ ಒಳಗಿನಿಂದ ನೋಡುವ ಸೌಭಾಗ್ಯ ಸಿಕ್ಕಿದೆ. ಐಎನ್‌ಎಸ್ ಟುಪಲೇವ್ ಹೊರಭಾಗದಿಂದ ಮಾತ್ರ ನೋಡಿಕೊಂಡು ತೆರಳಿದ್ದಾರೆ. ಯುದ್ಧ ವಿಮಾನ ನೋಡುವ ಮಕ್ಕಳ ಕುತೂಹಲಕ್ಕೆ ತಣ್ಣೀರು ಎರಚಿದಂತಾಗಿತ್ತು.ಟುಪಲೇವ್ ಜೋಡಣೆಯಾಗಿ ಒಂದು ವರ್ಷ ಕಳೆದರೂ ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಒಳಗಿನ ಭಾಗವನ್ನು ನೋಡಲು, ಕಾರ್ಯವೈಖರಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಗೆ ನಿರ್ವಹಣೆ ಜವಾಬ್ದಾರಿರಷ್ಯಾ ನಿರ್ಮಿತ ಟುಪಲೇವ್ ಯುದ್ಧ ವಿಮಾನ ೧೯೮೮ರಲ್ಲಿ ಭಾರತೀಯ ನೌಕಾ ದಳಕ್ಕೆ ಸೇರ್ಪಡೆಯಾಯಿತು. ೨೦೧೭ರಲ್ಲಿ ನಿವೃತ್ತಿ(ಡಿಕಮಿಷನ್) ಹೊಂದಿದ ಬಳಿಕ ಇದನ್ನು ತಮಿಳುನಾಡಿನ ಐಎನ್‌ಎಸ್ ರಾಜೋಲಿಯ ನೌಕಾನೆಲೆಯಲ್ಲಿ ಇರಿಸಲಾಗಿತ್ತು. ಇದೇ ಮಾದರಿಯ ಒಂದು ಯುದ್ಧ ವಿಮಾನ ವಿಶಾಖಪಟ್ಟಣಂನ ವಸ್ತು ಸಂಗ್ರಹಾಲಯದಲ್ಲಿದೆ. ವಿಮಾನಗಳ ಬಿಡಿಭಾಗಗಳನ್ನು ಇಲ್ಲಿಗೆ ತಂದ ಬಳಿಕ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಇರುವ ಐಎನ್‌ಎಸ್ ಚಾಪೆಲ್ ಪಕ್ಕದಲ್ಲಿ ಜೋಡಣೆ ಪೂರ್ಣಗೊಳಿಸಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಿ, ಅದರ ನಿರ್ವಹಣೆ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ.ಶೀಘ್ರ ಸೇವೆಗೆ: ಟುಪಲೇವ್‌ನಲ್ಲಿ ಎಸಿ ಕೆಲಸ ಬಾಕಿಯಿತ್ತು. ಅದನ್ನು ಪೂರ್ಣಗೊಳಿಸಿದ ಬಳಿಕ ಎಲೆಕ್ಟ್ರಿಕಲ್ ತಂತ್ರಜ್ಞರಿಂದ ತಪಾಸಣೆಯಾಗಬೇಕು. ಅವರಿಗೆ ಪತ್ರ ಬರೆಯಲಾಗಿತ್ತು. ಇಂದು(ಗುರುವಾರ) ಆಗಮಿಸಿ ಪರಿಶೀಲನೆ ನಡೆಸಿ ಕೆಲ ಬದಲಾವಣೆ ಮಾಡಲು ಹೇಳಿದ್ದಾರೆ. ಬದಲಾಯಿಸಿ ಸಾರ್ವಜನಿಕ ಸೇವೆಗೆ ಮುಕ್ತ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕ ಎಚ್.ವಿ. ಜಯಂತ ತಿಳಿಸಿದರು.