ಪಾವತಿಯಾಗದ ಸಾತ್ವಿಕ್ ರಕ್ಷಿಸಿದ ಯಂತ್ರಗಳ ಬಿಲ್!

| Published : Aug 29 2024, 12:47 AM IST

ಪಾವತಿಯಾಗದ ಸಾತ್ವಿಕ್ ರಕ್ಷಿಸಿದ ಯಂತ್ರಗಳ ಬಿಲ್!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ಏಪ್ರಿಲ್‌ 3 ರಂದು ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾತ್ವಿಕ್‌ ಮುಜಗೊಂಡ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದ ಘಟನೆ ರಾಜ್ಯಾದ್ಯಂತ ಸುದ್ದಿಯಾಗು ಮೂಲಕ ಎಲ್ಲ ಕರಳು ಚುರ್‌ ಎನ್ನುವಂತೆ ಮಾಡಿತ್ತು. ಕೊನೆಗೆ ಆನತ ಅದೃಷ್ಟ ಚೆನ್ನಾಗಿದ್ದರಿಂದ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಿಂದ ಆತ ಬದುಕಿ ಬಂದ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಏಪ್ರಿಲ್‌ 3 ರಂದು ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಾತ್ವಿಕ್‌ ಮುಜಗೊಂಡ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದ ಘಟನೆ ರಾಜ್ಯಾದ್ಯಂತ ಸುದ್ದಿಯಾಗು ಮೂಲಕ ಎಲ್ಲ ಕರಳು ಚುರ್‌ ಎನ್ನುವಂತೆ ಮಾಡಿತ್ತು. ಕೊನೆಗೆ ಆನತ ಅದೃಷ್ಟ ಚೆನ್ನಾಗಿದ್ದರಿಂದ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಿಂದ ಆತ ಬದುಕಿ ಬಂದ. ಸಾತ್ವಿಕ್‌ನನ್ನು ಬದುಕಿಸಲು ಜಿಲ್ಲಾಡಳಿತ ಸೇರಿ ಸ್ಥಳೀಯರು, ಜೆಸಿಬಿ ಯಂತ್ರಗಳ ಹಾಗೂ ಹಿಟ್ಯಾಚಿ ಯಂತ್ರಗಳ ಮಾಲೀಕರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಜೊತೆಗೆ ಸ್ಟೋನ್‌ ಕಟರ್‌, ಟ್ರಾಕ್ಟರ್‌ ಡ್ರಿಲ್ಲರ್‌ಗಳು ಶ್ರಮಿಸಿದ್ದು ಅಷ್ಟಿಷ್ಟಲ್ಲ. ಆದರೆ, ಕೊಳವೆ ಬಾವಿ ಕೊರೆಯಲು ಬಳಕೆಯಾಗಿದ್ದ ವಾಹನ, ಜೆಸಿಬಿ, ಹಿಟ್ಯಾಚಿಗಳ ಬಿಲ್‌ 5 ತಿಂಗಳಿಂದ ಬಾಕಿಯಿದ್ದು, ಈವರೆಗೂ ಪಾವತಿಯಾಗಿಲ್ಲ. ಬಿಲ್‌ಗಾಗಿ ಯಂತ್ರಗಳ ಮಾಲೀಕರು ಎಡತಾಕುತ್ತಿದ್ದಾರೆ.ಮಾಲೀಕರ ಗೋಳಾಟ:

ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದು 22 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಬದುಕಿ ಬಂದಿದ್ದ ಸಾತ್ವಿಕ್‌ ವಿಧಿಯನ್ನೇ ಗೆದ್ದಿದ್ದ. ಎದ್ದು ಬದುಕಿ ಬಂದಿದ್ದ. ಸಾತ್ವಿಕ್‌ ನ ಅದೃಷ್ಟಕ್ಕೆ ಸಾಥ್ ಕೊಟ್ಟಿದ್ದು, ಜಿಲ್ಲಾಡಳಿತ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜೆಸಿಬಿ, ಹಿಟ್ಯಾಚಿ, ಸ್ಟೋನ್‌ ಕಟರ್‌ ಮಷೀನ್‌ಗಳ ಮಾಲೀಕರು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ಘಟನೆ ನಡೆದು 5 ತಿಂಗಳಾದರೂ ರಕ್ಷಣಾ ಕಾರ್ಯಾಚರಣೆಗೆ ಬಳಸಿದ ವಾಹನ, ಮಷೀನ್‌ಗಳ ಬಾಡಿಗೆ ಬಂದಿಲ್ಲ ಎಂದು ಯಂತ್ರಗಳ ಮಾಲೀಕರು ಗೋಳಾಡುತ್ತಿದ್ದಾರೆ.22 ಗಂಟೆಗಳ ಕಾರ್ಯಾಚರಣೆ:

ಸಾತ್ವಿಕ್‌ ರಕ್ಷಣೆಗೆ ಏ.3 ರ ಸಂಜೆ ಶುರುವಾದ ಕಾರ್ಯಾಚರಣೆ ಮರುದಿನ ಮಧ್ಯಾಹ್ನದ ವರೆಗೆ ನಡೆದಿತ್ತು. ಮಗು ಕೊಳವೆ ಬಾವಿಗೆ ಬಿದ್ದ ತಕ್ಷಣವೇ ಸ್ಥಳಕ್ಕಾಗಮಿಸಿದ ಜೆಸಿಬಿ ತಂಡ ರಕ್ಷಣಾ ಕಾರ್ಯಾಚರಣೆ ಶುರು ಮಾಡಿತ್ತು. ಇಂಡಿ ತಾಲೂಕಿನ ವಿವಿಧ ರೈತರು ಹಾಗೂ ಸ್ಥಳೀಯರಿಗೆ ಸೇರಿದ ಈ ಮಷೀನರಿಗಳನ್ನು 22 ಗಂಟೆಗಳ ಕಾಲ ದುಡಿಸಿಕೊಂಡ ಅಧಿಕಾರಿಗಳು ಈಗ ಬಾಡಿಗೆ ನೀಡದೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ.ಬಾಡಿಗೆ ಬಾಕಿ ₹3.70 ಲಕ್ಷ

ಹಿಟ್ಯಾಚಿ, ಜೆಸಿಬಿ, ನೀರಿನ ಟ್ಯಾಂಕರ್‌, ಸ್ಟೋನ್‌ ಕಟರ್‌, ಸ್ಟೋನ್‌ ಬ್ರೇಕ್‌ ಸೇರಿ ಹಲವು ವಾಹನ, ಮಶೀನರಿಗಳು ಸೇರಿ ಒಟ್ಟು ₹ 3.70 ಲಕ್ಷ ಬಿಲ್‌ ಆಗಿದ್ದು, ಬಾಡಿಗೆಯನ್ನು ಜಿಲ್ಲಾಡಳಿತ ಬಾಕಿ ಉಳಿಸಿಕೊಂಡಿದೆ. ಗ್ರಾಮ ಪಂಚಾಯತಿ ಲಚ್ಯಾಣದ ಅಧಿಕಾರಿಗಳು ಒಟ್ಟು ಆದ ವೆಚ್ಚವನ್ನು ಇಂಡಿ ಉಪವಿಭಾಗಾಧಿಕಾರಿಗೆ ರವಾನಿಸಿದ್ದಾರೆ. ಬಳಿಕ ಅಲ್ಲಿಂದ ಜಿಲ್ಲಾಡಳಿತಕ್ಕೆ ಈ ಬಿಲ್‌ ಈಗ ಬಂದು ಸೇರಿದೆ.ಯಾವುದರ ಬಾಕಿ ಎಷ್ಟು?

ಎರಡು ಹಿಟ್ಯಾಚಿಗಳ ₹1,84,800 , ನಾಲ್ಕು ಟ್ರಾಕ್ಟರ್ ಬ್ರೇಕರ್ಸ್‌ಗಳ ₹52,800, ಮೂರು ಜೆಸಿಬಿಗಳಿಗೆ ₹ 89,100, ಮೂರು ಟ್ರ್ಯಾಕ್ಟರ್‌ಗಳ ₹16,500 , ಒಂದು ವಾಟರ್ ಟ್ಯಾಂಕರ್ ನ ₹15,950 , ಒಂದು ಹ್ಯಾಂಡ್ ಡ್ರಿಲ್ಲಿಂಗ್ ಮಷೀನ್ ₹6,600 , ಒಂದು ಸ್ಟೋನ್ ಕಟ್ಟಿಂಗ್ ಮಷೀನ್‌ನ ₹ 4,268 ಸೇರಿ ಒಟ್ಟು ₹3.70 ಲಕ್ಷ ಆಗಿದ್ದು, ಈವರೆಗೂ ಪಾವತಿಯಾಗಿಲ್ಲ.

ಕೋಟ್...

ಮಗು ಕೊಳವೆ ಬಾವಿಗೆ ಬಿದ್ದ ಸಂದರ್ಭದಲ್ಲಿ ಎಲ್ಲರೂ ಮಾನವೀಯತೆ ಆಧಾರದ ಮೇಲೆ ತಮ್ಮ ಯಂತ್ರಗಳನ್ನು ಬಿಟ್ಟು ಕೆಲಸ ಮಾಡಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಸ್ಪಂದಿಸಿ ಬಾಲಕನ ಜೀವ ಉಳಿಸಿದವರಿಗೆ ಬಿಲ್ ಪಾವತಿಸಲು ನಾಲ್ಕೈದು ತಿಂಗಳು ಕಾಯಿಸುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಣೆ ಮಾಡಿ ಗೆದ್ದಿದ್ದ ಜಿಲ್ಲಾಡಳಿತ ಬಿಲ್ ಪಾವತಿ ವಿಚಾರದಲ್ಲಿ ಸೋತಿದೆ. ತ್ವರಿತವಾಗಿ ಬಿಲ್ ಪಾವತಿಸಿ ಯಂತ್ರಗಳ ಮಾಲೀಕರಿಗೆ ಅನುಕೂಲ ಕಲ್ಪಿಸಬೇಕು.

-ಸಂಗಮೇಶ ಮುಜಗೊಂಡ, ಗ್ರಾಮಸ್ಥ.---

ಕಾರ್ಯಾಚರಣೆಯಲ್ಲಿ ನಡೆದ ಯಂತ್ರಗಳು ಹಾಗೂ ಅವುಗಳ ಮೊತ್ತದ ಬಿಲ್‌ಗಳು ತಾಲೂಕು ಹಾಗೂ ಎಸಿ ಕಚೇರಿಯಿಂದ ಪರಿಶೀಲನೆಯಾಗಿ ಕಳೆದ ವಾರವಷ್ಟೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದು, ಇಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಬಿಲ್‌ ಸಂದಾಯ ಮಾಡಲಾಗುವುದು. ಸ್ವಲ್ಪ ವಿಳಂಬವಾಗಿದ್ದು, ತಕ್ಷಣದಲ್ಲಿ ಎಲ್ಲ ಬಿಲ್‌ಗಳ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

-ಟಿ.ಭೂಬಾಲನ್‌, ಜಿಲ್ಲಾಧಿಕಾರಿ