ಕನ್ನಡಪ್ರಭ ವಾರ್ತೆ ಮದ್ದೂರು
ನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ನಡೆಯುತ್ತಿರುವ ಮದ್ದೂರು ಉತ್ಸವಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮದ್ದೂರು ಉತ್ಸವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ಉತ್ಸವದ ಅಂಗವಾಗಿ ನಡೆದ ಮ್ಯಾರಾಥಾನ್ ನಿರೀಕ್ಷೆಗೂ ಮೀರಿದ ಜನರು ಬಂದಿದ್ದರು. ಮದ್ದೂರಮ್ಮನ ದನಗಳ ಜಾತ್ರೆಗೆ ದನಗಳು, ಟಗರುಗಳು ಬಂದು ಕಳೆಗಟ್ಟಿರುವುದು ಖುಷಿ ತಂದಿದೆ ಎಂದರು.
ಉತ್ಸವದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಲಂಕಾರದ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಮೇ 8ವರೆಗೂ ದೀಪಾಲಂಕಾರ ವಿಶೇಷ ಮೆರಗು ಬರಲಿದೆ. ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಗಳು ನಗರದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ, 25 ಸಾವಿರ, 10 ಸಾವಿರ ನಗದು ಬಹುಮಾನ, ಜೊತೆಗೆ 10 ಸಾವಿರ ರು. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.ಏ.30ರಂದು ಪ್ರವಾಸಿ ಮಂದಿರ ಆವರಣದಿಂದ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಬೃಹತ್ ದನಗಳ ಮೆರವಣಿಗೆ, ಉತ್ತಮ ರಾಸುಗಳಿಗೆ ಪ್ರಥಮ 2 ಲಕ್ಷ ರು. ದ್ವಿತೀಯ 1 ಲಕ್ಷ ರು. ಮೂರನೇ ಬಹುಮಾನ ಗೆ 50 ಸಾವಿರ ನಗದು ಬಹುಮಾನ ಕೊಡಲಾಗುವುದು ಎಂದರು.
ಅಲ್ಲದೇ, 10 ರಾಸುಗಳಿಗೆ 10 ಸಾವಿರ ರು. ಸಮಾಧಾನಕರ ಬಹುಮಾನ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಟಗರುಗಳಿಗೂ ಕ್ರಮವಾಗಿ 10 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ, ಪಶು ಸಂಗೋಪಾನಾ ಇಲಾಖೆ ಸಚಿವ ವೆಂಕಟೇಶ್ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವರು ಭಾಗಿ. ಮೇ 1 ರಿಂದ 4 ರವರೆಗೆ ಮದ್ದೂರು ನಗರದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ, ವಿಜೇತರಿಗೆ ವಾಷಿಂಗ್ ಮಷಿನ್, ರೆಪ್ರಿಜರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ 6ರಂದು ನಗರದ ಕ್ರೀಡಾಂಗಣದಲ್ಲಿ ಸಂಗೀತ ಸಂಜೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಆಗಮಿಸುವರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್ ಟಾಪ್, ಜತೆಗೆ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸಿ.ಚಲುವರಾಜು, ಬಿಇಒ ಸಿ.ಎನ್.ಧನಂಜಯ, ಸಿಡಿಪಿಓ ಅರುಣ್ ಕುಮಾರ್, ಸಿಪಿಐಗಳಾದ ನವೀನ್ ಕುಮಾರ್, ನಾರಾಯಣಿ ಇದ್ದರು.