ಅಂದಾಜು ಸಿಗದಷ್ಟು ಅಭಿವೃದ್ಧಿಯತ್ತ ದಾಪುಗಾಲು: ಉಪರಾಷ್ಟ್ರಪತಿ ಜಗದೀಪ ದಿನಕರ್‌

| Published : Mar 02 2024, 01:46 AM IST

ಅಂದಾಜು ಸಿಗದಷ್ಟು ಅಭಿವೃದ್ಧಿಯತ್ತ ದಾಪುಗಾಲು: ಉಪರಾಷ್ಟ್ರಪತಿ ಜಗದೀಪ ದಿನಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಶ್ರಮಿಸುತ್ತಿದ್ದಾರೆ. ಇಂದು ವಿದೇಶಿಗರು ಭಾರತದ ಸಂಸ್ಕೃತಿ, ಆಚಾರ, ಸಂಪ್ರದಾಯ ಅನುಕರಣೆ ಮಾಡುವಂತಾಗಿರುವುದು ಹೆಮ್ಮೆಯ ಸಂಗತಿ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜಗತ್ತಿನಲ್ಲಿ ಬೇರೆ ರಾಷ್ಟ್ರಗಳಿಗೆ ಅಂದಾಜು ಸಿಗದಷ್ಟು ಭಾರತ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. 2047ಕ್ಕೆ "ವಿಕಸಿತ ಭಾರತ "ವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಹೇಳಿದರು.

ಶುಕ್ರವಾರ ಸಂಜೆ ನಗರದ ನೂತನ ಕೋರ್ಟ್ ಹತ್ತಿರ ನಿರ್ಮಿಸಿರುವ ಎಂ.ಎಂ. ಜೋಶಿ ಸೂಪರ್ ಸ್ಪೇಷಾಲಿಟಿ ಕಣ್ಣಿನ (ಐಸಿರಿ) ಆಸ್ಪತ್ರೆಯನ್ನು ಇಲ್ಲಿನ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಶ್ರಮಿಸುತ್ತಿದ್ದಾರೆ. ಇಂದು ವಿದೇಶಿಗರು ಭಾರತದ ಸಂಸ್ಕೃತಿ, ಆಚಾರ, ಸಂಪ್ರದಾಯ ಅನುಕರಣೆ ಮಾಡುವಂತಾಗಿರುವುದು ಹೆಮ್ಮೆಯ ಸಂಗತಿ. ಆಯುಷ್ಮಾನ ಭಾರತ, ಸ್ವಚ್ಛ ಭಾರತ, ಉಜ್ವಲ ಯೋಜನೆ ಸೇರಿದಂತೆ ಹಲವು ಬಡವರ ಪರವಾಗಿರುವ ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ ಸದೃಢ ರಾಷ್ಟ್ರವಾಗಿಸಲು ಶ್ರಮಿಸುತ್ತಿದ್ದಾರೆ.

ಆರೋಗ್ಯವೇ ಭಾಗ್ಯ:

ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಬೇರೆ ದೇಶಗಳಿಗೆ ಹೋಗಬೇಕಾದ ಅನಿವಾರ್ಯತೆಯಿತ್ತು. ಆದರೆ, ಈಗ ನಮ್ಮಲ್ಲಿಯೇ ಉತ್ತಮ ಚಿಕಿತ್ಸಾ ಸೌಲಭ್ಯವಿದೆ. ಆಯುಷ್ಮಾನ್ ಭಾರತದಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ನಾವು ಎಷ್ಟೇ ಪ್ರತಿಭಾವಂತರು, ಶ್ರೀಮಂತರಾಗಿದ್ದು, ಆರೋಗ್ಯವಂತರಾಗಿರದೇ ಹೋದಲ್ಲಿ ಸಮಾಜಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ.

ನಾವೆಲ್ಲರೂ ಹೆಮ್ಮೆ ಪಡೋಣ:

ಆರೋಗ್ಯವೇ ಭಾಗ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಭಾರತ 2047ಕ್ಕೆ ನಂ.1 ರಾಷ್ಟ್ರವಾಗುವ ಎಲ್ಲ ಅವಕಾಶಗಳು ಇವೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತಿಗೆ ಮಾದರಿಯಾಗಿಸಿ ಯೋಗವನ್ನು ಪರಿಚಯಿಸಿದ್ದಾರೆ. ನಾವು ಭಾರತದ ಮಹಾನ್ ನಾಗರಿಕರಾಗಿದ್ದು, ದೇಶದ ಬಗ್ಗೆ ಹೆಮ್ಮೆ ಪಡೋಣ ಎಂದರು.

ಬೆಳಕು ನೀಡುವ ಕಾರ್ಯ:

ಪದ್ಮಶ್ರೀ ಡಾ. ಎಂ.ಎಂ. ಜೋಶಿ ರೋಗಿಗಳ ಪಾಲಿಗೆ ದೇವಮಾನವರಿದ್ದಂತೆ. ಮಾನವೀಯತೆ, ಸೇವಾಗುಣದೊಂದಿಗೆ ಲಕ್ಷಾಂತರ ರೋಗಿಗಳಿಗೆ ನೇತ್ರಚಿಕಿತ್ಸೆಯ ಮೂಲಕ ಅವರ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡಿದ್ದಾರೆ. ವೈದ್ಯರನ್ನು ದೇವರವೆಂದು ಭಾವಿಸಲಾಗುತ್ತದೆ. ಇಂದು ವೈದ್ಯಕೀಯ ಕ್ಷೇತ್ರ ಹಣಗಳಿಕೆಯ ಕ್ಷೇತ್ರವಾಗುತ್ತಿದೆ. ಆದರೆ, ಡಾ. ಎಂ.ಎಂ. ಜೋಶಿ ಆಸ್ಪತ್ರೆ ಸೇವಾಕಾರ್ಯ ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿರುವುದು ಶ್ಲಾಘನೀಯವಾಗಿದೆ. ಮನಸ್ಸು ಶುದ್ಧವಾಗಿಟ್ಟುಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಖಂಡಿತವಾಗಿ ಸಾಧನೆ ನಿಮ್ಮದಾಗುತ್ತದೆ ಎಂಬುದಕ್ಕೆ ಡಾ. ಜೋಶಿ ಉತ್ತಮ ನಿದರ್ಶನ ಎಂದರು.

ಮತ್ತಷ್ಟು ಸೇವೆ ಮಾಡಲಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಅನೇಕರು ಹಣ ಮಾಡಲು ವೈದ್ಯಕೀಯ ವೃತ್ತಿಗೆ ಬರುತ್ತಾರೆ. ಆದರೆ, ಡಾ. ಎಂ.ಎಂ. ಜೋಶಿಯವರು ಸೇವಾ ಮನೋಭಾವದಿಂದಲೇ ಗುರುತಿಸಿಕೊಂಡವರು. ಈ ವರೆಗೆ 4.5 ಲಕ್ಷ ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಶಿಬಿರದ ಮೂಲಕ ಜನರಿಗೆ ಕಣ್ಣಿನ ಸುರಕ್ಷತೆ ಹಾಗೂ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಹ ಮಾಡಿದ್ದಾರೆ. ಜನರ ಪ್ರೀತಿಯ ವ್ಯಕ್ತಿ ಜೋಶಿ ಆಗಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಸೇವೆ ಮಾಡಲಿ ಎಂದರು.

ಜಾಗೃತಿ ಕಾರ್ಯ ಶ್ಲಾಘನೀಯ:

ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಮನೆ ಮನೆಯಲ್ಲಿ ಪದ್ಮಶ್ರೀ ಎಂ.ಎಂ. ಜೋಶಿಯವರ ಸೇವೆ ನೆನಪಿಟ್ಡುಕೊಳ್ಳುವಂತೆ ಕೆಲಸ‌ ಮಾಡಿದ್ದಾರೆ. ಅವರು ಮಾನವೀಯ ಮತ್ತು ದೈವಿಕ ಗುಣ ಹೊಂದಿದವರು. ಆ ದೈವಿಕ ಗುಣದ ಮೂಲಕ ಆಸ್ಪತ್ರೆಯ ಸೇವಾ ಕಾರ್ಯ ಮಾಡುತ್ತಿದ್ದಾರೆ. ಲಕ್ಷಾಂತರ ಬಡ ಜನರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಬೆಳಕನ್ನು ನೀಡುವ ಕೆಲಸ ಮಾಡಿದ್ದಾರೆ. ಶಿಬಿರಗಳ ಮೂಲಕ ಪ್ರತಿ ಹಳ್ಳಿಹಳ್ಳಿಯಲ್ಲಿ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಪದ್ಮಶ್ರೀ ಡಾ. ಎಂ.ಎಂ. ಜೋಶಿ ಮಾತನಾಡಿದರು. ಈ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಮಾನೆ, ಎಂ.ಆರ್. ಪಾಟೀಲ, ಪಾಲಿಕೆ ಮೇಯರ್ ವೀಣಾ ಭರದ್ವಾಡ, ಎಂಎಂ ಜೋಶಿ ಆಸ್ಪತ್ರೆಯ ಗುರುಪ್ರಸಾದ್, ಪ್ರಮೀಳಾ ಜೋಶಿ, ಶ್ರೀನಿವಾಸ ಜೋಶಿ ಸೇರಿದಂತೆ ಹಲವರಿದ್ದರು.