ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

| Published : Apr 20 2024, 01:13 AM IST

ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗ ವಿಧಾನಸಭೆ ಕ್ಷೇತ್ರದ ಹಲಗತ್ತಿ, ಲಿಂಗದಾಳ, ಇಡಗಲ್, ಚಿಕ್ಕತಡಸಿ‌, ಹಂಪಿಹೊಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮತಯಾಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಳೆದ ಎರಡು ದಿನಗಳಿಂದ ರಾಮದುರ್ಗ ವಿಧಾನಸಭಾ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರಿಗೆ ಕ್ಷೇತ್ರದ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತಿದ್ದಾರೆ. ರಾಮದುರ್ಗದ ಹಲಗತ್ತಿ, ಲಿಂಗದಾಳ, ಇಡಗಲ್, ಚಿಕ್ಕತಡಸಿ‌ ಗ್ರಾಮಗಳಲ್ಲಿ ಪ್ರಚಾರ ಮುಗಿಸಿದ ಸಚಿವರು, ಹಂಪಿಹೊಳಿಗೆ ಆಗಮಿಸಿದರು. ಹಂಪಿಹೊಳಿಯಲ್ಲಿ ಸಚಿವರಿಗೆ ಅಚ್ಚರಿ ಕಾದಿತ್ತು. ಸಚಿವರಿಗೆ ವಿಶೇಷ ಚೇತನ ಯುವತಿ ರೋಷನ್ ಬೀ ಎಂಬುವರು ಹೂವು ಕೊಟ್ಟು ಸ್ವಾಗತಿಸಿದರು. ಸಚಿವರನ್ನು ಕಂಡು ಖುಷಿಗೊಂಡ ರೋಷನ್ ಬೀ, ಅವರ ಕೈಹಿಡಿದು ಪ್ರಚಾರದ ಸ್ಥಳದವರೆಗೂ ಹೆಜ್ಜೆ ಹಾಕಿದರು.

ರೋಷನ್ ಬೀ ಅಭಿಮಾನ ಕಂಡು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕೆಯೊಂದಿಗೆ ಮುಕ್ತವಾಗಿ ಮಾತನಾಡುತ್ತ ಸಾಗಿದರು‌. ಸಚಿವರನ್ನು ಇಷ್ಟು ದಿನ ಕೇವಲ ಟಿವಿ, ಪೇಪರ್ ಗಳಲ್ಲಿ ನೋಡುತ್ತಿದ್ದೆ. ಇವತ್ತು ಅವರನ್ನು ಹತ್ತಿರದಿಂದ ನೋಡಿ ಖುಷಿ‌ ಆಯಿತು. ನನಗೆ ಸ್ವಂತ ಮನೆ ಇಲ್ಲ. ನನ್ನ ಅಕ್ಕ ಕೂಡ ವಿಕಲಚೇತನಳು, ಆಪರೇಷನ್ ಆಗಿದೆ. ನನ್ನ ಕೆಲವೊಂದು ಸಮಸ್ಯೆಗಳನ್ನು ಸಚಿವರ ಬಳಿ ಹೇಳಿರುವೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ರೋಷನ್ ಬೀ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಮದುವೆ ಕಾರ್ಯಕ್ರಮದಲ್ಲಿ ಭಾಗಿ: ಬಳಿಕ ರೋಷನ್ ಬೀ ಮನವಿ ಮೇರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಂಬಂಧಿಕರ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜೊತೆಗೆ ರೋಷನ್ ಬೀ ತಮ್ಮ ಕುಟುಂಬ ಸದಸ್ಯರನ್ನು ಸಚಿವರಿಗೆ ಪರಿಚಯಿಸಿದರು. ವಿಕಲ ಚೇತನಳ ಜೀವನೋತ್ಸಾಹ, ಸಚಿವರ ಬಗೆಗಿನ ಪ್ರೀತಿ, ಆಕೆಯ ಕುರಿತ ಸಚಿವರ ಕಾಳಜಿ ಕಂಡು ಹರ್ಷಗೊಂಡರು.ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಉತ್ತಮ ವಾತಾವರಣ

ರಾಮದುರ್ಗ: ಬಿಜೆಪಿಯವರು ಎಷ್ಟೇ ಅಬ್ಬರಿಸಿದರೂ ರಾಮದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರಿಗೆ ಮುನ್ನಡೆ ಸಿಗುವುದು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಪರ ಕ್ಷೇತ್ರದಾದ್ಯಂತ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ರಾಮದುರ್ಗ ವಿಧಾನಸಭಾ ಕ್ಷೇತ್ರದ ಸಾಲಹಳ್ಳಿಯಲ್ಲಿ ಹುಲಕುಂದ ಹಾಗೂ ಬಟಕುರ್ಕಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮದುರ್ಗದಿಂದ 20 ರಿಂದ 25 ಸಾವಿರ ಮತಗಳು ಮುನ್ನಡೆ ಸಿಗುವುದು ಗ್ಯಾರಂಟಿ. ಕ್ಷೇತ್ರದಲ್ಲಿ ಒಗ್ಗಟಾಗಿ ಕೆಲಸ ಮಾಡಿ, ಮುನ್ನಡೆ ನೀಡೋಣ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಪುತ್ರ ಎಂದು ಮೃಣಾಲ್‌ ಅವರನ್ನು ಕಣಕ್ಕಿಳಿಸಿಲ್ಲ. ಕಳೆದ 11 ವರ್ಷಗಳಿಂದ ಪಕ್ಷದ ಯುವ ಘಟಕದಲ್ಲಿ ಕೆಲಸ ಮಾಡಿದ್ದು, ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಜೊತೆಗೆ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. ಮೃಣಾಲ್‌ ಹೆಬ್ಬಾಳಕರ್ ವಿದ್ಯಾವಂತನಾಗಿದ್ದು, ಕ್ಷೇತ್ರದ ಪರ ಕಾಳಜಿ ಹೊಂದಿದ್ದಾನೆ ಎಂದು ಹೇಳಿದರು.

ಸಚಿವರಾಗುವ ಕನಸಿನಲ್ಲಿ ಬಿಜೆಪಿ ಅಭ್ಯರ್ಥಿಗಳು:

ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚಿಸದ ಬಿಜೆಪಿಯವರಿಗೆ ಅಧಿಕಾರ ದಾಹ ಮಾತ್ರ ನಿಂತಿಲ್ಲ. ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಸಚಿವರಾಗಲು ರಾಜ್ಯದಿಂದ ದೊಡ್ಡ ದಂಡೇ ರೆಡಿ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಕೂಡ ಗೆದ್ದರೆ ಸಚಿವ ಆಗುತ್ತೇನೆ ಅಂತ ಮತ ಕೇಳುತ್ತಿದ್ದಾರೆ. ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಸ್ಪರ್ಧಿಸಿರುವ ಎಲ್ಲರೂ ಸಚಿವರಾಗುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸದ ವ್ಯಕ್ತಿ ಇಂದು ಬೆಳಗಾವಿಯಲ್ಲಿ ಮತ ಕೇಳಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ನನ್ನ ಹಾಗೂ ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ಕೆಲಸ ಮಾಡಲಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರದೀಪ ಪಟ್ಟಣ, ಹಾಸ್ಯ ಕಲಾವಿದ ರಾಜು ತಾಳಿಕೋಟೆ, ಕೆಪಿಸಿಸಿ ಸದಸ್ಯರಾದ ರಾಜೇಂದ್ರ ಪಾಟೀಲ, ಸುರೇಶ ಪತ್ಯಾಪುರ, ರಾಮದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಶಿದ್ದಲಿಂಗಪ್ಪನವರ್, ಮುಂಬಾ ರೆಡ್ಡಿ, ಹನುಮಂತ ವಡ್ಡರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಬೃಹತ್ ಬೈಕ್ ರ್‍ಯಾಲಿ:

ಬೆಳಗಾವಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಬೃಹತ್ ಬೈಕ್ ರ್‍ಯಾಲಿ ಮೂಲಕ ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೂಮಳೆ ಸುರಿಸಿ ಸಂಭ್ರಮಿಸಿದರು.

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಯಣ್ಣ ಮೂರ್ತಿಗೆ ಮೃಣಾಲ್‌ ಹೆಬ್ಬಾಳಕರ್‌ ಹೂಮಾಲೆ ಹಾಕಿದರು. ನೂರಾರು ಯುವಕರು ಬೈಕ್ ಏರಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಹೊರಟರೆ, ಮೃಣಾಲ್‌ ಹೆಬ್ಬಾಳಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಮಹಿಳಾ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಮಂಜುಳಾ ದೇವರಡ್ಡಿ, ಪ್ರದೀಪ ಪಟ್ಟಣ ತೆರೆದ ವಾಹನದಲ್ಲಿ ಜನರತ್ತ ಕೈಬೀಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊರಟ ಬೈಕ್ ರ್‍ಯಾಲಿ ಬಸವ ಮಾರ್ಗದ ಮೂಲಕ ಹುತಾತ್ಮ ವೃತ್ತದಿಂದ ಅಂಬೇಡ್ಕರ್‌ ಮಾರ್ಗದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಗ್ರಂಥಾಲಯದವರೆಗೆ ನಡೆಯಿತು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೃಣಾಲ್‌ ಹೆಬ್ಬಾಳಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹಾಗೂ ಕಾಂಗ್ರೆಸ್‌ ಮುಖಂಡರ ಪರ ಜಯಘೊಷಣೆ ಕೂಗಿದರು. ವ್ಯಾಪಕ ಬೆಂಬಲ ಕಂಡು ಮುಖಂಡರು ಸಂತಸಗೊಂಡರು.