ನಗರಸಭಾಧ್ಯಕ್ಷ ವರಸಿದ್ಧಿ ವಿರುದ್ಧ ಅನರ್ಹ ಅಸ್ತ್ರ ಪ್ರಯೋಗ

| Published : Nov 04 2023, 11:45 PM IST

ನಗರಸಭಾಧ್ಯಕ್ಷ ವರಸಿದ್ಧಿ ವಿರುದ್ಧ ಅನರ್ಹ ಅಸ್ತ್ರ ಪ್ರಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭಾಧ್ಯಕ್ಷ ವರಸಿದ್ಧಿ ವಿರುದ್ಧ ಅನರ್ಹ ಅಸ್ತ್ರ ಪ್ರಯೋಗ
ಅಧಿಕಾರ ದುರುಪಯೋಗ । ಕ್ಯಾಲೆಂಡರ್‌ ಮುದ್ರಣಕ್ಕೆ 15 ಲಕ್ಷ ರು.ವೆಚ್ಚ । ಟೆಂಡರ್‌ ಬಿಲ್‌ ಪಾವತಿಯ ಫೈಲ್‌ಗಳಿಗೆ ಸಹಿ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ತರಲು ಈಗಾಗಲೇ ಕಸರತ್ತು ಶುರು ಮಾಡಿರುವ ಬಿಜೆಪಿ ಹಾಗೂ ಜೆಡಿಎಸ್‌ ನಗರಸಭಾ ಸದಸ್ಯರು, ಎರಡನೇ ಹಂತದಲ್ಲಿ ಅವರನ್ನು ಅನರ್ಹಗೊಳಿಸುವ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕ್ಯಾಲೆಂಡರ್‌ ಮುದ್ರಣಕ್ಕೆ 15 ಲಕ್ಷ, ನಿಯಮ ಉಲ್ಲಂಘಿಸಿ ಕಾರ್‌ ಖರೀದಿ, ಕಾಮಗಾರಿ ಬಿಲ್‌ ಪಾವತಿ ಫೈಲ್‌ಗಳಿಗೆ ಸಹಿ, ನಗರಸಭೆ ಹಣ ದುರುಪಯೋಗ, ಹೀಗೆ ಹಲವು ಆರೋಪಗಳ ಪಟ್ಟಿ ಸಹಿತ ಮನವಿ ಪತ್ರವನ್ನು ಚಿಕ್ಕಮಗಳೂರು ನಗರಸಭೆ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಶನಿವಾರ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಟಿ. ರಾಜಶೇಖರ್‌, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅವರು, ಕಾನೂನು ಬಾಹಿರವಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಿ, ನಗರಸಭೆಯ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದಾರೆ. ಅವರನ್ನು ಅಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. ಪೌರಾಡಳಿತ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ತಾವು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. ತನಿಖಾ ತಂಡಕ್ಕೆ ಅಗತ್ಯ ದಾಖಲೆ ನೀಡಲು ಸಿದ್ಧರಿದ್ದೇವೆ ಎಂದರು. ಜೆಡಿಎಸ್‌ನ ನಗರಸಭಾ ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ನಗರಸಭೆ ಅಧ್ಯಕ್ಷರಿಗೆ ಆಪ್ತ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲು ಅವಕಾಶ ಇಲ್ಲ. ಆದರೂ ಆಪ್ತ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಅವರಿಗೆ ಯಾವ ಮೂಲದಿಂದ ಸಂಬಳ ನೀಡುತ್ತೀರಾ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷರು, ತಮ್ಮ ಕೊಠಡಿ ನವೀಕರಣಗೊಳಿಸಿದ್ದಾರೆ. ಇಲ್ಲಿಗೆ ನಗರಸಭೆ ನಿಧಿಯಿಂದ 15 ಲಕ್ಷ ರು. ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಿದ್ದಾರೆ. 21 ಲಕ್ಷ ರು. ವೆಚ್ಚದ ವಾಹನವನ್ನು ಅಧಿಕಾರ ವ್ಯಾಪ್ತಿ ಮೀರಿ ಅನುಮತಿ ಪಡೆಯದೆ ಖರೀದಿಸುವ ಮೂಲಕ ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು. ಕ್ಯಾಲೆಂಡರ್‌ ಮುದ್ರಣ ವಿಷಯ ಸಾಮಾನ್ಯಸಭೆ ಮುಂದೆ ತಂದು, ಅಧಿಕಾರ ವ್ಯಾಪ್ತಿ ಮೀರಿ 11 ಲಕ್ಷ ರು. ಬಿಲ್‌ ಮಾಡಿಸಿಕೊಂಡಿದ್ದಾರೆ. 16 ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅನೇಕ ಹೊಸ ಬಡಾವಣೆಗಳ ಕಂದಾಯ ಭೂಮಿಗೆ ಈ ಖಾತೆಗಳನ್ನು ಮಾಡಿರುವುದು ಸೇರಿದಂತೆ ಇವರ ಮೇಲೆ ಈ ಹಿಂದೆ ಮಾಡಿದ ಬಹುತೇಕ ಆರೋಪಗಳು ಸಾಬೀತಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ನಗರಸಭೆಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು. ನಿಯಮದ ಪ್ರಕಾರ ಅಧ್ಯಕ್ಷರು ಪ್ರತಿ ತಿಂಗಳು ಸಾಮಾನ್ಯಸಭೆ ಕರೆಯಬೇಕು. ಆದರೆ, ಅವರು ಕಳೆದ 22 ತಿಂಗಳ ಅಧಿಕಾರದ ಅವಧಿಯಲ್ಲಿ 5 ಬಾರಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ 15 ದಿನದ ಒಳಗಾಗಿ ಕಳುಹಿಸಬೇಕು. ಆದರೆ, ಈವರೆಗೆ ಯಾವುದೇ ಸಭೆಯ ಮಾಹಿತಿಯನ್ನು ನೀಡಿಲ್ಲ ಎಂದರು. ಸಾರ್ವಜನಿಕರ ಹಣವನ್ನು ಕಾನೂನು ಬಾಹಿರವಾಗಿ ದುಂದು ವೆಚ್ಚ ಮಾಡಿರುವ ನಗರಸಭೆ ಅಧ್ಯಕ್ಷರನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ 17 ಮಂದಿ ಬಿಜೆಪಿ ಸದಸ್ಯರು ಹಾಜರಿದ್ದರು. 4 ಕೆಸಿಕೆಎಂ 1 ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅವರನ್ನು ಅಧ್ಯಕ್ಷ ಹಾಗೂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ ನಗರಸಭೆಯ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.