ತಲುಪದ ಸಾಲಮನ್ನಾ ಯೋಜನೆ: ವರದಿ ನೀಡಲು ತಂಗಡಗಿ ಸೂಚನೆ

| Published : Jun 25 2024, 12:30 AM IST

ಸಾರಾಂಶ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಮಾಡಿದ್ದ ರೈತರ ಸಾಲಮನ್ನಾ ಯೋಜನೆ ಕ್ಷೇತ್ರದ ೨೪ ರೈತರಿಗೆ ತಲುಪಿಲ್ಲ. ಈ ಕುರಿತು ಜು. ೫ರೊಳಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ಅಭಯ ಹಸ್ತ ಗ್ರಾಮಸ್ಥರ ಭೇಟಿ ಮತ್ತು ಕುಂದುಕೊರತೆ ವಿಚಾರಣೆ ಕಾರ್ಯಕ್ರಮದಲ್ಲಿ । ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕಾರಟಗಿ

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಮಾಡಿದ್ದ ರೈತರ ಸಾಲಮನ್ನಾ ಯೋಜನೆ ಕ್ಷೇತ್ರದ ೨೪ ರೈತರಿಗೆ ತಲುಪಿಲ್ಲ. ಈ ಕುರಿತು ಜು. ೫ರೊಳಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಮುಷ್ಟೂರು, ಡಗ್ಗಿ, ಮುಷ್ಟೂರು ಕ್ಯಾಂಪ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಯ ಹಸ್ತ ಗ್ರಾಮಸ್ಥರ ಭೇಟಿ ಮತ್ತು ಕುಂದುಕೊರತೆ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಗ್ರಾಮದ ರೈತರು ಗ್ರಾಮದ ೨೪ ರೈತರಿಗೆ ಸುಮಾರು ₹೧೨ ಲಕ್ಷ ಸಾಲಮನ್ನಾ ಹಣ ಬಂದಿಲ್ಲ. ಅದಕ್ಕಾಗಿ ನಿತ್ಯ ವಿವಿಧ ಕಚೇರಿಗಳಿಗೆ ಅಲೆದಾಡುತ್ತಿದ್ದು, ಅಧಿಕಾರಿಗಳು ಈ ಕುರಿತು ಸ್ಪಷ್ಟವಾಗಿ ಹೇಳುತ್ತಿಲ್ಲ, ಕೂಡಲೇ ನಮ್ಮ ಸಾಲಮನ್ನಾ ಮಾಡಿಸಿ ಎಂದು ಮನವಿ ಮಾಡಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದಕೇಳಿದ ಸಚಿವರು, ಸಮಸ್ಯೆ ಕುರಿತು ಪರಿಹರಿಸುವ ನಿಟ್ಟಿನಲ್ಲಿ ಜು.೫ ರೊಳಗೆ ವರದಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಸಾಲಮನ್ನಾದ ಬಗ್ಗೆ ಕೃಷಿ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಅಭಿವೃದ್ಧಿ ಕುಸಿತ:

ಕಳೆದ ಐದು ವರ್ಷಗಳಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸೂಚ್ಯಂಕ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಇನ್ನು ಅನುದಾನ, ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳು, ಸರಕಾರದ ಯೋಜನೆಗಳು ಕ್ಷೇತ್ರದಲ್ಲಿ ಅಧೋಗತಿಗೆ ಇಳಿದಿವೆ. ಮಾಜಿ ಶಾಸಕ ಬಸವರಾಜ ದಡೆಸೂಗೂರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಇರುವ ಹಿನ್ನೆಲೆ ಕ್ಷೇತ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಕುಸಿಯಲು ಮೂಲ ಕಾರಣ ಎಂದರು. ಈಗ ಗ್ರಾಮಕ್ಕೆ ಬೇಕಾದ ಮೂಲ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಿಕೊಡುತ್ತೇನೆ ಎಂದ ಭರವಸೆ ನೀಡಿದರು.

ಹಕ್ಕುಪತ್ರ ವಿತರಿಸುವ ಭರವಸೆ:

ಮುಷ್ಟೂರು ಡಗ್ಗಿ ಗ್ರಾಮಸ್ಥರು ಹಕ್ಕುಪತ್ರ ವಿತರಿಸುವಂತೆ ಮನವಿ ಮಾಡಿದರು. ಆಗ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಸರ್ವೇ ನಂ ೨೦೭ರಲ್ಲಿ ೩೭ ಕುಟುಂಬಗಳು, ೨೧೦ ರಲ್ಲಿ ೩೪ ಕುಟುಂಬಗಳು ವಾಸಿಸುತ್ತಿದ್ದು, ಈಗಾಗಲೇ ಹಕ್ಕು ಪತ್ರ ರೆಡಿಯಾಗಿವೆ. ಆದರೆ ಸರ್ವೇ ನಂ ೨೦೬ ರಲ್ಲಿ ೫೩ ಕುಟುಂಬಗಳು ವಾಸಿಸುತ್ತಿದ್ದು, ಆ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಹಕ್ಕುಪತ್ರ ನೀಡುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು. ಆಗ ಸಚಿವ ತಂಗಡಗಿ ಅರಣ್ಯ ಇಲಾಖೆ ಇಲಾಖೆ ಕಾರ್ಯದರ್ಶಿಯವರ ಜತೆಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿರುವುದರಿಂದ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮಾತನಾಡಿ, ೧೯೭೯ರಲ್ಲಿ ಸಹಕಾರ ಸಂಘ ಪ್ರಾರಂಭವಾಗಿದ್ದು ಅಂದಿನಿಂದ ಆಸ್ತಿಗೆ ಕರ ವಸೂಲಿ ಕಟ್ಟುತ್ತಿದ್ದರೂ ಸಂಘದ ಹೆಸರಿನಲ್ಲಿ ಅಧಿಕೃತ ದಾಖಲೆಗಳು ಇಲ್ಲವಾಗಿದೆ. ಕೂಡಲೇ ಪರಿಹರಿಸಿ ಸಂಘಕ್ಕೆ ಮೀಟಿಂಗ್ ಹಾಲ್ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಶಿಕ್ಷಕರ ಹಾಗೂ ಕೊಠಡಿ ಕೊರತೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ನೇಮಕ, ಪಶು ಆಸ್ಪತ್ರೆ ನಿರ್ಮಾಣ, ಗಂಗಾವತಿ -ಮುಷ್ಟೂರು ರಸ್ತೆ, ಮುಷ್ಟೂರು ಗ್ರಾಮವನ್ನು ಕಾರಟಗಿ ಠಾಣೆಗೆ ಸೇರಿಸುವಂತೆ ಹಾಗೂ ಹಲವು ಬೇಡಿಕೆಗಳನ್ನು ಇಟ್ಟರು. ಇದಕ್ಕೆ ಸ್ಪಂದಿಸಿದ ಸಚಿವರು ಈಡೇರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ್, ರೆಡ್ಡಿ ಶ್ರೀನಿವಾಸ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.ಅಧಿಕಾರಿಗಳ ವಿರುದ್ಧ ಗರಂ:

ಕಾರ್ಯಕ್ರಮಕ್ಕೆ ಗೈರಾಗಿದ್ದ ಸಿಡಿಒ ಬಸಪ್ಪ ಗಾಳಿ, ಸಿಡಿಪಿಒ ವಿರೂಪಾಕ್ಷಯ್ಯ ಸ್ವಾಮಿ, ತಾಲೂಕು ಅರಣ್ಯಾಧಿಕಾರಿ ಸುಭಾಷ ಮೇಲೆ ಸಚಿವ ತಂಗಡಗಿ ಗರಂ ಆದರು. ನಾವು ಬಂದಿರುವುದು ಜನಸಾಮಾನ್ಯರ ಕೆಲಸ ಮಾಡುವುದಕ್ಕಾಗಿ ದನ ಕಾಯುವುದಕ್ಕಲ್ಲ ಎಂದು ಕೂಡಲೇ ಅವರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಾಪಂ ಇಒ ಲಕ್ಷ್ಮೀ ದೇವಿಗೆ ಸೂಚಿಸಿದರು.