ಗಜೇಂದ್ರಗಡದಲ್ಲಿ ನನಸಾಗದ ಬಡವರ ಮನೆ ನಿರ್ಮಾಣ ಕನಸು

| Published : Jul 02 2024, 01:40 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಹಕ್ಕುಪತ್ರ ನೀಡಲಾಗಿದ್ದರೂ, ಮೂಲಸೌಲಭ್ಯ ಕಲ್ಪಿಸದ ಕಾರಣ ಮನೆ ನಿರ್ಮಾಣದ ಕನಸು ಈಡೇರುತ್ತಿಲ್ಲ. ಅವೈಜ್ಞಾನಿಕ ಬಡಾವಣೆಗಳಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಹಕ್ಕುಪತ್ರ ನೀಡಲಾಗಿದ್ದರೂ, ಮನೆ ನಿರ್ಮಾಣದ ಕನಸು ಈಡೇರುತ್ತಿಲ್ಲ. ಇನ್ನೊಂದೆಡೆ ಗುಡಿಸಲುಮುಕ್ತ ಮಾಡುವ ಸ್ಥಳೀಯ ಆಡಳಿತದ ಆಶಯವೂ ಪೂರ್ಣವಾಗುತ್ತಿಲ್ಲ.

12 ವರ್ಷಗಳಿಂದ ಸ್ಥಳೀಯ ಆಡಳಿತ ಬಡವರನ್ನು ಗುರುತಿಸಿ ವಿವಿಧ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ನೀಡಿದೆ. ಆದರೆ ಮೂಲಸೌಲಭ್ಯ ಕಲ್ಪಿಸದೇ ಇರುವುದು ಮತ್ತಿತರ ಕಾರಣಗಳಿಂದ ಮನೆ ನಿರ್ಮಾಣ ಸಾಧ್ಯವಾಗಿಲ್ಲ.

ಸಮೀಪದ ಉಣಚಗೇರಿ (ವಾರ್ಡ್‌ ನಂ. ೨೩)ರ ಸರ್ವೇ ನಂಬರ್ ೨೩೦/೨ರಲ್ಲಿ ೨೦೧೨-೧೩ರಲ್ಲಿ ಒಟ್ಟು ೨೨೨ ಪ್ಲಾಟ್‌ಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲಿ ಈಗ ೫-೧೦ ಮನೆಗಳ ನಿರ್ಮಾಣವಾಗುತ್ತಿವೆ. ನಿಗದಿತ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸದ ಕಾರಣ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇತ್ತ ಪುರಸಭೆಯಿಂದ ಕಳೆದ ವರ್ಷ ೧೮೩/೧ ಹಾಗೂ ೧೮೩/೩ರ ಅಂದಾಜು ೯ ಎಕರೆ ಜಮೀನಿನಲ್ಲಿ ೩೫೪ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅದರಲ್ಲಿ ೩೦೮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ೧೮ ಉತಾರ ಪುರಸಭೆಯಲ್ಲಿದೆ. ೨೮ ಉತಾರಗಳು ತಾಂತ್ರಿಕ ಕಾರಣದಿಂದ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ರಾಂಪುರ ಬಳಿ ನಿಗದಿಪಡಿಸಿದ ಜಾಗದಲ್ಲಿ ಈ ವರೆಗೂ ಪುರಸಭೆ ಒಂದೇ ಒಂದು ಕಲ್ಲು ಎತ್ತಿಡುವ ಕೆಲಸವನ್ನು ಸಹ ನಡೆಸಿಲ್ಲ.

ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ನೂರಾರು ಮನೆಗಳಲ್ಲಿ ಭಾಗಶಃ ಮನೆಗಳು ಇತ್ತ ಪೂರ್ಣವೂ ಅಲ್ಲ ಅತ್ತ ಅಪೂರ್ಣವೂ ಅಲ್ಲ ಎನ್ನುವ ಸ್ಥಿತಿಯಲ್ಲಿವೆ. ಕೆಲವು ಫಲಾನುಭವಿಗಳು ಮನೆ ಕಟ್ಟಲು ಸಾಲ ಮಾಡಲು ಮುಂದಾದರೂ ಸರ್ಕಾರದ ಯೋಜನೆ ಎನ್ನುವ ಕಾರಣಕ್ಕೆ ಅವರಿಗೆ ಸಾಲ ಸಹ ಸಿಗುತ್ತಿಲ್ಲ. ಇತ್ತ ಮನೆಯನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕೆಲವು ಫಲಾನುಭವಿಗಳು ಮುಖ್ಯಾಧಿಕಾರಿಗೆ, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ.

ಬಡಾವಣೆ ಸ್ಥಿತಿ: ಪಟ್ಟಣದಲ್ಲಿ ಸರ್ಕಾರದ ಯೋಜನೆಗಳು ಇಂತಹ ಸ್ಥಿತಿಯಲ್ಲಿದ್ದರೆ ಇನ್ನು ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ಆಮಿಷ ಒಡ್ಡಿ ನಿವೇಶನ ಮಾರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಬಡಾವಣೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಕೆಲವೆಡೆ ಕಾಮಗಾರಿ ಅಪೂರ್ಣವಾದರೆ ಇನ್ನು ಕೆಲವೆಡೆ ಕಳಪೆಯಾಗಿದೆ. ಹೀಗಾಗಿ ನಿವೇಶನ ಖರೀದಿಸಿದವರಿಗೆ ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯಾಗದ ಬಡಾವಣೆ ನಿವೇಶನ ಮಾರಾಟ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಉದ್ಯಮಿಗಳು ಬಡಾವಣೆ ಅಭಿವೃದ್ಧಿಪಡಿಸದಿದ್ದರೆ ಅಂತಹ ಬಡಾವಣೆಯ ಕೆಲವು ಪ್ಲಾಟ್‌ಗಳನ್ನು ಪುರಸಭೆ ಹರಾಜು ಮಾಡಿ ಬಡಾವಣೆ ಅಭಿವೃದ್ಧಿಪಡಿಸಬೇಕು. ಆದರೆ ಈಗಾಗಲೇ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ ಎಂದು ಕಾರಣ ನೀಡಿ ಜಾರಿಕೊಳ್ಳುವುದು ಸಾಮಾನ್ಯ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದರು.

ಪುರಸಭೆಯ ಇಂತಹ ಅವಾಂತರಗಳಿಗೆ ಮೇಲಧಿಕಾರಿಗಳು ಕಡಿವಾಣ ಹಾಕಿ, ಜನರ ಸಂಕಷ್ಟಕ್ಕೆ ಪರಿಹಾರ ನೀಡಲು ಮುಂದಾಗಬೇಕು ಎಂಬುದು ಜನತೆಯ ಆಶಯವಾಗಿದೆ.ಪಟ್ಟಣದಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸದ ಕೆಲವು ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇನ್ನು ಕೆಲವು ಮಾಲೀಕರಿಗೆ ಶೀಘ್ರ ನೋಟಿಸ್ ನೀಡಲಾಗುತ್ತದೆ ಎಂದು ಪುರಸಭೆ ಕಂದಾಯ ನಿರೀಕ್ಷಕ ಸಿ.ಡಿ. ದೊಡ್ಡಮನಿ ಹೇಳುತ್ತಾರೆ.ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಹುತೇಕ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಅಲ್ಲದೆ ನಿರ್ಮಿಸುತ್ತಿರುವ ಕೆಲವು ಬಡಾವಣೆಗಳಲ್ಲಿ ನಡೆಯುವ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿರುತ್ತದೆ. ಹೀಗಾಗಿ ಅವೈಜ್ಞಾನಿಕ ಬಡಾವಣೆಗಳಿಗೆ ಕಡಿವಾಣ ಹಾಕಿ, ತಪ್ಪೆಸಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನಪರ ಸೇವಾ ಸಮಿತಿ ಅಧ್ಯಕ್ಷ ಗಣೇಶ ಗುಗಲೋತ್ತರ ಹೇಳುತ್ತಾರೆ.