ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯ ಸ್ವರೂಪ ಬದಲಾಯಿಸಿಕೊಳ್ಳಿ ಎಂದು ಲೋಕಾಯುಕ್ತ ಎಸ್‌ಪಿ ಸತೀಶ ಚಿಟಗುಪ್ಪಿ ತಾಕೀತು ಮಾಡಿದರು.ತಹಸೀಲ್ದಾರ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸಕ್ಕೆ ಹಣ ಪಡೆಯುವದು ಹಾಗೂ ವಿನಾಕಾರಣ ವಿಳಂಬ ಮಾಡುವುದನ್ನು ಭ್ರಷ್ಟಾಚಾರ ಎಂದು ಪರಿಗಣಿಸಲಾಗುತ್ತದೆ. ಅಧಿಕಾರಿಗಳು ಸಾರ್ವಜನಿಕರ ಸೇವೆಗೆ ನಿಯೋಜನೆಯಾಗಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಲೋಕಾಯುಕ್ತಕ್ಕೆ ದೂರುಗಳು ಬರದಂತೆ, ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದರು.
ರಾಷ್ಟ್ರದ ಅಭ್ಯುದಯಕ್ಕಾಗಿ ಸಮಗ್ರತೆ ಸಂಸ್ಕೃತಿ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಲೋಕಾಯುಕ್ತಕ್ಕೆ ಸರ್ಕಾರದ ಎಲ್ಲ ಕಚೇರಿಗಳ ಕಾರ್ಯವೈಖರಿ ಗಮನಿಸಲು ಮತ್ತು ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಜರುಗಿಸಲು ನಿರ್ದೇಶನ ನೀಡಿದ್ದಾರೆ. ಅದರಂತೆ ಲೋಕಾಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆಲಸಗಳನ್ನು ಭ್ರಷ್ಟಾಚಾರ ರಹಿತವಾಗಿ ನಿರ್ವಹಿಸಿ ಸಾರ್ವಜನಿಕರ ಸೇವೆ ಮಾಡಬೇಕು ಎಂದು ಹೇಳಿದರು.ಲೋಕಾಯುಕ್ತ ಡಿವೈಎಸ್‌ಪಿ ಸಿದ್ದೇಶ್ವರ ಕೃಷ್ಣಾಪೂರ ಮಾತನಾಡಿ, ಸರ್ಕಾರಿ ಕೆಲಸ ಸೇರುವುದಕ್ಕೂ ಮೊದಲು ನಾವೆಲ್ಲರೂ ಜನ ಸಾಮಾನ್ಯರು ಎಂಬುದನ್ನು ಅಧಿಕಾರಿಗಳು ಮರೆಯಬಾರದು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಮುಟ್ಟುವಂತೆ ಮಾಡಲು ಸಕಾಲ, ಆರ್‌ಟಿಐ ಮುಂತಾದ ಕಾನೂನುಗಳು ಜಾರಿಯಲ್ಲಿವೆ. ಸಾರ್ವಜನಿಕರು ಮೇಲ್ಮನವಿ ಸಲ್ಲಿಸದಂತೆ ಕೆಲಸ ಮಾಡಬೇಕು. ಸರ್ಕಾರದ ಇಲಾಖೆಗೆ ಮೇಲಾಧಿಕಾರಿಗಳಿಗೆ ಗೌರವ ಹೆಚ್ಚುವಂತೆ ಕೆಲಸಮಾಡಿರಿ ಎಂದು ತಿಳಿ ಹೇಳಿದರು.
ಉಪವಿಭಾಗಾಧಿಕಾರಿ ಶ್ವೇತಾಬೀಡಿಕರ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆ ವ್ಯಕ್ತಿಗೆ ಇಂದಿಗೂ ತಲುಪಪುತ್ತಿಲ್ಲ ಎಂಬುದು ದುರ್ದೈವದ ಸಂಗತಿ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮನಸ್ಸು ಮಾಡಬೇಕಾದ ಅವಶ್ಯಕತೆಇದೆ ಎಂದರು.ಲೋಕಾಯುಕ್ತ ಸಿಪಿಐ ಬಸವರಾಜ ಲಮಾಣಿ ಪ್ರಮಾಣ ವಚನ ಬೊಧಿಸಿದರು. ತಾಪಂ ಇಒ ಸಂಜೀವ ಜುನ್ನೂರ ಮಾತನಾಡಿದರು. ಸಿಪಿಐ ಮಲ್ಲಪ್ಪ ಮಡ್ಡಿ, ತಹಸೀಲ್ದಾರ್ ಸದಾಶಿವ ಮಕ್ಕೊಜಿ, ಪಿಎಸ್‌ಐ ಅನೀಲ ಕುಂಬಾರ ವೇದಿಕೆಯಲ್ಲಿದ್ದರು. ತಾಲೂಕಿನ ಎಲ್ಲಇಲಾಖೆಗಳ ಅಧಿಕಾರಿಗಳು ಇದ್ದರು. ಅಸ್ಕಿ ಕಾರ್ಯಕ್ರಮ ನಿರೂಪಿಸಿದರು. ತಹಸೀಲ್ದಾರ ವಂದಿಸಿದರು,