ಅಭಿವೃದ್ದಿ ಮಾರಿಚೀಕೆಯಾಗಿದ್ದು ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಸೇರಿದಂತೆ ಸ್ವಚ್ಛತೆ ಇಲ್ಲದೇ ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ಗಬ್ಬುನಾಥ ಹೊಡೆಯುತ್ತಿವೆ. ಗ್ರಾಮ ಅನೈರ್ಮಲ್ಯದಿಂದ ತಾಂಡವಾಗುತ್ತಿರುವುದಾಗಿ ಗೌಡೇಟಿ ಗ್ರಾಮದ ಅನೇಕ ಮಂದಿ ಆರೋಪಿಸಿದ್ದಾರೆ.
ಕನ್ನಡಪ್ರಭವಾರ್ತೆ ಪಾವಗಡ
ಅಭಿವೃದ್ದಿ ಮಾರಿಚೀಕೆಯಾಗಿದ್ದು ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಸೇರಿದಂತೆ ಸ್ವಚ್ಛತೆ ಇಲ್ಲದೇ ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ಗಬ್ಬುನಾಥ ಹೊಡೆಯುತ್ತಿವೆ. ಗ್ರಾಮ ಅನೈರ್ಮಲ್ಯದಿಂದ ತಾಂಡವಾಗುತ್ತಿರುವುದಾಗಿ ಗೌಡೇಟಿ ಗ್ರಾಮದ ಅನೇಕ ಮಂದಿ ಆರೋಪಿಸಿದ್ದಾರೆ.ಈ ಕುರಿತು ಗೌಡೇಟಿ ಗ್ರಾಮದ ನವೀನ್ ಮಾತನಾಡಿ, ತಾಲೂಕಿನ ವಿರಪಸಮುದ್ರ ಗ್ರಾಪಂನಲ್ಲಿ ಅಭಿವೃದ್ದಿ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ವ್ಯಾಪಕ ಭ್ರಷ್ಟಾಚಾರವೆಸುಗುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಗೌಡೇಟಿ ಗ್ರಾಮದಲ್ಲಿ ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿ ಜೆಸಿಬಿ ಬಳಕೆ ಕೆಲಸ ಮಾಡುವ ಮೂಲಕ ಅಸಮರ್ಪಕ ನರೇಗಾ ಕಾಮಗಾರಿ ನಿರ್ವಹಿಸಿ ಕೂಲಿಕಾರರ ಬೋಗಸ್ ದಾಖಲಾತಿ ಸೃಷ್ಟಿಸಿದ್ದಾರೆ. ಆ ಮೂಲಕ ಲಕ್ಷಾಂತರ ಹಣ ಡ್ರಾ ಮಾಡಿದ್ದಾರೆ ಎಂದು ದೂರಿದರು.
ತಾಲೂಕು ಬಿಜೆಪಿಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಗೌಡೇಟಿ ತಾಲೂಕಿನ ಗಡಿ ಭಾಗದಲ್ಲಿದ್ದು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತವಾಗಿದೆ. ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶೌಚಾಲಯವಿಲ್ಲದೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಬಯಲು ಬರ್ಹಿದೆಸೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಚರಂಡಿಯಲ್ಲಿ , ಮನೆಗಳ ನೀರು ಶೇಖರಣೆಯಾಗಿ ಗಲೀಜಿನಿಂದ ಕೂಡಿದೆ. ಸ್ವಚ್ಛತೆ ಇಲ್ಲದೇ ಸೊಳ್ಳೆಗಳ ಹಾವಳಿಯಿಂದ ಜನತೆ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.ನರೇಗಾ ಯೋಜನೆಯ ಭ್ರಷ್ಟಾಚಾರಕ್ಕೆ ಯೋಜನೆಯ ಎಂಜಿನಿಯರ್ ಹಾಗೂ ಗ್ರಾಪಂ ಪಿಡಿಒ ಕುಮ್ಮಕ್ಕಿದ್ದು ಇದರಿಂದ ನಿಜವಾದ ಕೂಲಿಕಾರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಯೋಜನೆಯ ಹಣ ಪ್ರಭಾವಿತರ ಪಾಲಾಗುತ್ತಿದೆ ಎಂದು ಆರೋಪಿಸಿದರು. ನೈರ್ಮಲ್ಯ, ಶುಚಿತ್ವ ಕಾಣದೇ ಅದೆಷ್ಟು ವರ್ಷ ಕಳೆದಿದ್ದು, ಈ ಬಗ್ಗೆ ಜಿಪಂ ಸಿಇಒ ಹಾಗೂ ಇತರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೆಯೇ ಚರಂಡಿ ದುರಸ್ತಿ, ವಸತಿ ಸೌಲಭ್ಯ ಹಾಗೂ ನೈರ್ಮಲ್ಯ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಶ್ರೀಧರ್,ನವೀನ್ ಹನುಮಂತ್,ಬಜ್ಜಪ್ಪ ಇತರೆ ಅನೇಕ ಮಂದಿ ಮುಖಂಡರಿದ್ದರು.ತಾಲೂಕಿನ ವಿರಪಸಮುದ್ರ ಗ್ರಾಪಂನ ಗೌಡೇಟಿ ಗ್ರಾಮದ ಪ್ರಗತಿಗೆ ಅದ್ಯತೆ ನೀಡಲಾಗಿದೆ.ನರೇಗಾದಲ್ಲಿ ನಿಯಮನುಸಾರ ಕ್ರಮವಹಿಸಿದ್ದೇವೆ.ಚರಂಡಿ ದುರಸ್ತಿ ಕಾರ್ಯ ಕೈಗೊಂಡಿರುವುದಾಗಿ ಗ್ರಾಪಂ ಪಿಡಿಒ ಚಿಕ್ಕಣ್ಣ ತಿಳಿಸಿದ್ದಾರೆ.