ಅಣ್ಣೂರು ಗ್ರಾಮದ ಪುಟ್ಟಕಟ್ಟೆ ಸಮೀಪವಿರುವ ಅಂಗನವಾಡಿ ಕೇಂದ್ರದ ಬಳಿ ಕಲುಷಿತ ವಾತಾವರಣದಿಂದಾಗಿ ಮಕ್ಕಳು ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಮರದ ರೆಂಬೆಗಳನ್ನು ತೆರವುಗೊಳಿಸಿ ಪೋಷಕರ ಆತಂಕ ದೂರ ಮಾಡಲಾಗಿದೆ.
ಕೆ.ಎಂ.ದೊಡ್ಡಿ:
ಅಣ್ಣೂರು ಗ್ರಾಮದ ಪುಟ್ಟಕಟ್ಟೆ ಸಮೀಪವಿರುವ ಅಂಗನವಾಡಿ ಕೇಂದ್ರದ ಬಳಿ ಕಲುಷಿತ ವಾತಾವರಣದಿಂದಾಗಿ ಮಕ್ಕಳು ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಮರದ ರೆಂಬೆಗಳನ್ನು ತೆರವುಗೊಳಿಸಿ ಪೋಷಕರ ಆತಂಕ ದೂರ ಮಾಡಲಾಗಿದೆ.ಗ್ರಾಮದ ನಾಗರಕಲ್ಲಿನ ಅಂಗನವಾಡಿ ಕೇಂದ್ರದ ಬಳಿ ಇದ್ದ ಅರಳಿ ಮರದ ರೆಂಬೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಕುಳಿತುಕೊಳ್ಳುತ್ತಿದ್ದ ಪರಿಣಾಮ ಪಕ್ಷಿಗಳ ಹಿಕ್ಕೆ, ಇತರೆ ಕಲುಷಿತ ವಸ್ತುಗಳಿಂದಾಗಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.
ಅಂಗನವಾಡಿ ಕೇಂದ್ರಕ್ಕೆ ಸುಮಾರು 25 ಮಕ್ಕಳು ಆಗಮಿಸುತ್ತಿದ್ದರು. ಮರದ ರೆಂಬೆಗಳಿಂದ ಪಕ್ಷಿಗಳ ಹಿಕ್ಕೆ ಹಾಗೂ ಇತರ ಕಲುಷಿತ ವಸ್ತುಗಳು ಬೀಳುತ್ತಿದ್ದವು. ಇದರಿಂದ ಮಕ್ಕಳಿಗೆ ಜ್ವರ, ಕೆಮ್ಮು ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತು. ಮಕ್ಕಳ ಆರೋಗ್ಯದ ಬಗ್ಗೆ ಆತಂಕಗೊಂಡ ಪೋಷಕರು ಒಂದು ವಾರದ ಕಾಲ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲಿಲ್ಲ.ಅಂಗನವಾಡಿ ಕೇಂದ್ರದ ಬಳಿ ಸ್ವಚ್ಛತೆ ಕಾಪಾಡಬೇಕು. ಮರದ ರೆಂಬೆಗಳನ್ನು ತೆರವುಗೊಳಿಸಿದ ಬಳಿಕವೇ ಮಕ್ಕಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಅವರು ಗ್ರಾಪಂ ಪಿಡಿಒ ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಸ್ವೀಕರಿಸಿದ ಪಿಡಿಒ ಹರೀಶ್ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ಕಪಕ್ಕದ ನಿವಾಸಿಗಳ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ವೈದ್ಯರನ್ನು ಸಂಪರ್ಕಿಸಿರುವ ದಾಖಲೆ ಹಾಗೂ ಔಷಧಿಗಳನ್ನು ಪರಿಶೀಲಿಸಿದರು. ಅಂಗನವಾಡಿ ಮಕ್ಕಳಿಗೂ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದನ್ನು ಗಮನಿಸಿ ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಕ್ರಮ ಕೈಗೊಂಡರು.ಮರಗಳ ಮೇಲೆ ಪಕ್ಷಿಗಳು ಕುಳಿತು ಕಲುಷಿತ ವಾತಾವರಣ ಉಂಟಾಗಿ ಅಂಗನವಾಡಿ ಮಕ್ಕಳು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಪಿಡಿಒ ಹರೀಶ್ ತಿಳಿಸಿದರು.
ಈ ವೇಳೆ ಮುಖಂಡ ಸಿದ್ದರಾಮು, ದೊರೆಸ್ವಾಮಿ, ರಾಘವೇಂದ್ರ, ಜಯಸ್ವಾಮಿ, ಅಜಿತ್, ಭಾಗ್ಯಮ್ಮ, ಸುಧಾ, ಲಕ್ಷ್ಮಮ್ಮ, ವಸಂತರಮ್ಮ, ದೀಪು, ಜಯಂತ್, ಪುರುಷೋತ್ತಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.