ಕೆರೆಗಳ ಹೂಳು ಅವೈಜ್ಞಾನಿಕ ತೆರವು: ಆತಂಕ

| Published : May 24 2024, 12:45 AM IST

ಸಾರಾಂಶ

ಬೇಸಿಗೆ ವೇಳೆ ಬತ್ತಿಹೋಗಿದ್ದ ಕೆರೆಗಳ ಹೂಳನ್ನು ತೆರವುಗೊಳಿಸುವ ವೇಳೆ ರೈತರು ವೈಜ್ಞಾನಿಕ ವಿಧಾನ ಅನುಸರಿಸದಿರುವುದು ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ.

ಎಚ್‌.ಕೆ.ಅಶ್ವಥ್‌ ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯಬೇಸಿಗೆ ವೇಳೆ ಬತ್ತಿಹೋಗಿದ್ದ ಕೆರೆಗಳ ಹೂಳನ್ನು ತೆರವುಗೊಳಿಸುವ ವೇಳೆ ರೈತರು ವೈಜ್ಞಾನಿಕ ವಿಧಾನ ಅನುಸರಿಸದಿರುವುದು ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ. ಅಡ್ಡಾದಿಡ್ಡಿಯಾಗಿ ಹೂಳು-ಮಣ್ಣನ್ನು ಕೆರೆಗಳಿಂದ ತುಂಬಿ ಜಮೀನುಗಳಿಗೆ ಸಾಗಿಸಲಾಗಿದೆ. ಪರಿಣಾಮ ಕೆರೆಗಳಲ್ಲಿ ಆಳವಾದ ಗುಂಡಿಗಳು, ಹೊಂಡಗಳು ನಿರ್ಮಾಣವಾಗಿವೆ. ಮಳೆಯಿಂದ ನೀರು ತುಂಬಿರುವ ಕೆರೆಗಳು ಇದೀಗ ಮೃತ್ಯುಕೂಪಗಳಾಗಿ ಪರಿವರ್ತನೆಗೊಂಡಿವೆ.ಈ ಬಾರಿ ಬೇಸಿಗೆ ಸಮಯದಲ್ಲಿ ನಾಲೆಗಳಿಗೆ ನೀರು ಹರಿಯಲಿಲ್ಲ. ಕೆರೆಗಳನ್ನು ತುಂಬಿಸುವ ಕೆಲಸವೂ ಅಧಿಕಾರಿ ವರ್ಗದಿಂದ ನಡೆಯಲಿಲ್ಲ. ಕೆರೆಗಳಲ್ಲಿ ಅಲ್ಪಸ್ವಲ್ಪವಿದ್ದ ನೀರು ಬೇಸಿಗೆಯ ರಣಬಿಸಿಲಿನ ತಾಪಕ್ಕೆ ಬತ್ತಿಹೋಗಿದೆ. ಕೆರೆಗಳು ಸಂಪೂರ್ಣ ಬರಿದಾದವು. ಈ ಬರಿದಾದ ಕೆರೆಗಳಲ್ಲಿರುವ ಹೂಳು, ಮಣ್ಣನ್ನು ಜಮೀನುಗಳಿಗೆ ಸಾಗಿಸಿಕೊಳ್ಳುವುದಕ್ಕೆ ರೈತರು ಮುಗಿಬಿದ್ದರು.ಆಳವಾದ ಗುಂಡಿ, ಹೊಂಡಗಳು: ಕೆರೆಯ ಹೂಳನ್ನು ತೆರವುಗೊಳಿಸುವುದು ಒಂದು ವೈಜ್ಞಾನಿಕ ವಿಧಾನ. ಕೆರೆಗಳಲ್ಲಿಯೂ ಮಣ್ಣಿನ ಪದರಗಳಿರುತ್ತವೆ. ಈ ಪದರಗಳು ನೀರು ಭೂಮಿಯೊಳಗೆ ಸಂಪೂರ್ಣವಾಗಿ ಇಂಗುವುದನ್ನು ತಡೆದು ಸದಾಕಾಲ ನೀರು ಕೆರೆಯಲ್ಲಿರುವಂತೆ ಕಾಯ್ದುಕೊಳ್ಳುತ್ತವೆ. ಒಂದು ನಿರ್ದಿಷ್ಟ ಹಂತದವರೆಗೆ ಈ ಪದರಗಳು ಇರುತ್ತವೆ. ಆ ಹಂತದವರೆಗೆ ಮಾತ್ರ ಹೂಳನ್ನು ತೆರವುಗೊಳಿಸಬೇಕು. ಅದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗುರುತಿಸಿಕೊಡಬೇಕು.ಆದರೆ, ರೈತರು ಹೂಳು ಮತ್ತು ಮಣ್ಣನ್ನು ತೆರವುಗೊಳಿಸುವ ಸಮಯದಲ್ಲಿ ಹೂಳು ಮತ್ತು ಮಣ್ಣಿನ ಪರಿಜ್ಞಾನವೇ ಇಲ್ಲದಂತೆ ಮನಸೋಇಚ್ಛೆ ಗುಂಡಿ ತೆಗೆದು ಮಣ್ಣನ್ನು ತೆಗೆದಿದ್ದಾರೆ. ಕೆಲವೊಂದು ಕಡೆ ಆಳವಾದ ಗುಂಡಿಗಳನ್ನು ಬಾವಿಯಂತೆ ತೆಗೆದಿದ್ದರೆ, ಕೆಲವರು ತಮಗೆ ಯಾವ ಮಣ್ಣು ಬೇಕೋ ಅದನ್ನು ಆರಿಸಿಕೊಂಡು ಅಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗುವಂತೆ ಮಾಡಿ ಹೂಳು ಮತ್ತು ಮಣ್ಣನ್ನು ಸಾಗಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.ಅಧಿಕಾರಿಗಳ ಮಾರ್ಗದರ್ಶನವಿಲ್ಲ: ಕೆರೆಗಳಲ್ಲಿ ಹೂಳನ್ನು ತೆಗೆಯುವ ಸಮಯದಲ್ಲಿ ಕೆರೆಯ ಯಾವ ಭಾಗದಲ್ಲಿ ಹೆಚ್ಚು ಹೂಳು ಸಂಗ್ರಹವಾಗಿದೆ. ಅದನ್ನು ಯಾವ ಹಂತದವರೆಗೆ ತೆಗೆಯಬೇಕು. ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು, ಮಣ್ಣು ಯಾವುದು ಎಂಬ ಬಗ್ಗೆ ನೀಲಿ ನಕಾಶೆ ತಯಾರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಗ್ರಾಪಂಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿತ್ತು.ಆದರೆ, ಈ ಕೆಲಸಕ್ಕೆ ಯಾವುದೇ ಇಲಾಖೆಗಳು ಮುಂದಾಗಲಿಲ್ಲ. ರೈತರು ಕೆರೆಯೊಳಗೆ ಇಳಿದು ತಮಗಿಷ್ಟ ಬಂದಂತೆ ಹೂಳು ತೆಗೆದಿದ್ದಾರೆ. ಒಂದೊಂದು ಕಡೆ ೮ ರಿಂದ ೯ ಅಡಿ ಆಳದವರೆಗೆ ಮಣ್ಣು ತೆಗೆದಿದ್ದಾರೆ. ಕೆಲವು ಕಡೆಗಳಲ್ಲಿ ಆಳವಾದ ಹೊಂಡಗಳು ರೂಪುಗೊಂಡಿವೆ. ಕೆರೆಯ ಪ್ರದೇಶದಲ್ಲಿ ೩ ರಿಂದ ೪ ಅಡಿಯವರೆಗೆ ಮಾತ್ರ ಹೂಳು ಮತ್ತು ಮಣ್ಣನ್ನು ತೆಗೆಯಬೇಕಿದ್ದರೂ ಅದಾವುದನ್ನೂ ಲೆಕ್ಕಿಸದೆ ಹೂಳು-ಮಣ್ಣನ್ನು ತೆಗೆದಿರುವುದರಿಂದ ಮಳೆ ಬಂದು ನೀರು ತುಂಬಿಕೊಂಡ ಸಮಯದಲ್ಲಿ ಗುಂಡಿಗಳಿರುವ ಜಾಗ ಕಾಣದಾಗಿ ಜೀವ ಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.ಕೆರೆಗಳ ಹೂಳು ಮತ್ತು ಮಣ್ಣು ತೋಟ, ಗದ್ದೆ, ಹೊಲಕ್ಕೆ ಹಾಕಿ ಬೆಳೆ ಬೆಳೆಯುವುದರಿಂದ ಮಣ್ಣಿನ ಬದಲಾವಣೆಯೊಂದಿಗೆ ಇಳುವರಿ ಚೆನ್ನಾಗಿ ಬರುತ್ತದೆಂಬ ಕಾರಣಕ್ಕೆ ರೈತರು ಕೆರೆಗಳ ಮಣ್ಣಿಗಾಗಿ ದುಂಬಾಲು ಬೀಳುತ್ತಾರೆ. ಕೆರೆಯ ಮಣ್ಣನ್ನು ತೆಗೆದುಕೊಂಡು ಹೋಗುವುದಕ್ಕೆ ಅಭ್ಯಂತರವಿಲ್ಲದಿದ್ದರೂ ಹೂಳು ಮತ್ತು ಮಣ್ಣನ್ನು ತೆಗೆಯುವಾಗ ವೈಜ್ಞಾನಿಕ ವಿಧಾನ ಅನುಸರಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.ರೈತರಿಗೆ ಮುಕ್ತ ಅವಕಾಶ: ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮ ಪಂಚಾಯತ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಅದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಿ ಕಾರ್ಯಾದೇಶ ಪಡೆಯಬೇಕೆಂಬ ನಿಯಮವಿದ್ದರೂ ಬರದಿಂದ ತತ್ತರಿಸಿರುವ ರೈತರಿಗೆ ತೊಂದರೆ ನೀಡಬಾರದೆಂಬ ದೃಷ್ಟಿಯಿಂದ ಹೂಳು ಮತ್ತು ಮಣ್ಣು ಸಾಗಣೆಗೆ ಮುಕ್ತ ಅವಕಾಶ ನೀಡಲಾಯಿತು. ಆದರೆ, ಹೂಳು-ಮಣ್ಣು ತೆರವು ಮಾಡುವ ಸಮಯದಲ್ಲಿ ಇಲಾಖಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡದಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.ಅಪಾಯಗಳಿಗೆ ಆಹ್ವಾನ: ಕೆರೆಯಲ್ಲಿರುವ ಪದರಗಳಿಗೆ ಸಾಕಷ್ಟು ಹಾನಿಯಾಗಿರುವುದರಿಂದ ಕೆಲವು ಕಡೆಗಳಲ್ಲಿ ನೀರು ಭೂಮಿಯೊಳಗೆ ಇಂಗಿಹೋಗುತ್ತದೆ. ಮತ್ತೊಂದೆಡೆ ಅಕ್ಕ-ಪಕ್ಕದಲ್ಲಿರುವ ಹೂಳು ನೀರು ತುಂಬಿಕೊಂಡ ವೇಳೆ ಕುಸಿಯುತ್ತದೆ. ಹೀಗೆ ವೈಜ್ಞಾನಿಕ ವಿಧಾನ ಅನುಸರಿಸಿ ಹೂಳು-ಮಣ್ಣು ತೆಗೆಯದಿರುವುದರಿಂದ ಅಪಾಯಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಈಗ ಎಲ್ಲೆಡೆ ಮಳೆ ಬೀಳಲಾರಂಭಿಸಿದೆ. ಜಿಲ್ಲೆಯ ಬಹುತೇಕ ಕೆರೆಗಳ ಹೂಳು ಮತ್ತು ಮಣ್ಣನ್ನು ರೈತರು ಜಮೀನುಗಳಿಗೆ ಸಾಗಿಸಿಕೊಂಡಿದ್ದಾರೆ. ಮಳೆಯಿಂದಾಗಿ ಸಾಕಷ್ಟು ಕೆರೆಗಳಲ್ಲಿ ನೀರು ತುಂಬಿಕೊಂಡಿದೆ. ಈಗ ಆ ಕೆರೆ ಪ್ರದೇಶದಲ್ಲಿ ಆಳವಿರುವ ಪ್ರದೇಶ ಯಾವುದು, ಕೆಸರು ತುಂಬಿಕೊಂಡಿರುವ ಸ್ಥಳ ಯಾವುದು ಎನ್ನುವ ಅರಿವೇ ಯಾರಿಗೂ ಇಲ್ಲ. ಈ ವೇಳೆ ಕೆರೆಯಲ್ಲಿರುವ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಆದ ಕಾರಣ ಊರಿನ ಜನರು ಕೆರೆಗಳಿಗೆ ಇಳಿಯುವ ಸಮಯದಲ್ಲಿ, ಜಾನುವಾರುಗಳಿಗೆ ನೀರು ಕುಡಿಸಲು ಹೋದ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಿರುವುದು ಅವಶ್ಯವಾಗಿದೆ. ಹಿಂದೆ ಸಮತಟ್ಟಾಗಿದ್ದ ಪ್ರದೇಶ ಈಗ ಆಳದಿಂದ ಕೂಡಿರಬಹುದು. ಕೆಸರು ತುಂಬಿಕೊಂಡಿರಬಹುದು. ಹಾಗಾಗಿ ಗ್ರಾಮಸ್ಥರು ಮೃತ್ಯುಪಾಶಕ್ಕೆ ಸಿಲುಕದೆ ಎಚ್ಚರಿಕೆಯಿಂದ ಇರಬೇಕಿದೆ.ರೈತರು ಕೆರೆಯ ಹೂಳು ಮತ್ತು ಮಣ್ಣನ್ನು ಸಾಗಿಸುವಾಗ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ವೈಜ್ಞಾನಿಕವಾಗಿ ತೆರವುಗೊಳಿಸಬೇಕಿತ್ತು. ನಾವೂ ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಹೂಳು ಮತ್ತು ಮಣ್ಣನ್ನು ತೆರವುಗೊಳಿಸುವಾಗ ರೈತರಿಗೂ ಸಲಹೆ ನೀಡಿದ್ದೇವೆ.ಇಂಡುವಾಳು ಚಂದ್ರಶೇಖರ್, ರೈತ ಮುಖಂಡರು