ಬಸವ ಅನುಯಾಯಿ ‘ಅಕ್ಕ’ ಅನ್ನಪೂರ್ಣ ಲಿಂಗೈಕ್ಯ

| Published : May 24 2024, 12:45 AM IST

ಸಾರಾಂಶ

ಬಸವ ತತ್ವಕ್ಕೆ ಸಂಪೂರ್ಣ ಜೀವನ ಮೀಸಲಿಟ್ಟಿದ್ದ ಅಕ್ಕ ಅನ್ನಪೂರ್ಣ. ಬಿಡುವಿಲ್ಲದಂತೆ ಬಸವ ಸೇವೆಗೆ ಸಮರ್ಪಿಸಿಕೊಂಡಿದ್ದ ಮಹಾತಾಯಿ ಇನ್ನಿಲ್ಲ. ಬೀದರ್‌ ಜಿಲ್ಲೆಯನ್ನು ರಾಷ್ಟ್ರದ ಮೂಲೆ ಮೂಲೆಗೆ ಪರಿಚಯಿಸಿದ್ದ ಅಕ್ಕ ಅನ್ನಪೂರ್ಣ ಇನ್ನು ನೆನಪು ಮಾತ್ರ.

ಕನ್ನಡಪ್ರಭ ವಾರ್ತೆ ಬೀದರ್‌

ಸ್ನಾತಕೋತ್ತರ ಪದವೀಧರೆಯಾಗಿ, ಶಿಕ್ಷಕಿಯಾಗಿ, ವಕೀಲಿ ಶಿಕ್ಷಣ ಮುಗಿಸಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರೂ ಬಸವ, ಬಸವಾದಿ ಶರಣರ ವಚನ ಸಾಹಿತ್ಯ, ಮನೋಭಾವ, ಕಾಯಕ ದಾಸೋಹದ ಪರಿಕಲ್ಪನೆಯ ಜೊತೆಗೆ ಸಮ ಸಮಾಜದ ಕನಸನ್ನು ಹೊತ್ತು ಕೌಟುಂಬಿಕ ವ್ಯಾಮೋಹದ ಎಲ್ಲವನ್ನೂ ತ್ಯಾಗ ಮಾಡಿ ಬಸವ ಸೇವೆಗೆ ಇಳಿದಿದ್ದ ಮಹಾತಾಯಿ, ಬಸವ ತತ್ವಕ್ಕೆ ಸಂಪೂರ್ಣ ಜೀವನ ಮೀಸಲಿಟ್ಟಿದ್ದ ಅಕ್ಕ ಅನ್ನಪೂರ್ಣ ಅವರು ಗುರುವಾರ ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ.ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠದ ಮೂಲಕ ಜಿಲ್ಲೆಯಲ್ಲಿ ಬಸವ ಚಿಂತನೆಯನ್ನು ಜಾಗೃತಗೊಳಿಸಿ ಸಮಸಮಾಜದ ಚಿಂತನೆಗೆ ಇಂಬು ನೀಡಿದ್ದ ಅಕ್ಕ ಅನ್ನಪೂರ್ಣ ತಾಯಿ ಅವರು ನಗರದ ಹಾರೂರಗೇರಿಯ ಸೂಗಮ್ಮ ಬಂಡೆಪ್ಪ ಹಂಗರಗಿ ಅವರಿಗೆ ಜನಿಸಿ, ಪ್ರಾಥಮಿಕ, ಪಿಯುಸಿ, ಡಿಈಡ್‌ ಕಲಿತು ಆರಂಭದಲ್ಲಿ ಚಿದಂಬರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದವರು.ಶಿಕ್ಷಣ ಪರಿಚಯ: ಶಿಕ್ಷಕರಾಗಿಯೇ ಅನೇಕ ಸಾಹಿತ್ಯ ಸಾಮಾಜಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಬಿಎ, ಎಂಎ, ಎಲ್‌ಎಲ್‌ಬಿ, ವ್ಯಾಸಂಗ ಮಾಡಿ, ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕಗೊಂಡು ಬಗದಲ್‌, ರಂಗರೇಜ್‌ ಗಲ್ಲಿ ಶಾಲೆಯಲ್ಲಿ 15 ವರ್ಷಗಳ ಕಾಲ ಸೇವೆ ಮಾಡಿ ತನ್ನ ಸಂಪೂರ್ಣ ಜೀವನವನ್ನು ಬಸವ ತತ್ವಕ್ಕಾಗಿ ಮೀಸಲಿಡಬೇಕೆಂಬ ದೂರದೃಷ್ಟಿಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಪೂರ್ಣ ಅವಧಿಯ ಸೇವೆಗೆ ಪಾದಾರ್ಪಣೆ ಮಾಡಿಕೊಂಡರು.ಹುಟ್ಟಿದ ಮನೆಯಲ್ಲಿ ಅಕ್ಕ ಈಶ್ವರಿ, ತಂಗಿ ಶಶಿಕಲಾ ಹಾಗೂ ಅಣ್ಣಂದಿರಾದ ಚಂದ್ರಶೇಖರ, ಬಸವರಾಜ, ತಮ್ಮಂದಿರಾದ ರಮೇಶ, ಚನ್ನಬಸವ ಇದ್ದು ಮೊದಲಿನಿಂದಲೂ ಸಂಸಾರ, ಕೌಟುಂಬಿಕ ಬಂಧನದಿಂದ ದೂರವಿದ್ದು ತನ್ನ ಹೆಚ್ಚಿನ ಸಮಯ ಹಾರೂರಗೇರಿಯ ಕಂಟೆಪ್ಪ ಪಾಟೀಲ್‌ ಅವರ ಮನೆಯಲ್ಲಿ ಕಳೆದಿರುವುದು ಮರೆಯಲಾಗದ ಸಂಗತಿ.ದಾಂಪತ್ಯ ಜೀವನ: ಹಿರಿಯರು ಮದುವೆ ಪ್ರಸ್ತಾಪ ಮಾಡಿದಾಗ ನೇರವಾಗಿ ನಿರಾಕರಿಸಿ, ನನಗೆ ದಯವಿಟ್ಟು ಮುಕ್ತವಾಗಿ ಬಸವ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಸಂಸಾರಕ್ಕೆ ಕಾಲಿಡಲು ಸುತಾರಾಂ ಒಪ್ಪಿಗೆಯಿಲ್ಲ ಎಂಬ ಮಾತು ಹೇಳಿ ಮದುವೆಯ ಚರ್ಚೆ ವಿಷಯಕ್ಕೆ ಶಾಶ್ವತವಾಗಿ ಪೂರ್ಣವಿರಾಮ ನೀಡಿದರು.1983-84ರಲ್ಲಿ ಬಸವ ದಳ ಸಂಘಟನೆ ಬೀದರ್‌ನಲ್ಲಿ ಕೆಲಸ ಪ್ರಾರಂಭಿಸಿದಾಗ ಒಂದು ದೊಡ್ಡ ತಂಡ ಆಸ್ತಿತ್ವಕ್ಕೆ ಬಂದು, ಪ್ರತಿ ಭಾನುವಾರ ವಾರದ ಪ್ರಾರ್ಥನೆ, ಸೋಮವಾರ ಬಸವ ಜ್ಯೋತಿ, ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಬಸವ ದಳ ಸಂಘಟನೆ ಮಾಡುತ್ತ ತನ್ನನ್ನು ತಾನು ತೊಡಗಿಸಿಕೊಂಡು ಕ್ರಿಯಾಶೀಲರಾದರು.1986-87 ರಲ್ಲಿ ಬೀದರ್‌ ಗಣೇಶ ಮೈದಾನದಲ್ಲಿ ಪ್ರಥಮ ಬಸವ ತತ್ವ ಸಮ್ಮೇಳನ ಆಯೋಜಿಸಲು ಇವರ ಶ್ರಮ ಮೆಚ್ಚುವಂಥದ್ದು. ತದನಂತರ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ, ಪೂಜ್ಯ ಮಾತೆ ಮಹಾದೇವಿಯವರ ಹಾಗೂ ಸಿದ್ದೇಶ್ವರ ಅಪ್ಪಾಜಿ ಪ್ರವಚನ ಆಯೋಜಿಸಿ ಸಂಘಟನೆಯ ಜೊತೆಗೆ ಗುರುತಿಸಿಕೊಂಡವರು, ಅಂದು ಹಿರಿಯರಾದ ಬಸವಕುಮಾರ ಪಾಟೀಲ್‌, ರಾಮಲಿಂಗಪ್ಪ ದೇವಣಿ, ಶರಣಪ್ಪ ಮಿಠಾರೆ, ಶಿವಶಂಕರ ಟೋಕರೆ, ಶಿವಕುಮಾರ ತರನಳ್ಳೆ, ಶಿವರಾಜ ಪಾಟೀಲ್‌ ಅತಿವಾಳ, ಅಕ್ಕ ಗಂಗಾಂಬಿಕಾ ಪಾಟೀಲ್‌, ಶಿವರಾಜ ಕನಶೆಟ್ಟಿ, ಅಮರನಾಥ ಕೊಹಿನೂರ, ಗುರುನಾಥ ಅಕ್ಕಣ್ಣ, ಬಸವರಾಜ ಭರಶೆಟ್ಟಿ, ಮಾಣಿಕಪ್ಪ ಗೋರನಾಳೆ, ಶಾಮಲಿಂಗ ಜವಳಗಿ, ಸಿ.ಎಸ್ ಗಣಾಚಾರಿ ಸೇರಿದಂತೆ ದೊಡ್ಡ ಬಸವ ಪಡೆ ಹೊರಹೊಮ್ಮಿ ಎಲ್ಲರ ಗಮನ ಸೆಳೆಯಿತು.ಪೂಜ್ಯ ಮಾತಾಜಿಯವರ ಸಾರಥ್ಯದಲ್ಲಿ ಬಸವಕಲ್ಯಾಣ ಅನುಭವ ಮಂಟಪದಲ್ಲಿ ಬಸವ ತತ್ವ ತರಬೇತಿ ಶಿಬಿರದಿಂದಾಗಿ ಬೃಹತ್ ಶರಣ ಮೇಳ 1988 ರಲ್ಲಿ ಪ್ರಾರಂಭವಾದಾಗ ಇವರು ಸಹ ಮುಂಚೂಣಿಯಲ್ಲಿದ್ದರು, ತದನಂತರ ರಾಷ್ಟ್ರೀಯ ಬಸವ ದಳ ಜಿಲ್ಲೆಯ ಮೂನ್ನೂರಕ್ಕು ಹೆಚ್ಚು ಗ್ರಾಮಗಳಲ್ಲಿ ಉದ್ಘಾಟನೆ ಮಾಡಿ ಸಂಘಟನೆ ಬಾನೆತ್ತರಕ್ಕೆ ಮುಟ್ಟಿಸಲಾಯಿತು.ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರಿಡುವಂತೆ ನಿರಂತರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದಾಗಿದೆ ಆದರೆ ಅಂದಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಧರಣಿ ಅನಿವಾರ್ಯವಾಗಿ ಮೊಟಕು ಗೊಂಡಿತು.ಅಕ್ಕನವರು ತಮ್ಮ ಚಟುವಟಿಕೆಗಳನ್ನು ಬಸವ ಮಂಟಪದಿಂದ ಶರಣ ಉದ್ಯಾನಕ್ಕೆ ಸ್ಥಳಾಂತರಿಸಿ ಹೊಸದಾಗಿ ಸುಮಾರು 2000ನೇ ಇಸ್ವಿಯಲ್ಲಿ ಹೊಸ ಸಂಘಟನೆಗೆ ಹುಟ್ಟು ಹಾಕಿ ಬಸವ ಸೇವಾ ಪ್ರತಿಷ್ಠಾನ ರಚನೆಯಾಗಿ ಅನೇಕ ಹೊಸಬರು ಇದರ ಉಸ್ತುವಾರಿ ವಹಿಸಿದರು. ಪ್ರಮುಖವಾಗಿ ಸಿದ್ಧಯ್ಯ ಕಾವಡಿ, ಕಾಜಿ ವಿಶ್ವನಾಥ, ಗುರುನಾಥ ಕೊಳ್ಳುರು, ಬಸವರಾಜ ಧನ್ನೂರ, ರಮೇಶ ಮಠಪತಿ, ಪ್ರಕಾಶ ಮಠಪತಿ, ಜೈರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ಶಿವರಾಜ ಮದಕಟ್ಟಿ, ಉಷಾ ಮಿರ್ಚೆ, ರಾಜಕುಮಾರ ಪಾಟೀಲ್‌ ಬಗದಲ, ಶರಣಪ್ಪ ಚಿಮಕೊಡೆ, ಶಂಕರರಾವ್‌ ಹೊನ್ನ, ಅಶೋಕ ಎಲಿ, ಡಾ. ಎಸ್‌ಆರ್‌ ಮಠಪತಿ, ಡಾ. ವಿಜಯಶ್ರೀ ಬಶೆಟ್ಟಿ ಪ್ರಮುಖರು ಸೇರಿ ಒಂದು ಟ್ರಸ್ಟ್‌ ಮಾಡಿ ಅದಕ್ಕೆ ಅಧ್ಯಕ್ಷರಾಗಿ ಅನ್ನಪೂರ್ಣ ಹಾಗೂ ಕಾರ್ಯದರ್ಶಿಯಾಗಿ ಪ್ರೊ. ಗಂಗಾಂಬಿಕಾ ಅವರನ್ನೊಳಗೊಂಡ ಹನ್ನೊಂದು ಜನರುಳ್ಳ ಕಮಿಟಿ ರಚಿಸಿ ಅನೇಕಾನೇಕ ಕಾರ್ಯಕ್ರಮ ಮಾಡಿ ಜನ ಸಮುದಾಯದ ಮೆಚ್ಚುಗೆ ಗಳಿಸಿದರು.ಪ್ರತಿ ವರ್ಷ ಚನ್ನ ಬಸವಣ್ಣನವರ ಜಯಂತಿ ಪ್ರಯುಕ್ತ ವಚನ ವಿಜಯೋತ್ಸವ ಆಚರಿಸಿ ಸಾವಿರ ಸಾವಿರಗಟ್ಟಲೇ ಜನರನ್ನು ಕರೆಯಿಸಿ ತಲೆಯ ಮೇಲೆ ವಚನ ಸಾಹಿತ್ಯ ಇಟ್ಟು ಬಸವೇಶ್ವರ ವೃತ್ತದಿಂದ ಬಸವ ಗಿರಿ ಯವರೆಗೆ ಭವ್ಯ ಮೆರವಣಿಗೆ ನೋಡಲು ಕಣ್ಣು ಸಾಕಾಗುತ್ತಿರಲಿಲ್ಲ.ಅಕ್ಕನವರಿಗೆ ಬೆಳಗಾವಿ ಕಿತ್ತೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌, ಕನ್ನಡ ಸಾಹಿತ್ಯ ಪರಿಷತ್ತು ಬೀದರನ ಹದಿನೇಳನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಿಂದ ರಾಜ್ಯಮಟ್ಟದ ಪಾಂಡವ ಪ್ರಶಸ್ತಿ, ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಒಂದು ಇತಿಹಾಸ.ಇತ್ತೀಚಿನ ಎರಡು ವರ್ಷಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಮಾನಸಿಕವಾಗಿ ಬಳಸಿ, ಹಲವು ಬಾರಿ ಬೆಂಗಳೂರು, ಸೋಲಾಪೂರ, ಹೈದರಾಬಾದ್‌ ಆಸ್ಪತ್ರೆ ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು, ವೈದ್ಯಕೀಯ ಪರೀಕ್ಷೆಯಂತೆ ಅಕ್ಕನವರಿಗೆ ಕ್ಯಾನ್ಸರ್‌ ಇದೆಯಂದು ಗೊತ್ತಾದ ಮೇಲೂ ಎಳ್ಳಷ್ಟೂ ವಿಚಲಿತ ಗೊಳ್ಳದೆ ಆತ್ಮ ವಿಶ್ವಾಸದಿಂದ ಬೆಂಬಿಡದೆ ಬಸವ ಸೇವೆ ಮಾಡುತ್ತಲೇ ಬಂದವರು.ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಸಂದರ್ಭದಲ್ಲಿ ಬೀದರ್‌ನಲ್ಲಿ ಎಲ್ಲ ಬಸವ ಪರ ಸಂಘಟನೆಗಳು ಸೇರಿ ವಿಜಯೋತ್ಸವದ ಆಚರಿಸಿದಾಗ ಬಸವೇಶ್ವರ ವೃತ್ತಕ್ಕೆ ಆಗಮಿಸಿ ತಮ್ಮ ಸಂತಸ ಹಂಚಿಕೊಂಡಿದ್ದು ಮರೆಯಲಾಗದ ಘಟನೆ. ಜೊತೆಗೆ ಎರಡು ತಿಂಗಳ ಹಿಂದೆ ಲಿಂಗಾಯತ ಮಹಾ ಮಠಕ್ಕೆ ಗೋರ್ಟಾ (ಬಿ)ಯಲ್ಲಿ ತನ್ನ ಉತ್ತರಾಧಿಕಾರಿಯಾಗಿ ಸದ್ಗುರು ಪ್ರಭುದೇವರನ್ನು ಪಟ್ಟಾಭಿಷೇಕ ಮಾಡಿ ತನ್ನನ್ನು ನಂಬಿ ಬಂದವರಿಗೆ ಕಾವಿ ಹಾಕಿ ಜಂಗಮ ದೀಕ್ಷೆ ಕೊಟ್ಟು ತನ್ನ ಕೊನೆಯ ಬಸವ ತತ್ವ ಕಾರ್ಯಕ್ರಮ ಮಾಡಿ ತಮ್ಮ ಬಸವ ಸೇವೆಗೆ ಪೂರ್ಣವಿರಾಮ ನೀಡಿ ಲಕ್ಷಾಂತರ ಬಸವ ಭಕ್ತರನ್ನು ರೂಪಿಸಿ ಬಸವಾದಿ ಶರಣರ ಕಾಯಕ ದಾಸೋಹ ಸೇವೆಯ ಅರಿವು ಮೂಡಿಸಿ ಹೋದರು.ಇಂದು ಅಂತ್ಯ ಸಂಸ್ಕಾರ: ಸುಮಾರು ಎಂಟು ದಿನಗಳಿಂದ ಪುನಃ ಆರೋಗ್ಯದಲ್ಲಿ ಏರುಪೇರಾದಾಗ ರಮೇಶ ಮಠಪತಿ, ಮಾಣಿಕಪ್ಪ ಗೋರನಾಳೆ, ಚನ್ನಬಸವ ಹಂಗರಗಿ, ಪೂಜ್ಯ ಪ್ರಭುದೇವರು, ಪ್ರಕಾಶ ಮಠಪತಿ, ಸಿಎಸ್‌ ಪಾಟೀಲ್‌, ಸಿಎಸ್‌ ಗಣಾಚಾರಿ ಸೇರಿ ಕೊಂಡು ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ದಿನೇ ದಿನೇ ಆರೋಗ್ಯ ಕ್ಷೀಣಿಸುತ್ತ ನಿನ್ನೆಯಿಂದ ಬುಧವಾರದಿಂದ ಮಾತು ಮೌನವಾಗಿ ಇಂದು ಗುರುವಾರ ಬೆಳಗ್ಗೆ ಅಸು ನೀಗಿದರು. ಅವರ ಪಾರ್ಥಿವ ಶರೀರವು ಸಾರ್ವಜನಿಕರ ದರುಶನಕ್ಕಾಗಿ ಶರಣ ಉದ್ಯಾನದಲ್ಲಿಟ್ಟು ತದನಂತರ ಬಸವ ಗಿರಿಗೆ ಒಯ್ದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬಸವ ತತ್ವದಂತೆ ಎಲ್ಲ ಪೂಜ್ಯರ ಸಾನ್ನಿಧ್ಯದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

- ಶಿವಶಂಕರ ಟೋಕರೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷರು, ಬೀದರ್‌