ಸಾರಾಂಶ
ಶಿರಸಿ: ಅವೈಜ್ಞಾನಿಕ ಕೊಯ್ಲು ಹಾಗೂ ನಿರ್ವಹಣೆಯಿಂದ ಜೇನು ಸಂತತಿ ನಾಶವಾಗುತ್ತಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ.ನಾರಾಯಣ ಹೆಗಡೆ ಹೇಳಿದರು.
ಅವರು ಬುಧವಾರ ತಾಲೂಕಿನ ಸುಗಾವಿಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯು ಎ.ಎನ್.ಝಡ್ ಸಂಸ್ಥೆಯ ಸಹಯೋಗದಲ್ಲಿ ಗೋಲ್ಡನ್ ಹೈವ್ಸ್ ಯೋಜನೆಯ ಅಡಿಯಲ್ಲಿ ರೈತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ ಸುಧಾರಿತ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪಶ್ಚಿಮಘಟ್ಟದ ಜೇನು ತುಪ್ಪದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ರಾಸಾಯನಿಕ ಸಿಂಪಡಣೆ ಹಾಗೂ ಬೆಂಕಿ ತಗುಲಿಸಿ ಜೇನು ಕೊಯ್ಲು ಮಾಡುವುದರಿಂದ ವ್ಯಾಪಕವಾಗಿ ಜೇನು ಸಂತತಿ ನಾಶವಾದ ಹಿನ್ನೆಲೆಯಲ್ಲಿ ಜೇನಿನ ಉತ್ಪನ್ನವೂ ವ್ಯಾಪಕವಾಗಿ ಕಡಿಮೆಯಾಗಿದೆ. ಜೇನಿನ ಉತ್ಪನ್ನವನ್ನು ಹೆಚ್ಚಿಸುವ ಮೂಲಕ ರೈತ ಮಹಿಳೆಯರ ಆದಾಯ ಹೆಚ್ಚಿಸುವ ಉದ್ದೇಶದಿಂದ ಸುಧಾರಿತ ಜೇನು ಕೃಷಿ ತರಬೇತಿಯನ್ನು ಗೋಲ್ಡನ್ ಹೈವ್ಸ್ ಎಂಬ ಯೋಜನೆಯ ಮುಖಾಂತರ ಜಾರಿಗೆ ತರಲಾಗಿದೆ ಎಂದರು.
ತರಬೇತಿಯಲ್ಲಿ ಸುಗಾವಿ, ಬಂಕನಾಳ ಗ್ರಾಪಂ ವ್ಯಾಪ್ತಿಯ ೫೦ಕ್ಕೂ ಹೆಚ್ಚಿನ ರೈತ ಮಹಿಳೆಯರು, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು. ಜೇನು ಕೃಷಿ ತಜ್ಞ ಮಧುಕೇಶ್ವರ ಹೆಗಡೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಜೇನು ಕೃಷಿಯ ಕುರಿತು ತರಬೇತಿ ನೀಡಿದರು.ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಮನ್ವಯಾಧಿಕಾರಿ ಪ್ರಶಾಂತ ನಾಯಕ, ಗ್ರಾಮ ಪಂಚಾಯತ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಯೋಜನಾ ಸಂಯೋಜಕ ಮಂಜುನಾಥ ಶಿರಸಿಕರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು.