ಅವೈಜ್ಞಾನಿಕ ರಸ್ತೆ ವಿಭಜಕ: ಸಂಚಾರಕ್ಕೆ ಸಮಸ್ಯೆ

| Published : Jul 22 2024, 01:18 AM IST

ಸಾರಾಂಶ

ರಸ್ತೆಯಲ್ಲಿನ ಮಣ್ಣನ್ನು ತೆರವುಗೊಳಿಸಿ ಮರಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡದ ಅಧಿಕಾರಿಗಳು ಈ ರೀತಿ ಕೆಸರುಮಯವಾದ ಮಣ್ಣನ್ನು ರಸ್ತೆಗೆ ಹರಡುತ್ತಿರುವುದನ್ನು ಜನರು ಖಂಡಿಸಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಬೆಳಗಾವಿ-ಹೈದ್ರಾಬಾದ್ ರಾಜ್ಯ ಹೆದ್ದಾರಿ ಪಟ್ಟಣದ ಮಲ್ಲದಗುಡ್ಡ ಕ್ರಾಸ್‌ನಿಂದ ಮಸ್ಕಿ ಕ್ರಾಸ್‌ವರೆಗೆ ತೀವ್ರ ಹದಗೆಟ್ಟಿದ್ದು, ಅವೈಜ್ಞಾನಿಕ ರಸ್ತೆ ವಿಭಜಕ ನಿರ್ಮಾಣದಿಂದ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಈಚೆಗೆ ಸತತ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು ವಾಹನ ಸವಾರರು ಮತ್ತು ಪಾದಾಚಾರಿಗಳು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಈ ನಡುವೆ ಮಳೆ ಸುರಿಯುತ್ತಿರುವಾಗಲೇ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿನ ಮಣ್ಣನ್ನು ಅಲ್ಲಿಯೇ ಹರಡುವುದನ್ನು ಸಾರ್ವಜನಿಕರು ವಿರೋಧಿಸಿದರು. ರಸ್ತೆ ವಿಭಜಕದಿಂದ ರಸ್ತೆ ಕಿರಿದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಮಳೆಯಿಂದ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ತಗ್ಗು-ಗುಂಡಿ ಬಿದ್ದಿದ್ದು, ಜನರು ಸಂಕಟ ಅನುಭವಿಸುತ್ತಿದ್ದಾರೆ. ಶನಿವಾರ ಜೆಸಿಬಿ ಯಂತ್ರ ಬಳಸಿ ರಸ್ತೆ ಬದಿ ಮಣ್ಣನ್ನು ರಸ್ತೆಯಲ್ಲಿ ಹರಡುವುದನ್ನು ಸಾರ್ವಜನಿರಕು ತಡೆದ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಣ್ಣನ್ನು ರಸ್ತೆಗೆ ಹರಡಲು ಅನುಕೂಲ ಮಾಡಿಕೊಟ್ಟರು.

ರಸ್ತೆಯಲ್ಲಿನ ಮಣ್ಣನ್ನು ತೆರವುಗೊಳಿಸಿ ಮರಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡದ ಅಧಿಕಾರಿಗಳು ಈ ರೀತಿ ಕೆಸರುಮಯವಾದ ಮಣ್ಣನ್ನು ರಸ್ತೆಗೆ ಹರಡುತ್ತಿರುವುದನ್ನು ಜನರು ಖಂಡಿಸಿ ಆಕ್ರೋಶ ಹೊರಹಾಕಿದರು.

ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಗುಂಡಿಗಳಿಗೆ ಮರಂ ಹಾಕುವಂತೆ ಸೂಚಿಸಲಾಗಿತ್ತು, ಆದರೆ ಅಲ್ಲಿನ ಮಣ್ಣನ್ನು ಅಲ್ಲಿಯೇ ಹಾಕುತ್ತಿರುವ ಬಗ್ಗೆ ಮೇಸ್ತ್ರಿಯಿಂದ ತಿಳಿದುಕೊಂಡು ಕ್ರಮ ಕೈಗೊಳ್ಳುವುದಾಗಿ ಲೊಕೋಪಯೋಗಿ ಇಲಾಖೆ ಎಂಜಿನಿಯರ್ ಸ್ಯಾಮಲಪ್ಪ ತಿಳಿಸಿದರು.