ಜುವಾರಿ ಗಾರ್ಡನ್ ಸಿಟಿರವರಿಂದ ಅವೈಜ್ಞಾನಿಕ ಕಾಮಗಾರಿ

| Published : Jun 29 2024, 12:35 AM IST

ಸಾರಾಂಶ

ಜುವಾರಿ ಗಾರ್ಡನ್ ಸಿಟಿ ಡೆವಲಪರ್ಸ್‌ನವರು ಬಂಡಿದಾರಿ ಒತ್ತುವರಿ ಮಾಡಿಕೊಂಡು ಅವೈಜ್ಞಾನಿಕವಾಗಿ ರಸ್ತೆ, ಚರಂಡಿ ನಿರ್ಮಿಸಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದ ಗ್ರಾಪಂ ಪಿಡಿಒ ಹಾಗೂ ಗ್ರಾಮಸ್ಥರಿಗೆ ಡೆವಲಪರ್ಸ್‌ ಮುಖ್ಯಸ್ಥರು ಧಮಕಿ ಹಾಕಿರುವುದು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜುವಾರಿ ಗಾರ್ಡನ್ ಸಿಟಿ ಡೆವಲಪರ್ಸ್‌ನವರು ಬಂಡಿದಾರಿ ಒತ್ತುವರಿ ಮಾಡಿಕೊಂಡು ಅವೈಜ್ಞಾನಿಕವಾಗಿ ರಸ್ತೆ, ಚರಂಡಿ ನಿರ್ಮಿಸಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ್ದ ಗ್ರಾಪಂ ಪಿಡಿಒ ಹಾಗೂ ಗ್ರಾಮಸ್ಥರಿಗೆ ಡೆವಲಪರ್ಸ್‌ ಮುಖ್ಯಸ್ಥರು ಧಮಕಿ ಹಾಕಿರುವುದು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

ಹುಲಿಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಜುವಾರಿ ಗಾರ್ಡ್‌ನ್ ಸಿಟಿ ಮುಖ್ಯಸ್ಥರು ಮೂಲ ನಕ್ಷೆಯಲ್ಲಿರುವ ಬಂಡಿದಾರಿ ಒತ್ತುವರಿ ಮಾಡಿಕೊಂಡು ಉದ್ಯಾನವನದ ರಸ್ತೆಯಲ್ಲಿ ಸಾರ್ವಜನಿಕರು ತಿರುಗಾಡದಂತೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ, ಗಾರ್ಡನ್ ಸಿಟಿ ಡೆವಲಪ್ ಮಾಡುವ ವೇಳೆ ಕೆಳಭಾಗದಲ್ಲಿ ಗ್ರಾಮಸ್ಥರ ಮನೆಗಳಿದ್ದು, ಮೇಲಿನಿಂದ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹೊರಹೋಗದೆ ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದರು.

ಇದಲ್ಲದೇ, ಮೂಲ ನಕ್ಷೆಯಲ್ಲಿನ ಬಂಡಿದಾರಿಯನ್ನು ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಶಾಲೆ ಹಾಗೂ ೨-೩ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಂಡಿದಾರಿ ರಸ್ತೆ ಮುಚ್ಚಿಹೋಗಿದೆ ಎಂದು ದೂರಿರುವ ಗ್ರಾಮಸ್ಥರು, ಮನೆಗಳಿಗೆ ಚರಂಡಿ ನೀರು ತುಂಬಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ನಡುವೆ ಮತ್ತೊಂದು ಕಾಮಗಾರಿಗೆ ಜುವಾರಿ ಗಾರ್ಡನ್ ಸಿಟಿ ಅವರು ಮುಂದಾಗಿರುವುದಾಗಿ ಸ್ಥಳೀಯ ನಿವಾಸಿಗಳು ಗ್ರಾಪಂಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಗ್ರಾಪಂ ಪಿಡಿಒ ನಟೇಶ್, ಸ್ಥಳಿಯ ನಿವಾಸಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ಅವರು, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆಗಳ ನೀಡಿದರು. ಒತ್ತುವರಿಯಾಗಿರುವ ಬಂಡಿದಾರಿ ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಇದೀಗ ನಡೆಯುತ್ತಿರುವ ಕಾಮಗಾರಿ ಕಾನೂನಿಗೆ ವಿರೋಧವಾಗಿರುವುದು ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಕಂಡುಬರುತ್ತಿದೆ ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಸ್ಥೆಯವರಿಗೆ ತಿಳಿಸಿದರು.

ಈ ವೇಳೆ ಜುವಾರಿ ಗಾರ್ಡ್‌ನ್ ಸಿಟಿ ಮುಖ್ಯಸ್ಥ ಶ್ರೀನಿವಾಸ್ ಸೇರಿ ಇತರರು, ನಾವು ದಾಖಲೆಗಳ ಪ್ರಕಾರವಾಗಿ ಕಾಮಗಾರಿ ನಡೆಸುತ್ತಿದ್ದೇವೆ. ಇದರಲ್ಲಿ ನಿಮಗೆ ವ್ಯತ್ಯಾಸವಿದ್ದರೆ ನೀವು ಕೋರ್ಟ್‌ಗೆ ಹೋಗಿ ಎಂದು ಪಿಡಿಒ ಹಾಗೂ ಗ್ರಾಮಸ್ಥರಿಗೆ ಹಾರಿಕೆ ಉತ್ತರ ನೀಡಲು ಮುಂದಾದರು. ಇದರಿಂದ ಅಸಮಾಧಾನಗೊಂಡ ಸ್ಥಳೀಯರು ಮೊದಲು ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.

ಈ ವೇಳೆ ಜುವಾರಿ ಗಾರ್ಡನ್ ಸಿಟಿ ಡೆವಲಪರ್ಸ್ ಅವರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಪಿಡಿಒ ಮೂಲ ನಕ್ಷೆಯಲ್ಲಿರುವಂತೆ ಕಾನೂನು ಪ್ರಕಾರ ಬಂಡಿದಾರಿಯಲ್ಲಿ ಯಾವುದೇ ಅನುಮತಿ ಪಡೆಯದೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುವುದು ಅಪರಾಧ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ತಂದು ನೀಡಿ ಪರಿಶೀಲಿಸುತ್ತೇನೆ. ದಾಖಲೆಗಳು ಸರಿಯಿದ್ದರೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದಾಗಿ ಎಂದು ಪಿಡಿಒ ನಟೇಶ್ ಅವರು ತಿಳಿಸಿದರು.

ತಾವು ತೆಗೆದುಕೊಂಡು ಹೋಗಿದ್ದ ದಾಖಲೆಗಳನ್ನು ಬಿಡಿ ಬಿಡಿಯಾಗಿ ತೋರಿಸಿ ತಿಳಿ ಹೇಳಿದರೂ ಕೇಳದ ಅಲ್ಲಿನ ಮುಖ್ಯಸ್ಥರು ನೀವು ಬಂದು ನಮ್ಮ ಜಾಗದಲ್ಲಿ ಅಡ್ಡಿ ಪಡಿಸುತ್ತಿದ್ದೀರಿ, ನಿಮ್ಮ ಮೇಲೆ ನಾವು ಕ್ರ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಚ್ಚರಿಕೆ ನೀಡಿ ಹೊರ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಚಲುವರಾಜು, ಹೋರಾಟಗಾರ ಶ್ರೀನಿವಾಸ್, ಕುಂಟೇಗೌಡ, ರಘು ಹುಲಿಕೆರೆ ಹಾಗೂ ಎಂಎನ್‌ಪಿಎಂ ಕಾಲೋನಿ ನಿವಾಸಿಗಳು ಇದ್ದರು.

ಜುವಾರಿ ಗಾರ್ಡ್‌ನ್ ಸಿಟಿಯವರು ಬಂಡಿದಾರಿ ಒತ್ತುವರಿ ಜೊತೆಗೆ ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ಚಂರಂಡಿ ನೀರು ಹೊರ ಹೋಗದೆ ಸಮಸ್ಯೆಗಳು ಎದುರಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಒತ್ತುವರಿ ಜೊತೆಗೆ ಕಟ್ಟಡ ಕಾಮಗಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ವೇಳೆ ಮಾತಿನ ಚಕಮಕಿ ನಡೆದು ನಮ್ಮ ವಿರುದ್ಧವೇ ಜುವಾರಿ ಗಾರ್ಡ್‌ನ್ ಸಿಟಿಯವರು ಕ್ರಿಮಿನಲ್ ಪ್ರಕರಣವನ್ನು ಹೂಡುವುದಾಗಿ ನನಗೆ ಧಮಕಿ ಹಾಕಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ.

- ನಟೇಶ್, ಪಿಡಿಒ, ಹುಲಿಕೆರೆ ಗ್ರಾಪಂ