ಮನೆ ಕಿಟಕಿ ಗ್ರಿಲ್‌ ಕತ್ತರಿಸಿ ಕಳವಿಗೆ ವಿಫಲ ಯತ್ನ

| Published : Jul 08 2024, 12:41 AM IST

ಸಾರಾಂಶ

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್‌ ಪರಿಸರದಲ್ಲಿ ಅಡ್ಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಐದು ಮಂದಿ ಇದ್ದ ಕಳ್ಳರ ತಂಡ ಕೈಯಲ್ಲಿ ಟಾರ್ಚ್‌ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಕೋಡಿಕಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಮನೆಯವರು ಮಲಗಿದ್ದ ಕೊಠಡಿಯ ಕಿಟಕಿಯ ಗ್ರಿಲ್ ಕತ್ತರಿಸಿ ದುಷ್ಕರ್ಮಿಗಳ ತಂಡ ಶನಿವಾರ ರಾತ್ರಿ ಕಳ್ಳಳವಿಗೆ ವಿಫಲ ಯತ್ನ ನಡೆಸಿದೆ. ಸುಮಾರು ಐದಾರು ಮಂದಿ ಇದ್ದ ಕಳ್ಳರ ತಂಡ ಮನೆಯ ಆವರಣದೊಳಗೆ ನುಗ್ಗಿ ಕಿಟಕಿಯ ಗ್ರಿಲ್‌ ಕತ್ತರಿಸಿ ಕಳ್ಳತನಕ್ಕೆ ಯತ್ನಿಸುವ ಸಿಸಿ ಕ್ಯಾಮರಾ ದೃಶ್ಯ ವೈರಲ್‌ ಆಗಿದೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್‌ ಪರಿಸರದಲ್ಲಿ ಅಡ್ಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಐದು ಮಂದಿ ಇದ್ದ ಕಳ್ಳರ ತಂಡ ಕೈಯಲ್ಲಿ ಟಾರ್ಚ್‌ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್‌ ಬರುತ್ತಿರುವಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು, ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿರುವುದು ಕಂಡುಬಂದಿದೆ.

ಕಿಟಕಿ ಕತ್ತರಿಸಿ ಮನೆಯ ಒಳಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳಿಗೆ ಜಾಲಾಡಿದ್ದಾರೆ. ಆದರೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ಮನೆ ಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಗೆ ತೆರಳಿದ್ದಾರೆ. ಚಡ್ಡಿ ಗ್ಯಾಂಗ್‌ ಕೃತ್ಯ?:

ಚಡ್ಡಿ ಗ್ಯಾಂಗ್‌ ಎಂದರೆ ಇವರು ಚಡ್ಡಿ, ಬನಿಯಾನ್‌ ಹಾಕಿಕೊಂಡೇ ಕೃತ್ಯ ಎಸಗಲು ಬರುತ್ತಾರೆ. ಸೊಂಟದಲ್ಲಿ ಆಯುಧ ಇರಿಸಿಕೊಂಡಿರುತ್ತಾರೆ. ಇವರು ಮಧ್ಯಪ್ರದೇಶ, ಹೈದರಾಬಾದ್‌ ಮೂಲದವರಾಗಿದ್ದು, ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಮನೆ ಮಂದಿ ಗಾಢ ನಿದ್ರೆಗೆ ಜಾರಿದ ಸಂದರ್ಭ ಈ ತಂಡ ಕಳ್ಳತನಕ್ಕೆ ಇಳಿಯುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೇಸು ದಾಖಲಾಗಿದೆ.

ಉಳ್ಳಾಲ ಮನೆ ಕಳವು: ಬಾಲಕರ ಸಹಿತ ಐವರು ವಶಕ್ಕೆ

ಮಂಗಳೂರು: ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿಂದಂತೆ ಐವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಶ್ರೇಯಸ್‌ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಬಂಧಿತರು.ಉಳ್ಳಾಲ ಧರ್ಮನಗರದಲ್ಲಿ ಮನೆಯ ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 32 ಪವನ್‌ಗಿಂತಲೂ ಹೆಚ್ಚಿದ ಸುಮಾರು 15 ಲಕ್ಷ ರು. ಬೆಲೆಬಾಳುವ ಚಿನ್ನಾಭರಣ ಜೂ.8 ರಂದು ಕಳವಾಗಿರುವ ಬಗ್ಗೆ ಸ್ಥಳೀಯ ನಿವಾಸಿ ಶ್ರೀಧರ ಎನ್ನುವವರು ಜೂ.28ರಂದು ಉಳ್ಳಾಲ ಪೊಲೀಸರು ದೂರು ನೀಡಿದ್ದರು.ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಸೇರಿದಂತೆ ಆರೋಪಿಗಳಾದ ಶ್ರೇಯಸ್‌ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿರವರನ್ನು ವಶಕ್ಕೆ ಪಡೆದು ಅವರು ಕಳವು ಮಾಡಿದ್ದರು. ಮಂಗಳೂರು ನಗರದ ವಿವಿಧ ಚಿನ್ನಾಭರಣ ಅಂಗಡಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳಾದ ಶ್ರೇಯಸ್‌ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ಜೆ.ಜೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.