ಸಾರಾಂಶ
ರಾಣಿಬೆನ್ನೂರು: ನಗರದ ಎಪಿಎಮ್‌ಸಿ ಮಾರುಕಟ್ಟೆಯಲ್ಲಿರುವ ಸೊಸೈಟಿಯಲ್ಲಿ ರೈತರಿಗೆ ಅವಶ್ಯಕತೆ ಇರುವ 10.26.26. ಡಿಎಪಿ ಮತ್ತು ಯೂರಿಯಾ ರಸಗೊಬ್ಬರ ಪೂರೈಕೆಯಾಗದಿರುವುದನ್ನು ಖಂಡಿಸಿ ತಾಲೂಕಿನ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಜಗದೀಶ ಕೆರೂಡಿ ಮಾತನಾಡಿ, ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆ ಸುರಿದಿದ್ದರಿಂದ ಗ್ರಾಮೀಣ ಭಾಗಗಳಿಂದ ರೈತರು ರಸಗೊಬ್ಬರಕ್ಕಾಗಿ ಸೊಸೈಟಿ ಎದುರು ನಿಂತು ಗೋಗರೆದರೂ ಗೊಬ್ಬರ ಸಿಗುತ್ತಿಲ್ಲ. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ರೈತ ಬಾಂಧವರಿಗೆ 2024ನೇ ಸಾಲಿನ ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ಬೀಜ, ರಸಗೊಬ್ಬರಗಳ ದಾಸ್ತಾನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಇಲ್ಲಿ ರೈತರು ಬಂದು ಗೊಬ್ಬರಕ್ಕಾಗಿ ಸೊಸೈಟಿ ಮುಂದೆ ಭಿಕ್ಷೆ ಬೇಡುವಂತಾಗಿದೆ. ಕಳೆದ ವರ್ಷದ ಹಿಂಗಾರು ಮತ್ತು ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲ ಹಾಗೆ ಉಳಿದಿದೆ. ಈ ವರ್ಷ ಮುಂಗಾರು ಸ್ವಲ್ಪ ಚುರುಕುಗೊಂಡಿದ್ದು ರೈತರಲ್ಲಿ ಹರುಷದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರೈತರು ರಸಗೊಬ್ಬರಕ್ಕಾಗಿ ಅಲೆದಾಡುವಂತಾಗಬಾರದು. ಆದ್ದರಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಮರ್ಪಕ ರಸಗೊಬ್ಬರ ಪೂರೈಕೆ ಮಾಡಬೇಕು.
ಜಿಲ್ಲೆಯಲ್ಲಿ 2008ರಲ್ಲಿ ಅಂದಿನ ಸರ್ಕಾರ ಬೀಜ, ರಸಗೊಬ್ಬರಗಳ ಪೂರೈಕೆಯಲ್ಲಿ ಸಂಪೂರ್ಣ ವಿಳಂಬವಾಗಿದ್ದರಿಂದ ಅನ್ನದಾತರು ಬೀದಿಗಿಳಿದು ಹೋರಾಡಬೇಕಾಯಿತು. ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿತ್ತು. ಅಂತಹ ಕರಾಳ ದಿನಗಳು ಮರುಕಳಿಸಬಾರದು ಎನ್ನುವ ದೂರ ದೃಷ್ಟಿಯಿಂದ ರಾಜ್ಯ ಸರ್ಕಾರ ಜಿಲ್ಲೆಗೆ ಸಮರ್ಪಕ ರಸಗೊಬ್ಬರ ಬೀಜ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ನಂದೇಪ್ಪ ಗುಗ್ಗರಿ. ಮಾರುತಿ ದೊಡ್ಡಮನಿ. ಕಾಂತೇಶ ಗುಗ್ಗರಿ, ಕಲ್ಲಪ್ಪ ಗುತ್ತಲ, ಸೋಮಣ್ಣ ಬೇವಿನಹಳ್ಳಿ, ಮಂಜಪ್ಪ ಗುಗ್ಗರಿ, ಲೋಕಣ್ಣ ಎಲೆಗಾರ, ಮಲ್ಲೇಶ ಗುಗ್ಗರಿ, ತಿಮ್ಮಪ್ಪ ನಾಯಕ್, ಕಿರಣ್ ಲಮಾಣಿ ಮತ್ತಿತರರಿದ್ದರು.ಡಿಎಪಿ ಬದಲಿಗೆ ಪರ್ಯಾಯ ಗೊಬ್ಬರಗಳ ಸಮರ್ಪಕ ದಾಸ್ತಾನಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಮಾತ್ರ ಡಿಎಪಿ ಗೊಬ್ಬರದ ಅವಶ್ಯಕತೆ ಉಂಟಾಗುವುದರಿಂದ ಆಗ ಮಾತ್ರ ಅದನ್ನು ವಿತರಿಸಲಾಗುತ್ತದೆ. ಆದ್ದರಿಂದ ರೈತರು ಪರ್ಯಾಯ ಗೊಬ್ಬರ ಬಳಕೆ ಮಾಡಿ ಸಹಕರಿಸಬೇಕು ಎಂದು ರಾಣಿಬೆನ್ನೂರಿನ ಸಹಾಯಕ ಕೃಷಿ ನಿರ್ದೇಶಕರಾದ
ಶಾಂತಮಣಿ ಜಿ. ಹೇಳಿದರು.