ಶಿವಾಜಿ ಕಾಲೇಜಿನಲ್ಲಿ ಗ್ರಾಮೀಣ ಸಂಸ್ಕೃತಿಯ ಅನಾವರಣ

| Published : May 18 2025, 01:30 AM IST

ಸಾರಾಂಶ

ಧಾರವಾಡ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾರಂಭಗೊಂಡ ವಿದ್ಯಾರ್ಥಿನಿಯರ ಪೂರ್ಣಕುಂಭ ಮೆರವಣಿಗೆಗೆ ಡೊಳ್ಳು ಕುಣಿತ, ವಿದ್ಯಾರ್ಥಿಗಳ ಜೋಡೆತ್ತಿನ ಎತ್ತಿನ ಬಂಡಿ ಮೆರವಣಿಗೆ, ಟ್ಯಾಕ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು ಮೆರಗು ತುಂಬಿದರು.

ಧಾರವಾಡ: ಒಂದಡೆ ಬೀಸುವ ಕಲ್ಲಿನ ಪದಗಳು, ಮತ್ತೊಂದಡೆ ಕುಟ್ಟುವ ಪದಗಳು, ಮಗದೊಂದಡೆ ಒಳಕಲ್ಲ ಪೂಜೆ ಪದಗಳು, ಜೋಡೆತ್ತಿನ ಜೋಳದ ರಾಶಿ, ಗುಡಿಸಲು, ಲಕ್ಷ್ಮಿದೇವಿಯ ಆರಾಧನೆ... ಹೀಗೆ ಜನಪದ ಸಂಸ್ಕೃತಿ ಅನಾವರಣದ ದೃಶ್ಯಗಳು ನಯನ ಮನೋಹರವಾಗಿದ್ದವು.

ಇಲ್ಲಿಯ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ''''''''ಜಾನಪದ ಸಂಭ್ರಮ'''''''' ದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿಯನ್ನು ತಂದಿಟ್ಟರು.

ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾರಂಭಗೊಂಡ ವಿದ್ಯಾರ್ಥಿನಿಯರ ಪೂರ್ಣಕುಂಭ ಮೆರವಣಿಗೆಗೆ ಡೊಳ್ಳು ಕುಣಿತ, ವಿದ್ಯಾರ್ಥಿಗಳ ಜೋಡೆತ್ತಿನ ಎತ್ತಿನ ಬಂಡಿ ಮೆರವಣಿಗೆ, ಟ್ಯಾಕ್ಟರ್‌ನಲ್ಲಿ ಬಂದ ವಿದ್ಯಾರ್ಥಿಗಳು ಮೆರಗು ತುಂಬಿದರು. ಈ ನಿಮಿತ್ತ ಕಾಲೇಜಿನ ಸಭಾಂಗಣ ತಳಿರು-ತೋರಣ, ಜೋಡೆತ್ತಿನ ಜೋಳದ ರಾಶಿ, ಗರಿಗರಿ ಕಬ್ಬು, ಬಾಳೆಕಂಬ, ಚಂಡಹೂ, ಸೇವಂತಿಗೆ ಹೂ, ಸೇರು, ಬೆಲ್ಲ, ಧಾನ್ಯಗಳ ರಾಶಿ, ವಿವಿಧ ಪೂಜಾ ಸಾಮಗ್ರಿಗಳ ಮೂಲಕ ಹಬ್ಬದ ವಾತಾವರಣ ನಿರ್ಮಿಸಿದ್ದು ಗಮನ ಸೆಳೆಯಿತು.

ವಿದ್ಯಾರ್ಥಿನಿಯರು ಇಳಕಲ್ ಸೀರೆ, ರೇಷ್ಮೆ ಸೀರೆ, ಜರತಾರೆ ಸೀತೆ ಹಾಗೂ ಕುಪ್ಪಸದ ಜತೆಗೆ ಕವಿಯೋಲೆ, ಮೂಗುತಿ, ನತ್ತು, ನಡುಪಟ್ಟಿ (ಡಾಬ), ಬೆಂಡೋಲೆ ಇತ್ಯಾದಿ ಸಾಂಪ್ರಾದಾಯಿಕ ಆಭರಣ ತೊಟ್ಟು ಬಂದಿದ್ದು, ಜಾನಪದ ಸಂಭ್ರಮಕ್ಕೆ ಕಳಗಟ್ಟುವಂತೆ ಮಾಡಿತ್ತು. ಪುರುಷ ವಿದ್ಯಾರ್ಥಿಗಳು ಕೂಡ ಪಂಚೆ, ನೀಲುವಂಗಿ ಧರಿಸಿ ವಿದ್ಯಾರ್ಥಿನಿಯರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಸೆಲ್ಫೆ ಕ್ಲಿಕ್ಕಿಸುವುದು ಸಾಮಾನ್ಯವಾಗಿತ್ತು. ನಂತರ ವಿದ್ಯಾರ್ಥಿಗಳು ಚಕ್ಕಡಿ-ಟ್ಯಾಕ್ಟರ್ ಏರಿ, ಕಾಲೇಜು ಆವರಣದಲ್ಲಿ ಮೋಜು ಮಸ್ತಿ ಮಾಡಿದರು.

ಡಿಜಿಟಲ್ ಕ್ರಾಂತಿ ಪರಿಣಾಮ ಮೊಬೈಲ್ ಹಾಗೂ ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಜಾನಪದ ಸಂಭ್ರಮದ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ, ಹಬ್ಬಗಳ ಬಗ್ಗೆ ಅರಿವು ಮೂಡಿಸಿದ ಕಾರ್ಯ ಶ್ಲಾಘನೀಯ. ಭವಿಷ್ಯದ ಪೀಳಿಗೆಗೆ ನಮ್ಮ ಉಡುಗೆ-ತೊಡುಗೆ ಗ್ರಾಮೀಣ ಸೊಗಡು, ಸಂಸ್ಕೃತಿ ಜೊತೆ ಸಂಸ್ಕಾರವೂ ಪರಿಚಯಿಸುವಲ್ಲಿ ಜಾನಪದ ಸಂಭ್ರಮ ಯಶಸ್ವಿಯಾಯಿತು. ಕೊನೆಗೆ ವಿದ್ಯಾರ್ಥಿಗಳ ಸಹಪಂಕ್ತಿ ಭೋಜನದ ನಂತರ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಸಿ ಸಂಭ್ರಮಿಸಿದರು.

ಜಾನಪದ ಸಂಭ್ರಮಕ್ಕೆ ಮರಾಠ ವಿದ್ಯಾ ಪ್ರಸಾರಕ ಮಂಡಳದ ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಗೌರವ ಕಾರ್ಯದರ್ಶಿ ರಾಜು ಬಿರಜೆನ್ನವರ, ಸಹಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ನಿರ್ದೇಶಕರಾದ ಸುನೀಲ ಮೋರೆ, ಸುಭಾಸ ಪವಾರ, ಅನೀಲ ಬೋಸ್ಲೆ, ರಾಜು ಕಾಳೆ, ಪುರುಷೋತ್ತಮ ಜಾಧವ, ದತ್ತಾತ್ರೇಯ ಮೋಟಿ, ಬೋಧಕ-ಬೋಧಕೇತರ ಸಿಬ್ಬಂದಿ ಸಾಕ್ಷಿಯಾದರು.

ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ದೇಸಿಯತೆ ಕಣ್ಮರೆ ಆಗುತ್ತಿದೆ. ಹೀಗಾಗಿ ನಿತ್ಯದ ಆಟ-ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಜಾನಮದ ಸಂಭ್ರಮದ ಮೂಲಕ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಉಡುಗೆ-ತೊಡುಗೆ, ಸಂಪ್ರದಾಯ ಪರಿಚಯಿಸವ ಕೆಲಸ ಮಾಡುತ್ತಿದೆ ಎಂದು ಕಾಲೇಜು ಪ್ರಾಚಾರ್ಯ ಎಂ.ಎಸ್. ಗಾಣಿಗೇರ ಹೇಳಿದರು.