ಕಲಾಕೃತಿಗಳಲ್ಲಿ ಗ್ರಾಮೀಣ ಸಂಸ್ಕೃತಿಯ ಅನಾವರಣ

| Published : Sep 15 2024, 01:49 AM IST

ಸಾರಾಂಶ

ಕೆ.ವಿ ಕಾಳೆಯವರು ಹೊರ ತಂದಿರುವ ಕ್ಯಾಟಲಾಗ್ ಅದ್ಭುತ ಚಿತ್ರಗಳನ್ನು ಒಳಗೊಂಡಿವೆ.

ಸಂಡೂರು: ಚಿತ್ರಕಲಾವಿದ ಕೆ.ವಿ. ಕಾಳೆಯವರು ತಮ್ಮ ಕಲಾಕೃತಿಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದಾರೆ. ಅವರ ಚಿತ್ರಗಳು ಚಿತ್ತಾಕರ್ಷಕವಾಗಿವೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ ವಿವರಿಸಿದರು.

ಪಟ್ಟಣದ ಎಲ್.ಬಿ. ಕಾಲನಿಯಲ್ಲಿನ ಡಾ.ವಿ.ಟಿ. ಕಾಳೆಯವರ ಮನೆ ಸ್ನೇಹಕುಂಜದ ಆವರಣದಲ್ಲಿ ಶುಕ್ರವಾರ ನಡೆದ ಕೆ.ವಿ. ಕಾಳೆಯವರ ಕಲಾಕೃತಿಗಳ ಪ್ರದರ್ಶನದ ಕ್ಯಾಟಲಾಗ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅತಿಥಿಗಳನ್ನು ಸ್ವಾಗತಿಸಿ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರಕಲಾವಿದ ಕೆ.ವಿ. ಕಾಳೆ, ಸೆ.೧೭ ರಿಂದ ೨೩ರವರೆಗೆ ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶವನ್ನು ಏರ್ಪಡಿಸಲಾಗಿದೆ. ಸದರಿ ಗ್ಯಾಲರಿಯಲ್ಲಿ ತಮ್ಮದು ಎರಡನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವಾಗಿದೆ. ಈಗ ನಡೆಯಲಿರುವುದು ತಮ್ಮದು ೧೬ನೇ ಚಿತ್ರಕಲಾ ಪ್ರದರ್ಶನವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕರಾದ ಬಸವರಾಜ ಮಸೂತಿ ಹಾಗೂ ಸಿ.ಎಂ. ಶಿಗ್ಗಾವಿಯವರು ಮಾತನಾಡಿ, ಡಾ.ವಿ.ಟಿ. ಕಾಳೆಯವರ ಕುಟುಂಬವೇ ಅದ್ಭುತ ಚಿತ್ರಕಲಾವಿದರ ಕುಟುಂಬವಾಗಿದೆ. ಕೆ.ವಿ ಕಾಳೆಯವರ ಕುಂಚದಲ್ಲಿ ಮೂಡಿರುವ ಕಲಾಕೃತಿಗಳು ನಮ್ಮ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿವೆ. ಕೆ.ವಿ ಕಾಳೆಯವರು ಹೊರ ತಂದಿರುವ ಕ್ಯಾಟಲಾಗ್ ಅದ್ಭುತ ಚಿತ್ರಗಳನ್ನು ಒಳಗೊಂಡಿವೆ. ಅವರ ಕಲಾಪ್ರದರ್ಶನ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಕಲಾವತಿ ತಂಡದವರು ಪ್ರಾರ್ಥಿಸಿದರು. ಎಚ್.ಎನ್. ಭೋಸ್ಲೆ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್, ಕೆ.ಉಮೇಶ್ ಸಂಗೀತ ಕಾರ್ಯಕ್ರಮ ನೀಡಿದರು. ಎಚ್.ವೀರಣ್ಣ, ಟಿ.ಎಂ. ಶಿವಕುಮಾರ್, ಕಾರ್ತಿಕ್ ಕಾಳೆ, ಶ್ರೀಕಾಂತ್ ಕಾಳೆ, ಎಸ್.ಡಿ. ಪ್ರೇಮಲೀಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಂಡೂರಿನ ಎಲ್.ಬಿ ಕಾಲೊನಿಯಲ್ಲಿರುವ ಸ್ನೇಹಕುಂಜ ಗೃಹದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಚಿತ್ರಕಲಾವಿದ ಕೆ.ವಿ. ಕಾಳೆಯವರ ಕಲಾಕೃತಿಗಳ ಪ್ರದರ್ಶನದ ಕ್ಯಾಟಲಾಗ್ ಬಿಡುಗಡೆಗೊಳಿಸಿದರು.