ಬಸವ ತತ್ವ ಸಾರಿದ ಸಂತ ಶ್ರೀ ಗುರುಮಲ್ಲೇಶ್ವರರು

| Published : Apr 08 2025, 12:31 AM IST

ಸಾರಾಂಶ

ಗ್ರಾಮೀಣ ಭಾಗದಲ್ಲಿ ಕಾಲ್ನಡಿಗೆಯಲ್ಲೆ ಸಂಚರಿಸಿ ಬಸವಣ್ಣನವರ ತತ್ವ ಸಿದ್ದಾಂತವನ್ನು ಜನರಿಗೆ ಮುಟ್ಟಿಸುವ ಮಹತ್ವದ ಕೆಲಸವನ್ನು ನಿರ್ವಹಿಸಿದರು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಮೈಸೂರು, ಚಾಮರಾಜನಗರ ಭಾಗದಲ್ಲಿ ಮಠಗಳನ್ನು ಸ್ಥಾಪಿಸಿ ಕಾಯಕದ, ದಾಸೋಹದ ಮಹತ್ವವನ್ನು ಶ್ರೀ ಗುರುಮಲ್ಲೇಶ್ವರರು ಸಾರಿದರು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ ಶಿಲಾ ಪ್ರತಿಮೆ ಅನಾವರಣ ಹಾಗೂ ಶರಣ ಸಂಗಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕಾಲ್ನಡಿಗೆಯಲ್ಲೆ ಸಂಚರಿಸಿ ಬಸವಣ್ಣನವರ ತತ್ವ ಸಿದ್ದಾಂತವನ್ನು ಜನರಿಗೆ ಮುಟ್ಟಿಸುವ ಮಹತ್ವದ ಕೆಲಸವನ್ನು ನಿರ್ವಹಿಸಿದರು.ಕಂತೆ ಭಿಕ್ಷೆ ಪರಿಕಲ್ಪನೆಯನ್ನು ಜಾರಿಗೆ ತಂದವರು ಶ್ರೀ ಗುರುಮಲ್ಲೇಶ್ವರರು ಎಂದ ಅವರು, ಕಂತೆ ಭಿಕ್ಷೆ ಕಾಯಕ ಮಹತ್ತರವಾದದ್ದು, ಎಲ್ಲ ಭಕ್ತರ ಮನೆಯ ಆಹಾರವನ್ನು ಒಂದೇ ಪಾತ್ರೆಯಲ್ಲಿ ಹಾಕುತ್ತಾರೆ. ಯಾರ ಮನೆಯ ಅಹಾರ ಯಾವುದು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಪ್ರಸಾದ ಸೇವಿಸಿದ ಭಕ್ತನಿಗೂ ನಾನು ಯಾರ ಮನೆಯ ಊಟ ತಿಂದೆ ಎಂಬುದು ತಿಳಿಯುವುದಿಲ್ಲ. ಇಲ್ಲಿ ಯಾರ ಋಣವೂ ಯಾರ ಮೇಲೆಯೂ ಇರುವುದಿಲ್ಲ ಎಂದರು.ಯಾವಾಗಲೂ ಧರ್ಮ-ದೇವರ ನಡುವಿನ ನಡುವೆ ಅಡ್ಡಗೋಡೆಯಾಗಬಾರದು. ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ. ಕಷ್ಟದಲ್ಲಿ ಸಿಲುಕಿರುವವರನ್ನು ಪಾರು ಮಾಡುವುದೇ ನಿಜವಾದ ಧರ್ಮ ಎಂದರು.ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 18ನೇ ಶತಮಾನದ ಮಹಾನ್ ಪುರುಷೋತ್ತಮ ಶ್ರೀ ಗುರುಮಲ್ಲೇಶ್ವರರು, ದಾಸೋಹ, ಕಾಯಕ ಪರಂಪರೆ ಕೊಟ್ಟ ಸಂತ ಎಂದು ಅವರ ಸಾಧನೆ ಸಿದ್ದಿಯನ್ನು ಕೊಂಡಾಡಿದರು.ವೀರಶೈವ, ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಮಾತನಾಡಿ, ಸಿದ್ಧಗಂಗಾ ಮಠ, ಸುತ್ತೂರು ವೀರಶೈವ, ಲಿಂಗಾಯತ ಸಮಾಜದ ಎರಡು ಕಣ್ಣುಗಳು. ಇವೆರಡು ಮಠಗಳು ಇಲ್ಲದಿದ್ದರೆ ಎಷ್ಟೋ ಹಳ್ಳಿಗಳ ಜನರಿಗೆ ವಿದ್ಯಾಭ್ಯಾಸ ಸಿಗುತ್ತಿರಲಿಲ್ಲ. ಜೆಎಸ್ಎಸ್ ಮಠ ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘಿಸಿದರು.ಮರಿಯಾಲ ಮಠದ ಶ್ರೀ ಮುರುಘ ರಾಜೇಂದ್ರ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಮಹಾಸ್ವಾಮೀಜಿ, ವೀರಶೈವ ಯುವ ಮುಖಂಡ ನಿಶಾಂತ್ ಮಾತನಾಡಿದರು.ವಿವಿಧ ಮಠಗಳ ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.ಪುಟಾಣಿಗಳಾದ ಸಾನ್ವತ್ ಅವರ ಭರತನಾಟ್ಯ ಹಾಗೂ ಶಿವಾಂಶು ಅವರು ವಚನ ಗಾಯನ ಗಮನ ಸೆಳೆಯಿತು.ಹಿರಿಯ ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ, ಖೋ ಖೋ ವಿಶ್ವಕಪ್ ವಿಜೇತ ಆಟಗಾರ್ತಿ ಬಿ. ಚೈತ್ರಾ, ಹರಿಕಥಾ ವಿದ್ವಾಂಸ ಬದನವಾಳು ಶಿವಕುಮಾರ ಶಾಸ್ತ್ರಿ ಹಾಗೂ ಶ್ರೀ ಗುರುಮಲ್ಲೇಶ್ವರ ಪ್ರತಿಮೆ ಕೆತ್ತಿದ ಶಿಲ್ಪಿ ಪ್ರವೀಣ್ ಹಾಗೂ ಅವರ ತಂದೆಯನ್ನು ಸನ್ಮಾನಿಸಲಾಯಿತು. ಪ್ರತಿಮೆ ಅನಾವರಣಶ್ರೀ ಗುರುಮಲ್ಲೇಶ್ವರ ಪ್ರತಿಮೆಯನ್ನು ಬೆಳಗ್ಗೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣಸಿದರು. ಗುರುಮಲ್ಲೇಶ್ವರರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.ವಿವಿಧ ಮಠಾಧೀಶರು, ಗ್ರಾಮದ ಮುಖಂಡರು, ಶ್ರೀ ಗುರುಮಲ್ಲೇಶ್ವರ ಯುವ ಬಳಗ ಭಾಗವಹಿಸಿದ್ದರು.