ಸಾರಾಂಶ
ಕಾರವಾರ: ನಗರದ ಹಬ್ಬುವಾಡಾ ರಾಘವೇಂದ್ರ ಮಠದಲ್ಲಿ ಆ. 11ರಂದು ನಡೆಯಲಿರುವ 25ನೇ ಆರಾಧನಾ ಉತ್ಸವದ ಅಂಗವಾಗಿ ಈಚೆಗೆ ಮಠದ ಸಭಾಭವನದಲ್ಲಿ ಏರ್ಪಡಿಸಿದ್ದ ಭಜನಾ ಮತ್ತು ಭರತನಾಟ್ಯ ಸ್ಪರ್ಧೆಗಳು ಸುಮಾರು ಎಂಬತ್ತು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಯಿತು.
ಭಜನಾ ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲೆಗಳ ಐವತ್ತು ವಿದ್ಯಾರ್ಥಿನಿಯರು ಮತ್ತು ಭರತನಾಟ್ಯ ಸ್ಪರ್ಧೆಯಲ್ಲಿ ಸುಮಾರು 30 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಭಜನಾ ಸ್ಪರ್ಧೆಯಲ್ಲಿ ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು, 3000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನವನ್ನು ಪಡೆದ ಬಾಲ ಮಂದಿರ ಶಾಲೆ ಮತ್ತು ಮೂರನೇ ಸ್ಥಾನ ಗೆದ್ದ ಹಿಂದೂ ಪ್ರೌಢಶಾಲೆಯ ತಂಡಗಳು ಅನುಕ್ರಮವಾಗಿ ₹2000 ಮತ್ತು ₹1000 ನಗದು ಬಹುಮಾನಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡವು. ಶಿವಾಜಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸ್ಪರ್ಧೆಗೆ ಜ್ಯೋತಿ ರಾವ್ ಮತ್ತು ಶ್ಯಾಮಲಾ ಭಟ್ ನಿರ್ಣಾಯಕರಾಗಿದ್ದರು. ಜಗದೀಶ ವೆರ್ಣೇಕರ, ವಿನೋದ ನಾಯ್ಕ, ರಜನಿ ಕುಲ್ಕರ್ಣಿ ಮತ್ತು ಸುಜಾತಾ ನಾಯ್ಕ ಬಹುಮಾನಗಳ ಪ್ರಾಯೋಜಕರಾಗಿದ್ದರು.
ಭರತನಾಟ್ಯ ಸ್ಪರ್ಧೆಯಲ್ಲಿ ನಾಟ್ಯರಾಣಿ ಭರತನಾಟ್ಯಮ್ ನೃತ್ಯ ಕಲಾ ಕೇಂದ್ರ ಪ್ರಥಮ, ಶ್ರೀರಸ್ತು ಕಲಾ ಕೇಂದ್ರ ದ್ವಿತಿಯ ಮತ್ತು ರಶ್ಮಿ ಕಲಾ ಲೋಕ ತೃತಿಯ ಸ್ಥಾನಗಳನ್ನು ಗಳಿಸಿ, ಅನುಕ್ರಮವಾಗಿ ₹5000, ₹3000 ಹಾಗೂ ₹2000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡವು.ನೌಕಾನೆಲೆಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಸಮಾಧಾನಕರ ಪ್ರಶಸ್ತಿಯನ್ನು ನೀಡಲಾಯಿತು. ಸೌಮ್ಯಾ ಹೆಗಡೆ ಮತ್ತು ಸುಪ್ರಿಮಾ ನಿರ್ಣಾಯಕರಾಗಿದ್ದರು. ವಿನಾಯಕ ಆರ್. ಹಬ್ಬು ಮತ್ತು ರಂಜನಾ ಹಬ್ಬು ಪ್ರಥಮ ಬಹುಮಾನದ ಪ್ರಾಯೋಜಕರಾಗಿದ್ದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ಬೃಂದಾವನ ಸಮಿತಿ ಕಾರ್ಯದರ್ಶಿ ಆರ್.ಎಸ್. ಹಬ್ಬು, ಶ್ರೀ ರಾಘವೇಂದ್ರ ಮಠವು ಕೇವಲ ಶ್ರದ್ಧಾಕೇಂದ್ರವಾಗಿರದೇ, ಸಾಂಸ್ಕೃತಿಕ ಕೇಂದ್ರವಾಗಿಯೂ ಬೆಳೆಯಬೇಕು ಎಂಬ ಉದ್ದೇಶವನ್ನು ಸಮಿತಿ ಹೊಂದಿದೆ. ಆ ದಿಸೆಯಲ್ಲಿ ಅನೇಕ ವರ್ಷಗಳಿಂದ ಪ್ರಸಿದ್ಧ ಯಕ್ಷಗಾನ ಮೇಳಗಳಿಂದ ಯಕ್ಷಗಾನ ಕಾರ್ಯಕ್ರಮ, ನೀನಾಸಮ್‌ನಂತಹ ರಾಜ್ಯ ಮಟ್ಟದ ನಾಟಕ ಸಂಘಗಳಿಂದ ನಾಟಕಗಳು, ಕರ್ನಾಟಕ ಸಂಗೀತ ವಿದ್ವಾನ ವಿದ್ಯಾಭೂಷಣ ಮತ್ತು ಹಿಂದುಸ್ತಾನಿ ಸಂಗೀತದ ದಿಗ್ಗಜ ಆನಂದ ಭಾಟೆ ಅವರಂಥ ಸಂಗೀತ ಕಾರ್ಯಕ್ರಮಗಳನ್ನು ಮತ್ತು ಭಜನಾ ಸ್ಪರ್ಧೆಗಳನ್ನು ಮಠದ ಆವರಣದಲ್ಲಿ ಏರ್ಪಡಿಸಲಾಗುತ್ತಿದೆ ಎಂದರು. ಸಮಿತಿಯ ಖಜಾಂಚಿ, ರಾಮಾ ನಾಯ್ಕ ವಂದನಾರ್ಪಣೆ ಮಾಡುತ್ತ, ಸಮಿತಿ ನಡೆದು ಬಂದ ದಾರಿ ವಿವರಿಸಿದರು.ಮಠದ ಅರ್ಚಕ ಶ್ರೀನಿವಾಸ ಉಡುಪ ಮತ್ತು ಶ್ರವಣ ಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.