ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರ ಪ್ರದೇಶದಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ವಿವಿಧ ಸರ್ಕಾರಿ ಕಚೇರಿಗಳಿಗೆ ಹಾಗೂ ಜಿಲ್ಲಾಸ್ಪತ್ರೆ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ, ಕಾರ್ಯವೈಖರಿ ಪರಿಶೀಲಿಸಿದರು. ಪರಿಶೀಲನೆ ವೇಳೆ ಕಂಡುಬಂದ ಅವ್ಯವಸ್ಥೆ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸೇವೆಯಲ್ಲಿ ಲೋಪಗಳಿಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ದಾಖಲಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನವನಗರದ ಎಪಿಎಂಸಿಗೆ ಭೇಟಿ ನೀಡಿ ಮೂಲಸೌಕರ್ಯ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ರೈತರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಎಪಿಎಂಸಿಯಲ್ಲಿ 3 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಹಮಾಲನಿಗೆ ಇನ್ನೂ ಗುರುತಿನ ಚೀಟಿ ವಿತರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತರು, ಅರ್ಹ ಹಮಾಲರೆಲ್ಲರಿಗೂ ಶೀಘ್ರ ಗುರುತಿನ ಚೀಟಿ ವಿತರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಾರುಕಟ್ಟೆಯಲ್ಲಿ ಕಮಿಷನ್ ಹೆಸರಿನಲ್ಲಿ ಅನಧಿಕೃತ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬ ಕುರಿತು ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಹಮಾಲರಿಂದ ಮಾಹಿತಿ ಪಡೆದು ವಿಚಾರಣೆ ನಡೆಸಿದರು. ಸರ್ಕಾರ ನಿಗದಿಪಡಿಸಿರುವ ನಿಯಮಗಳಂತೆ ಮಾತ್ರ ವ್ಯವಹಾರ ನಡೆಯಬೇಕು. ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ಅಕ್ರಮ ಅಥವಾ ಅನಧಿಕೃತ ವಸೂಲಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಸು-ಮೋಟೋ ಪ್ರಕರಣ ದಾಖಲು ಮಾಡಿದರು.

ಸೀಮಿಕೇರಿ ಕ್ರಾಸ್ ಬಳಿಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು, ಕುಡಿಯುವ ನೀರಿನ ಶುದ್ಧೀಕರಣ ಪ್ರಕ್ರಿಯೆ, ನೀರಿನ ಗುಣಮಟ್ಟ ಪರೀಕ್ಷೆ, ವಿತರಣಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.ಪ್ರತಿ ತಿಂಗಳು ನೀರಿನ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಿದರು. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವಂತೆ ಸೂಚಿಸಿದರು.


ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹೊರರೋಗಿ ವಿಭಾಗ, ವಾರ್ಡಗಳು, ಔಷಧ ವಿತರಣೆ ಕೇಂದ್ರ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ವೇಲೆ ರೋಗಿಗಳೊಂದಿಗೆ ಸಂವಾದ ನಡೆಸಿ, ಚಿಕಿತ್ಸೆ, ಔಷಧ ಲಭ್ಯತೆ ಹಾಗೂ ಸೇವೆಯ ಕುರಿತು ಮಾಹಿತಿ ಪಡೆದರು. ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ಉತ್ತಮ ಸೇವೆ ಒದಗಿಸುವಂತೆ ವೈದ್ಯರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರಸಭೆ ಕಚೇರಿಗೆ ಭೇಟಿ ನೀಡಿ, ನಾಗರಿಕರಿಗೆ ನೀಡುವ ಸೇವೆಗಳು, ಸ್ವಚ್ಛತೆ, ಕುಡಿಯುವ ನೀರು, ತೆರಿಗೆ ಸಂಗ್ರಹ ಹಾಗೂ ಸಾರ್ವಜನಿಕ ದೂರುಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಸ್ಪಂದಿಸಿ, ದೂರುಗಳನ್ನು ವಿಳಂಬವಿಲ್ಲದೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳ ಕಚೇರಿ ಬಾಗಿಲಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂಬ ಬೋರ್ಡ್‌ನ್ನು ನೋಡಿ ತಕ್ಷಣ ತೆಗೆದು ಹಾಕಲು ತಿಳಿಸಿ, ಸಾರ್ವಜನಿಕರಿಗಾಗಿ ಕೆಲಸ ನಿರ್ವಹಿಸುವ ಅಧಿಕಾರಿ ಆಗಿರುವದರಿಂದ ಈ ರೀತಿ ಲೋಪ ಎಸಗಿದ ಅಧಿಕಾರಿಗಳ ಮೇಲೆ ಸು-ಮೋಟೋ ಪ್ರಕರಣ ದಾಖಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಅಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ ನಿಗಮಕ್ಕೆ ಭೇಟಿ ನೀಡಿ ಆಡಳಿತದಲ್ಲಿ ನಿರ್ಲಕ್ಷ್ಯ ಕಂಡು ಸು-ಮೋಟೊ ಪ್ರಕರಣ ದಾಖಲಿಸಿದರು.

ಭೇಟಿ ಸಮಯದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಲೋಕಾಯುಕ್ತ ಎಸ್ಪಿ ನಂದಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್‌ ವಾಸುದೇವ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

--------

ಬಾಕ್ಸ್.....

ಯುಪಿಐ ಆಪ್‌ನಲ್ಲಿ ಸಿಬ್ಬಂದಿಯ ಹಣದ ವ್ಯವಹಾರ

ಬಾಗಲಕೋಟೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಉಪ ಲೋಕಾಯುಕ್ತರು ಭೇಟಿ ವೇಳೆ ಕಚೇರಿಯ ಸಿಬ್ಬಂದಿ ರಂಜಿತಾ ಮಂಗಳೂರು ಎಂಬುವರ ಮೊಬೈಲ್ ಆಪ್ ಪರಿಶೀಲಿಸಿದಾಗ ಅವರ ಆದಾಯಕ್ಕಿಂತ ಹೆಚ್ಚಿನ ಆರ್ಥಿಕ ವಹಿವಾಟು ನಡೆದಿರುವುದು ಕಂಡುಬಂದಿತು. ಈ ಹಿನ್ನಲೆಯಲ್ಲಿ ಅವರ 2 ವರ್ಷಗಳ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ನೀಡುವಂತೆ ಎಸಿಗೆ ಸೂಚಿಸಿದರು.

ತಹಸೀಲ್ದಾರ್‌ ಕಚೇರಿಯಲ್ಲಿಯೂ ದ್ವಿದಸ ರಾಕೇಶ ಚಲವಾದಿ ಮೊಬೈಲ್ ಪರಿಶೀಲಿಸಲಾಗಿ ಫೆಬ್ರವರಿ-2026ರಲ್ಲಿ ₹ 1.54 ಲಕ್ಷ, ಮಾರ್ಚನಲ್ಲಿ ₹ 4.82 ಲಕ್ಷ, ಮೇನಲ್ಲಿ ₹ 3 ಲಕ್ಷ ಜುಲೈ ಮಾಹೆಯಲ್ಲಿ ₹ 1.69 ಲಕ್ಷ, ನವೆಂಬರ-2025ರಲ್ಲಿ ₹ 2 ಲಕ್ಷ ವಹಿವಾಟು ಮಾಡಿರುವುದು ಕಂಡುಬಂದಿತು. ಈ ಸಿಬ್ಬಂದಿಯ ಎರಡು ವರ್ಷಗಳ ವಹಿವಾಟಿನ ಮಾಹಿತಿ ನೀಡುವಂತೆ ತಹಸೀಲ್ದಾರ್‌ರಿಗೆ ಸೂಚಿಸಿ ಸು-ಮೋಟೋ ಪ್ರಕರಣ ದಾಖಲಿಸಲಾಯಿತು.-----------