ಹುಬ್ಬಳ್ಳಿ: ಉಪನಯನ ಜೀವನದ ಮೊದಲ ಘಟ್ಟ. ಇದು ಭಾರತದ ಸನಾತನ ಧರ್ಮದ ಸಂಸ್ಕೃತಿ. ಕ್ಷತ್ರಿಯರಾದ ನಮಗೆ ಇಂತಹ ಅಮೂಲ್ಯ ಸಂಪ್ರದಾಯ ತಲೆತಲಾಂತರದಿಂದ ಹರಿದು ಬಂದಿರುವುದು ನಮ್ಮೆಲ್ಲ ಪುಣ್ಯ ಎಂದು ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೆಹರವಾಡೆ ಹೇಳಿದರು.
ಇಲ್ಲಿನ ರವಿನಗರದ ಶ್ರೀಗಣಪತಿ ದೇವಸ್ಥಾನದ ಆವರಣದಲ್ಲಿ ಗುರುವಾರ ಎಸ್‌ಎಸ್‌ಕೆ ಗೋಕುಲ ರೋಡ್ ಪಂಚ ಸಮಿತಿ, ಎಸ್‌ಎಸ್‌ಕೆ ಮಿತ್ರ ಮಂಡಳಿ ಹಾಗೂ ಬೆಂಗಳೂರಿನ ಖೋಡೆ ಪರಿವಾರ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಡಿದರು.ಧಾರಣೆ ಮಾಡುವುದರಿಂದ ಉದ್ಯೋಗ, ಶಿಕ್ಷಣದಲ್ಲಿ ಮೇರುಗತಿ ಪಡೆಯಲು ಸಾಧ್ಯವಾಗಲಿದೆ. ಹಿಂದುತ್ವದ ಸಂಸ್ಕಾರ ನಮ್ಮ ಪೂರ್ವಜರಿಂದ ಬಂದಿದೆ. ಇದನ್ನು ನಾವು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ₹1 ಲಕ್ಷ ಕೊಡಲು ಖೋಡೆ ಕುಟುಂಬ ನಿರ್ಧರಿಸಿದೆ. ನಮ್ಮ ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು. ಮುಂದೆ ಆಡಳಿತ ರಂಗದಲ್ಲಿಯೂ ಅವರು ಮಿಂಚುವಂತಾಗಬೇಕು ಎಂದರು.
ಎಬಿಎಸ್‌ಎಸ್‌ಕೆ ಅಧ್ಯಕ್ಷ ಶ್ರೀನಿವಾಸ ಖೋಡೆ ಮಾತನಾಡಿ, ಗಾಯತ್ರಿ ಮಂತ್ರವು ನಮ್ಮ ಸಮಸ್ಯೆಗಳನ್ನು ಬಗೆಹರಿಸುವುದಲ್ಲದೆ, ನಮ್ಮ ಜೀವನದ ಉನ್ನತಿಗೆ ಸಹಕರಿಸಲಿದೆ. ನಿತ್ಯ ನಿರಂತರ ಪಠಣ ಮಾಡಬೇಕು ಎಂದು ಹೇಳಿದರು.ಎಬಿಎಸ್‌ಎಸ್‌ಕೆ ಉಪಾಧ್ಯಕ್ಷ ಸತ್ಯನಾರಾಯಣ ಡಮಾಮ, ಕಾರ್ಯದರ್ಶಿ ಶ್ಯಾಮ ಕಬಾಡಿ ಮಾತನಾಡಿದರು. ಒಟ್ಟು 170 ಮಕ್ಕಳಿಗೆ ಉಪನಯನ ನೆರವೇರಿಸಲಾಯಿತು. ಗೋಕುಲ ರೋಡ್ ಪಂಚ ಸಮಿತಿ ಅಧ್ಯಕ್ಷ ರಮೇಶ ಬುರಬುರೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀರಾಮ ಕುಟೀರ ಆಶ್ರಮದ ಶ್ರೀ ತಾರಾಚಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಅಶೋಕ ಕಾಟವೆ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಎಸ್‌ಎಸ್‌ಕೆ ಸಮಾಜದ ಹು-ಧಾ ಅಧ್ಯಕ್ಷ ಸತೀಶ ಮಹೆರವಾಡೆ, ಪ್ರಮುಖರಾದ ನಾರಾಯಣಸಾ ನಿರಂಜನ, ಶಂಕರ ಮಿಸ್ಕಿನ್, ಟಿ.ಎಂ. ಮೆಹರವಾಡೆ, ಎನ್.ಎನ್. ಖೋಡೆ, ಹುಲೇಂದ್ರ ಪವಾರ, ನೀಲಕಂಠಸಾ ಜಡಿ, ಭಾಸ್ಕರ ಜಿತೂರಿ ಸೇರಿದಂತೆ ಹಲವರಿದ್ದರು.