ಉಪಾಸನೆ ಭಾರತೀಯರ ಜೀವನ ವಿಧಾನ: ವಿದ್ವಾನ್ ಗಜಾನನ ಭಟ್

| Published : Sep 15 2024, 01:49 AM IST

ಉಪಾಸನೆ ಭಾರತೀಯರ ಜೀವನ ವಿಧಾನ: ವಿದ್ವಾನ್ ಗಜಾನನ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಹಳೆಯದನ್ನು ಮರೆತು ಹೊಸತನ್ನು ವೈಭವೀಕರಿಸುವುದು ಬೇಡ. ನಮ್ಮ ಪುರಾತನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೂರ್ವಜರು ಮಾಡಿರುವ ವ್ರತಗಳನ್ನು ಅನುಸೋಣ ಎಂದು ವಿದ್ವಾನ್ ಗಜಾನನ ಭಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಹೊಸತನ್ನು ಸ್ವೀಕರಿಸೋಣ. ಆದರೆ ಹಳೆಯದನ್ನು ಮರೆತು ಹೊಸತನ್ನು ವೈಭವೀಕರಿಸುವುದು ಬೇಡ. ನಮ್ಮ ಪುರಾತನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೂರ್ವಜರು ಮಾಡಿರುವ ವ್ರತಗಳನ್ನು ಅನುಸರಿಸುತ್ತಿರುವುದೇ ಸಾಕ್ಷಿ. ಏಕೆಂದರೆ ಉಪಾಸನೆ ಎನ್ನುವುದು ಸನಾತನ ಭಾರತೀಯರ ಜೀವನ ವಿಧಾನವೇ ಆಗಿದೆ ಎಂದು ಸಂಸ್ಕೃತ ಉಪನ್ಯಾಸಕ ವಿದ್ವಾನ್ ಗಜಾನನ ಭಟ್ ರೇವಣಕಟ್ಟಾ ಅಭಿಪ್ರಾಯಪಟ್ಟರು.

ಪಟ್ಟಣದ ಅಜಿತ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಳೆ ಅಷ್ಟಮಿವ್ರತ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ವ್ರತ ಎಂಬ ಪದ ನಿಯಮ, ಪೂಜೆ, ಪ್ರಾರ್ಥನೆ, ಹರಕೆ, ಪ್ರತಿಜ್ಞೆ, ಶೀಲಾ ಮೊದಲಾದ ಅರ್ಥಗಳನ್ನು ಹೊಂದಿದೆ. ವ್ರತದಲ್ಲಿ ನೈಮಿತ್ತಿಕ, ಕಾಮ್ಯಗಳೆಂಬ ಬೇಧವನ್ನು ಕಾಣುತ್ತೇವೆ ಎಂದರು.

ಎಳೆ ಅಷ್ಟಮಿವ್ರತ ಗ್ರಂಥವು ಕೇದಾರೇಶ್ವರ, ಮಹಾಲಕ್ಷ್ಮೀ, ಧಾನ್ಯಶಂಕರ ಎಂಬ ಮೂರು ದೇವತೆಗಳ ಉಪಾಸನೆಯನ್ನು ಸಾರುತ್ತಿದೆ. ಆಸ್ತಿಕ ಸಮಾಜದಲ್ಲಿ ಭಾದ್ರಪದ ಶುಕ್ಷ ಅಷ್ಟಮಿ, ನವಮಿ ತಿಥಿಗಳಲ್ಲಿ ವಿಶೇಷವಾಗಿ ಆಚರಿಸುವ ಈ ವ್ರತವು ಮಿಶ್ರಪೂಜೆಯನ್ನು ಹೊಂದಿದೆ. ನಾವು ಮೋಕ್ಷವನ್ನು ವಿಷ್ಣುವಿನಿಂದಲೂ, ಸಂಪತ್ತನ್ನು ಮಹಾಲಕ್ಷ್ಮೀಯಿಂದಲೂ, ಜ್ಞಾನವನ್ನು ಮಹೇಶ್ವರನಿಂದಲೂ ಪ್ರಾರ್ಥಿಸಬೇಕೆಂದು ಆಗಮ ಶಾಸ್ತ್ರದ ಉಪದೇಶ. ಜೀವನದಲ್ಲಿ ಐಹಿಕವಾದ ಸುಖ ಸಮೃದ್ಧಿಗೆ ಮಹಾಲಕ್ಷ್ಮೀಯ ಕೃಪೆ ಬೇಕು. ಅದಕ್ಕಾಗಿ ಮಹಾಲಕ್ಷ್ಮೀಯ ಆರಾಧನೆ ಜೊತೆ ನಮ್ಮ ಹೃದಯ ರಂಗಸ್ಥಳದಲ್ಲಿ ಬೆಳಗುವ ಪರಂಜ್ಯೋತಿಯ ದರ್ಶನಾನುಭವ ಹೊಂದುವುದು ಜೀವನದ ಪರಮ ಗುರಿಯಾಗಬೇಕು ಎಂದು ಹೇಳಿದರು. ವಿದ್ವಾನ್ ನಾರಾಯಣ ಭಟ್ ಗೋಳಗೋಡು ಸಂಸ್ಕಾರ ಮತ್ತು ಸಂಸ್ಕೃತಿ ವಿಷಯ ಕುರಿತು ಮಾತನಾಡಿದರು. ನವೀನ್ ಪುರುಷೋತ್ತಮ್, ಗಣಪತಿ ಹುಲಿಮನೆ, ರವೀಂದ್ರ ಶರ್ಮ, ಅಭಿಷೇಕ್ ಭಟ್, ಲಕ್ಷ್ಮೀನಾರಾಯಣ ಭಟ್ ಇನ್ನಿತರರು ಹಾಜರಿದ್ದರು.