ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಜಯಂತಿ ಆಚರಣೆಗಿಂತ ಬಸವಣ್ಣನವರ ತತ್ವಾದರ್ಶನಗಳ ಪಾಲಿನೆ ಮುಖ್ಯ ಎಂದು ವಾಟಾಳು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಮೈಸೂರು ಜಿಲ್ಲಾ ಹಾಗೂ ಟಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶ್ರೀಶಿವಕುಮಾರ ಸ್ವಾಮಿಗಳವರ ಸೇವಾ ಟ್ರಸ್ಟ್, ಶ್ರೀಜಗಜ್ಯೋತಿ ಬಸವೇಶ್ವರ ಯುವಕರ ಸಂಘ, ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಡಣಾಯಕನಪುರದಲ್ಲಿ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಶರಣ ಸಾಹಿತ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಬಸವ ಜಯಂತಿ ಮೆರವಣಿಗೆ, ದಾಸೋಹಕ್ಕೆ ಸೀಮಿತವಾಗಬಾರದು. ಹನ್ನೇರಡನೆ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಆದ್ದರಿಂದ ಅವುಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಈಗಾಗಲೇ ವಾಟಾಳುಪುರ ಗ್ರಾಮದಲ್ಲಿ ವಚನ ಗ್ರಾಮ ಕಾರ್ಯಕ್ರಮ ನಡೆಸಲಾಗಿದೆ. ಬೇರೆ ಬೇರೆ ಗ್ರಾಮಗಳಲ್ಲೂ ಈ ಕಾರ್ಯಕ್ರಮ ನಡೆಸುವ ಮೂಲಕ ಮನೆ ಮನೆಗೆ ವಚನ ಸಾಹಿತ್ಯ ಪುಸ್ತಕ ತಲುಪಿಸಲಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬಸವಣ್ಣ ಸೇರಿದಂತೆ ಬಸವಾದಿ ಶರಣರು ಜನರ ಮಧ್ಯೆಯಿಂದ ಬಂದವರು. ಜನರ ಕಷ್ಟ-ಸುಖಗಳನ್ನು ಅರಿತು, ಅನುಭವದ ಆಧಾರದ ಮೇರೆಗೆ ವಚನಗಳನ್ನು ರಚಿಸಿದರು. ಇದರಿಂದಾಗಿಯೇ ವಚನ ಸಾಹಿತ್ಯ ಜೀವನ ವಿಧಾನವಾಗಿದೆ. ಇವತ್ತಿಗೂ ಪ್ರಸ್ತುತವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಗೊಳಿಸುವಲ್ಲಿ ಶರಣ ಸಾಹಿತ್ಯ, ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಆದ್ಯ ವಚನಕಾರ ದೇವರ ದಾಸಿಮಯ್ಯ ನಂತರ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣಣ ಮೊದಲಾದ ಬಸವಾದಿ ಶರಣರು ವಚನ ಕ್ರಾಂತಿಯನ್ನೇ ಮಾಡಿದರು. ವಚನ ಸಾಹಿತ್ಯ ಸಮಾಜದ ಉದ್ಧಾರಕ್ಕಾಗಿ ರಚಿತವಾದುದು. ವರ್ಣ, ವರ್ಗ, ಜಾತಿ, ಲಿಂಗ, ಮೂಢನಂಬಿಕೆ, ಕಂದಾಚಾರ, ಬಡತನ, ಅಸಮಾನತೆ ವಿರುದ್ಧ ಅರಿವ ಮೂಡಿಸಿತು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ತಮಿಳುನಾಡಿನಲ್ಲಿ ಪೆರಿಯಾರ್‌ರಿಂದ ಆಗಿರುವ ಪ್ರಭಾವ ಕರ್ನಾಟಕದಲ್ಲಿ ಬಸವಣ್ಣ ಅವರಿಂದ ಯಾಕೆ ಆಗಿಲ್ಲ? ಎಂಬುದನ್ನು ವಿಚಾರ ಮಾಡಬೇಕು. ತಮಿಳುನಾಡಿನಲ್ಲಿ ಇವತ್ತಿಗೂ ದ್ರಾವಿಡ ಸಿದ್ಧಾಂತವಿರುವ ಪಕ್ಷಗಳನ್ನು ಹೊರತುಪಡಿಸಿದರೆ ಬೇರೆಯವರು ಅಧಿಕಾರಕ್ಕೆ ಬರಲು ಆಗಿಲ್ಲ. ನಮ್ಮಲ್ಲಿ ಈ ರೀತಿ ಯಾಕೆ ಆಗಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಬಸವಣ್ಣನವರನ್ನು ಕರ್ನಾಟಕದ ಗಡಿಯಾಚೆಗೆ ತಲುಪಿಸುವ ಕೆಲಸ ಆಗಬೇಕು ಎಂದರು.ಬಸವಣ್ಣನವರ ಕೊಟ್ಟ ಕಾಯಕವೇ ಕೈಲಾಸ ಎಂಬುದು ಕಾರ್ಲ್ ಮಾರ್ಕ್ಸ್‌ಗಿಂತ ಅತ್ಯುತ್ತಮವಾದ ಸಿದ್ಧಾಂತ. ಆದರೆ ಬಸವಣ್ಣನವರಿಗೆ ಅಷ್ಟೊಂದು ವ್ಯಾಪಕತೆ ಸಿಗಲಿಲ್ಲ. ಇದರಿಂದಾಗಿಯೇ ಎಲ್ಲೆಡೆ ಬಸವ ತತ್ವಗಳನ್ನು ಪ್ರಚುರಪಡಿಸಲು ಮುಂದಾಗಿದ್ದೇವೆ ಎಂದರು.
ಸನ್ಮಾನಿತರಾದ ಶರಣ ತತ್ವ ಚಿಂತಕ ಪ್ರೊ.ಚಂದ್ರಶೇಖರಯ್ಯ ಮಾತನಾಡಿ, ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ನಾನು ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಬಸವ ಕೇಂದ್ರ ನಿರ್ಮಿಸಲಾಯಿತು. ಶರಣ ಸಾಹಿತ್ಯ ವಿಷಯದ ಕೋರ್ಸ್ ಆರಂಭಿಸಲಾಯಿತು. ಇದೇ ರೀತಿ ದೇಶದ ಕನಿಷ್ಠ ಹತ್ತು ವಿವಿಗಳಲ್ಲಿ ಶರಣ ಸಾಹಿತ್ಯ ಕೋರ್ಸುಗಳ ಆರಂಭವಾದರೆ ಬಸವಣ್ಣನವರನ್ನು ಎಲ್ಲರಿಗೂ ತಲುಪಿಸಬಹುದು ಎಂದರು.ಪ್ರತಿಯೊಬ್ಬರ ಮನೆಯಲ್ಲಿ ಶರಣ ಸಾಹಿತ್ಯ ಸಂಪುಟ ಇರಬೇಕು ಎಂದರು.
ಮತ್ತೊರ್ವ ಸನ್ಮಾನಿತರಾದ ಸಮಾಜ ಸೇವಕ ಕೀಳನಪುರ ಕೆ.ಎಸ್. ಮಾದಪ್ಪ ಮಾತನಾಡಿ, ಬಸವಾದಿ ಶರಣರ ತತ್ಪಾದರ್ಶ ಪ್ರಚಾರಕ್ಕೆ ತಮ್ಮ ಕೈಲಾದ ಸೇವೆ, ಸಹಾಯ ಮಾಡುವುದಾಗಿ ಭರವಸೆ ನೀಡಿದರು.ಕೊಳ್ಳೇಗಾಲ ತಾ.ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ, ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಉಪನ್ಯಾಸ ನೀಡಿದರು. ಬಸವಣ್ಣನವರು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರು ಎಂದು ಬಣ್ಣಿಸಿದರು.
ಮುಡುಕನಪುರ ಹಲವಾರುಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಉಪನ್ಯಾಸ ನೀಡಿದರು. ತನ್ನಕ್ಕೆ ನಾಗಲಾಂಬಿಕೆ ಉಪನಯನ ಮಾಡದ ಧರ್ಮ ತನಗೂ ಬೇಡ ಎಂದು ಬಸವಣ್ಣನವರು 11ನೇ ವರ್ಷಕ್ಕೆ ರೆಬೆಲ್ ಸ್ಟಾರ್ ಆಗಿ ಹೊರಬಂದರು. ಮಹಿಳಾ ಸಮಾನೆಗೆ ಶ್ರಮಿಸಿದರು. ವಿವಿಧ ಕಾಯಕ ಮಾಡುವ ಎಲ್ಲಾ ವರ್ಗದ ಜನರನ್ನು ಒಂದೇ ಕಡೆ ತಂದರು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯ.ಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ ಕೆಬ್ಬೇಹುಂಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ. ಅಧ್ಯಕ್ಷ ಸಿ.ಎಂ. ಪ್ರಕಾಶ್, ಶ್ರೀ ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ತಾ. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ ಎಂ. ತೊಟ್ಟವಾಡಿ ಉಪಸ್ಥಿತರಿದ್ದರು.
ಮೈಸೂರಿನ ಚೂಡಾಮಣಿ ವಚನ ಗಾಯನ ನಡೆಸಿಕೊಟ್ಟರು. ಚಿನ್ನಬುದ್ಧಿ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು.ಸ್ವಾಮಿಗಳ ಸಮಾಗಮ...ಟಿ.ನರಸೀಪುರ ತಾಲೂಕಿನಲ್ಲಿ ಸುಮಾರು 45 ಮಠಗಳಿದ್ದು, ಡಣಾಯನಕಪುರದಲ್ಲಿ ನಡೆದ ಬಸವೇಶ್ವರ ಜಯಂತಿಯಲ್ಲಿ 25ಕ್ಕೂ ಹೆಚ್ಚು ಮಂದಿ ಒಂದೇ ವೇದಿಕೆಯ್ಲಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ನಂತರ ಗ್ರಾಮದ ಯುವಕರು ವಿವಿಧ ಜಾನಪದ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಿದರು.