ಸಾರಾಂಶ
- ಪ್ರಾಯೋಗಿಕ ಪರೀಕ್ಷೆ ಸೆಕ್ಸಸ್
- ಇಡೀ ನಿಗಮದಲ್ಲೇ ಜಾರಿಗೊಳಿಸಲು ನಿರ್ಧಾರ- ಯುಪಿಐ ಜಾರಿಗೊಳಿಸಿದ ಮೊದಲ ನಿಗಮವಿದುಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಬಸ್‌ಗಳಲ್ಲಿ ಯುಪಿಐ ವ್ಯವಸ್ಥೆ ಜಾರಿಗೊಳಿಸಿ ಯಶಸ್ವಿಯಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸ ವರ್ಷದ ಪ್ರಾರಂಭದಲ್ಲೇ ನಿಗಮದ ಎಲ್ಲ ವಿಭಾಗಗಳಲ್ಲೂ ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಮೂಲಕ ಯುಪಿಐ ವ್ಯವಸ್ಥೆ ಜಾರಿಗೊಳಿಸಿದ ರಾಜ್ಯದ ಮೊದಲ ನಿಗಮವಾಗಲಿದೆ.
ಈ ವರೆಗೆ ಬಸ್‌ಗಳಲ್ಲಿ ಹಣ ನೀಡಿಯೇ ಟಿಕೆಟ್ ಪಡೆದುಕೊಳ್ಳಬೇಕಿತ್ತು. ಚಿಲ್ಲರೆ ಹಣಕ್ಕಾಗಿ ನಿರ್ವಾಹಕರು ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ, ಜಗಳ ನಿತ್ಯ ಎಂಬಂತಾತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಯುಪಿಐ ಮೂಲಕ ನೇರವಾಗಿ ನಿರ್ವಾಹಕರ ಅಕೌಂಟ್‌ಗೆ ಹಣ ಜಮೆ ಮಾಡುವ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಜಾರಿಗೊಳಿಸಲಾಯಿತು. ಮೊದಲಿಗೆ ಹುಬ್ಬಳ್ಳಿ ಡಿಪೋದಲ್ಲಿನ ಬಸ್‌ಗಳಲ್ಲಿ ಮಾತ್ರ ಇದನ್ನು ಜಾರಿಗೊಳಿಸಲಾಗಿತ್ತು. ಬರಬರುತ್ತಾ ವಿಭಾಗದ ಐದು ಡಿಪೋಗಳಲ್ಲಿ ಜಾರಿಗೊಳಿಸಲಾಗಿದೆ. ದಿನನಿತ್ಯದ ವಹಿವಾಟಿನಲ್ಲಿ ಶೇ.20-25ರ ವರೆಗೆ ವ್ಯವಹಾರ ಯುಪಿಐ ಮೂಲಕವೇ ಆಗುತ್ತಿದೆ. ಇಲ್ಲಿನ 400 ಜನ ನಿರ್ವಾಹಕರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ನೀಡಲಾಗಿದೆ.ಇಡೀ ನಿಗಮ:
ಈ ವ್ಯವಸ್ಥೆ ಯಶಸ್ವಿಯಾದ ಕಾರಣ, ನಿಗಮದ 6 ಜಿಲ್ಲೆಗಳ 8 ವಿಭಾಗಗಳ 4830 ಬಸ್‌ಗಳಲ್ಲೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. 8000ಕ್ಕೂ ಅಧಿಕ ನಿರ್ವಾಹಕರಿದ್ದರೆ, ಎಲ್ಲರ ಹೆಸರಲ್ಲೂ ಪ್ರತ್ಯೇಕ ಕ್ಯೂಆರ್ ಕೋಡ್ ಸಿದ್ಧಪಡಿಸುವ ಕೆಲಸ ನಡೆದಿದೆ. ಪ್ರತಿ ನಿರ್ವಾಹಕರ ಹೆಸರಲ್ಲೂ ಕ್ಯೂಆರ್ ಕೋಡ್ ರಚಿಸಲಾಗುವುದು. ಜತೆಗೆ ಆ ಕ್ಯೂ ಆರ್ ಕೋಡ್‌ನ ಲಿಂಕ್‌ನ್ನು ಡಿಪೋ ಬ್ಯಾಂಕ್‌ನ ಹೆಸರಲ್ಲಿರುವ ಬ್ಯಾಂಕ್ ಖಾತೆಗೆ ಜೋಡಿಸುವ ಕೆಲಸ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಈ ಕೆಲಸವೆಲ್ಲ ಜನವರಿ ಎರಡನೆಯ ವಾರದೊಳಗೆ ಪೂರ್ಣವಾಗಲಿದೆ. ಆ ಬಳಿಕ ಎಲ್ಲ ಬಸ್‌ಗಳಲ್ಲಿ ಯುಪಿಐ ಜಾರಿಗೊಳಿಸಲಾಗುವುದು. ಈ ಸಂಬಂಧ ಪೋನ್ ಪೇ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಚಿಲ್ಲರೆಗಾಗಿ ನಿರ್ವಾಹಕರು- ಪ್ರಯಾಣಿಕರ ಮಧ್ಯೆ ನಡೆಯುವ ವಾಗ್ವಾದ, ಕಿರಿಕಿರಿಗಳೆಲ್ಲ ತಪ್ಪಲಿದೆ. ನೇರವಾಗಿ ಖಾತೆಗೆ ಜಮೆಯಾಗುವುದರಿಂದ ಸಮಸ್ಯೆಯಾಗಲ್ಲ ಎಂಬುದು ಇಲಾಖೆ ಅಧಿಕಾರಿಗಳ ಅಂಬೋಣ.
ರಾಜ್ಯದ ಮೊದಲ ನಿಗಮ:ಈ ವ್ಯವಸ್ಥೆ ಜಾರಿಯಾದರೆ ಬಸ್‌ಗಳಲ್ಲೇ ಯುಪಿಐ ಮೂಲಕ ಪೇಮೆಂಟ್ ಮಾಡುವ ವ್ಯವಸ್ಥೆ ಮಾಡಿರುವ ಮೊದಲ ನಿಗಮವಾಗಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹೊರಹೊಮ್ಮಲಿದೆ.
ಬಸ್‌ಗಳಲ್ಲೇ ಯುಪಿಐ ಪೇಮೆಂಟ್ ವ್ಯವಸ್ಥೆ ನಿರ್ವಾಹಕರಲ್ಲಿ ಸಂತಸ ಉಂಟು ಮಾಡಿದೆ. ಚಿಲ್ಲರೆಗಾಗಿ ಗುದ್ದಾಡುವ ಕೆಲಸ ತಪ್ಪಲಿದೆ ಎನ್ನುವುದು ನಿರ್ವಾಹಕರ ನಿರೀಕ್ಷೆ.ಜನವರಿಯೊಳಗೆ ನಿಗಮದ ಎಲ್ಲ 4830 ಬಸ್‌ಗಳಲ್ಲೂ ಯುಪಿಐ ಪೇಮೆಂಟ್ ಜಾರಿಗೊಳಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳೆಲ್ಲ ಅಂತಿಮದಲ್ಲಿವೆ. ಯುಪಿಐ ಪೇಮೆಂಟ್ ಮೂಲಕ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸುತ್ತಿರುವ ರಾಜ್ಯದ ಮೊದಲ ನಿಗಮ ನಮ್ಮದು ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ತಿಳಿಸಿದ್ದಾರೆ.
ಯುಪಿಐ ಪೇಮೆಂಟ್ ಪಡೆದುಕೊಳ್ಳುವ ಕುರಿತು ನಿರ್ವಾಹಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಯಾವುದೇ ಬಗೆಯ ಗೊಂದಲ ಆಗದಂತೆ ನಿರ್ವಹಿಸಲಾಗುವುದು. ಪ್ರತಿ ನಿರ್ವಾಹಕರಿಗೂ ಪ್ರತ್ಯೇಕ ಕ್ಯೂ ಆರ್ ಕೋಡ್ ರಚನೆ ಮಾಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್.ರಾಮನಗೌಡರ ತಿಳಿಸಿದ್ದಾರೆ,