ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯ ಹಾಗೂ ಕುಟುಂಬದ ಉನ್ನತಿ ಸಾಧ್ಯವೆಂದು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ವೀರಶೈವ ಸಮಾಜದಿಂದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24ನೇ ಸಾಲಿನ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ವಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರತಿಭಾನ್ವಿತ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಧನೆ ಹಿಂದಿನ ಪರಿಶ್ರಮ, ಪೋಷಕರ ಸಹಾಯ, ಸಮಾಜದ ನೆರವನ್ನು ಮರೆಯದೆ ತಮ್ಮ ಮುಂದಿನ ಬದುಕಿನಲ್ಲಿ ನೆನಪು ಮಾಡಿಕೊಳ್ಳಬೇಕು. ಬಡತನದಲ್ಲಿಯೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದರ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಮಾಡಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಿದೆ. ತಮ್ಮ ಯಶಸ್ವಿಗೆ ಕಾರಣರಾದವರನ್ನು ಯಾವತ್ತೂ ಮರೆಯಬಾರದು. ಅದು ಪೋಷಕರಾಗಿರಲಿ, ಸಮಾಜವಾಗಿರಲಿ, ಶಿಕ್ಷಕರಾಗಿರಲಿ ಸದಾ ಕಾಲ ನೆನೆಯಬೇಕಿದೆ ಎಂದರು.
ಮುಂದಿನ ದಿನದಲ್ಲಿ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು ಸೇರಿಸಿ ಜಿಲ್ಲೆಯಲ್ಲಿನ ವೀರಶೈವ ಪ್ರತಿಭಾವಂತ ಮಕ್ಕಳಿಗೂ ಸಹಾ ಸನ್ಮಾನ ಮಾಡುವ ಕಾರ್ಯವನ್ನು ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಅದನ್ನು ಶೀಘ್ರವಾಗಿ ಕಾರ್ಯ ರೂಪಕ್ಕೆ ತರಲಾಗುವುದು. ಚಿತ್ರದುರ್ಗದಲ್ಲಿ ನಮ್ಮ ಸಮಾಜದ ಮಕ್ಕಳು ಓದಲು ವಸತಿ ನಿಲಯ ಇಲ್ಲ. ಈ ಹಿನ್ನಲೆಯಲ್ಲಿ ನಮ್ಮ ಸಮಾಜದವತಿಯಿಂದ ಉತ್ತಮವಾದ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡುವ ಉದ್ದೇಶ ಇದೆ ಎಂದರು.ಉಪನ್ಯಾಸ ನೀಡಿದ ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ, ನಮ್ಮ ಪ್ರಗತಿ ನಮ್ಮ ಕೈಯಲಿಯೇ ಇದೆ. ಇದನ್ನು ಯಾರು ಬಂದು ಮಾಡುವುದಿಲ್ಲ. ಶಿಕ್ಷಣದಿಂದ ಮಾತ್ರ ನಮ್ಮ ಉದ್ಧಾರ ಸಾಧ್ಯವಿದೆ. ಬೇರೆ ಕಡೆಗೆ ಮನಸ್ಸನ್ನು ಹರಿ ಬಿಡಬೇಡಿ. ಹುಮ್ಮಸ್ಸು ಛಲ ನಿಮ್ಮಲ್ಲಿ ಇದ್ದಾಗ ಮಾತ್ರ ಬೆಳೆಯಲು ಸಾಧ್ಯವಿದೆ ಎಂದರು.
ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ನಿರ್ದೇಶಕರಾದ ಸಿದ್ದವ್ವನಹಳ್ಳಿ ಪರಮೇಶ್, ತಿಪ್ಪೇಸ್ವಾಮಿ, ಕೆ.ಎನ್.ವಿಶ್ವನಾಥಯ್ಯ, ಜಯಪ್ಪ, ಲತಾ ಉಮೇಶ್ ಎಸ್.ವಿ.ಕೋಟ್ರೇಶ್, ಮುಖಂಡರಾದ ಜ್ಞಾನಮೂರ್ತಿ, ರುದ್ರೇಶ್, ರೀನಾ ವೀರಭದ್ರಪ್ಪ, ಮೋಕ್ಷಾ ರುದ್ರಸ್ವಾಮಿ, ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.ಉಮ್ಮೇಶ್ ಪತ್ತಾರ್ ಪ್ರಾರ್ಥಿಸಿದರೆ, ಷಡಾಕ್ಷರಯ್ಯ ಸ್ವಾಗತಿಸಿದರು, ನಿರಂಜನ ದೇವರಮನೆ ಕಾರ್ಯಕ್ರಮ ನಿರೂಪಿಸಿದರು.