ಸಾರಾಂಶ
ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ಸತ್ಯಯುಗ ಯೋಗಾಶ್ರಮದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ದೇವರು ಮೆಚ್ಚುವ, ಜನ ಮೆಚ್ಚುವ ಕೆಲಸವನ್ನು ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳಾಗಿರದೆ ವಿದ್ಯಾರ್ಥಿ ನಾಯಕರಾಗಲು ಪ್ರಯತ್ನಿಸಿ, ಪರರ ಸ್ಥಿತಿಯನ್ನು ಅರಿಯಬೇಕು. ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವ್ಯಕ್ತಿಗಳಾಗಿ, ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತಾಗಲು ಎನ್.ಎಸ್.ಎಸ್ ನಲ್ಲಿ ಪಾಲ್ಗೊಳ್ಳುವುದರಿಂದ ಸಾಧ್ಯವಾಗುವುದು ಎಂದು ಸತ್ಯಯುಗ ಯೋಗಾಶ್ರಮ ಕುತ್ಪಾಡಿ ಇದರ ಅಧ್ಯಕ್ಷರಾದ ವಾಮನ ಬಂಗೇರ ಹೇಳಿದರು.ಅವರು ಶನಿವಾರ ಇಲ್ಲಿನ ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ಸತ್ಯಯುಗ ಯೋಗಾಶ್ರಮದಲ್ಲಿ ಆರಂಭಗೊಂಡ ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂಗಮ ಸಾಂಸ್ಕೃತಿಕ ವೇದಿಕೆ ಕುತ್ಪಾಡಿ ಇದರ ಗೌರವಾಧ್ಯಕ್ಷ ಗಣೇಶ್ ಕುಮಾರ್, ಶ್ರೀ ರಾಮಕೃಷ್ಣ ಭಜನಾ ಮಂದಿರ ಕುತ್ಪಾಡಿ ಇದರ ಅಧ್ಯಕ್ಷ ಭಾಸ್ಕರ್ ಜತ್ತನ್ನ, ಸಾಫಲ್ಯ ಟ್ರಸ್ಟ್ ಉಡುಪಿಯ ಪ್ರವರ್ತಕಿ ನಿರುಪಮಾ ಪ್ರಸಾದ್ ಶಿಬಿರಕ್ಕೆ ಶುಭ ಕೋರಿದರು.ಯು.ಪಿ.ಎಂ.ಸಿಯ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ರಾಜೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ. ಜಿ. ಕಾರ್ಯಕ್ರಮ ನಿರೂಪಿಸಿದರು.