ಸಾರಾಂಶ
ಬೆಂಗಳೂರು :- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಜೂ.13ರಂದು ನಡೆಯಲಿರುವ ಚುನಾವಣೆಯಲ್ಲಿ ತಾನು ಗೆಲ್ಲಬಹುದಾದ ಏಳು ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.ಪಟ್ಟಿಯಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸ್ಥಾನ ಗಿಟ್ಟಿಸಿದ್ದು, ಸಚಿವ ಎನ್.ಎಸ್. ಬೋಸುರಾಜು ಹಾಗೂ ಕೆ.ಗೋವಿಂದರಾಜು ಮತ್ತೊಮ್ಮೆ ಪರಿಷತ್ ಪ್ರವೇಶದ ಅವಕಾಶ ಪಡೆದಿದ್ದಾರೆ.
-ಚುನಾವಣೆಗೆ ರಾಜ್ಯ ನಾಯಕತ್ವ ನೀಡಿದ್ದ 20 ಮಂದಿ ಸಂಭವನೀಯರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಳೆದು ತೂಗಿ ಅಂತಿಮವಾಗಿ ಏಳು ಮಂದಿಯ ಹೆಸರನ್ನು ಅಖೈರುಗೊಳಿಸಿದ್ದಾರೆ. ಈ ಪಟ್ಟಿಯನ್ನು ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿದ್ದಾರೆ.-
ಹೆಚ್ಚಿನ ಅವಕಾಶ:ಪಟ್ಟಿಯಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚು ಅವಕಾಶ ದೊರೆತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಡಾ.ಯತೀಂದ್ರ ಸಿದ್ದರಾಮಯ್ಯ (ಕುರುಬ), ಎನ್.ಎಸ್. ಬೋಸುರಾಜು (ರಾಜು ಕ್ಷತ್ರಿಯ), ಜಗದೇವ್ ಗುತ್ತೇದಾರ್ (ಈಡಿಗ) ಹೆಚ್ಚು ಸ್ಥಾನ ಪಡೆದಿದ್ದಾರೆ. ಉಳಿದಂತೆ ಕ್ರಿಶ್ಚಿಯನ್ ಸಮುದಾಯದಿಂದ ಐವಾನ್ ಡಿಸೋಜಾ, ಮುಸ್ಲಿಂ ಸಮುದಾಯದಿಂದ ಅಚ್ಚರಿ ಅಭ್ಯರ್ಥಿಯಾಗಿ ಬಲ್ಕಿಸ್ ಬಾನು ಅವಕಾಶ ಗಿಟ್ಟಿಸಿದ್ದಾರೆ. ಉಳಿದಂತೆ ಒಕ್ಕಲಿಗ ಸಮುದಾಯದ ಕೆ.ಗೋವಿಂದರಾಜು ಮತ್ತೆ ಟಿಕೆಟ್ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ಕಾರ್ಯಾಧ್ಯಕ್ಷ ಪರಿಶಿಷ್ಟ ಜಾತಿಗೆ ಸೇರಿದ ವಸಂತಕುಮಾರ್ ಅವಕಾಶ ಪಡೆದಿದ್ದಾರೆ.-
ಹಿಂದುಳಿದ ವರ್ಗಗಳ ಕೋಟಾ ಅಡಿ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಮೊದಲೇ ತೀರ್ಮಾನಗಿತ್ತು. ಆದರೆ ಬೋಸುರಾಜು ಅವರ ಆಯ್ಕೆ ಬಗ್ಗೆ ಅನುಮಾನ ಇತ್ತು. ಬೋಸುರಾಜು ಪುತ್ರ ರವಿ ಬೋಸುರಾಜು ಹಾಗೂ ಯುವ ಸಚಿವರ ಪಡೆ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಪ್ರಭಾವ ಬೀರಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್, ಅಜಯ್‌ಸಿಂಗ್ ಅವರು ಬೋಸುರಾಜು ಪರ ಹೈಕಮಾಂಡ್‌ನಲ್ಲಿ ಒತ್ತಡ ಸೃಷ್ಟಿಸಿದ್ದರು.
ತೆಲಂಗಾಣ ಸೇರಿದಂತೆ ವಿವಿಧ ಚುನಾವಣೆಯಲ್ಲಿ ಬೋಸುರಾಜು ಪಕ್ಷ ಸೇವೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಬೇಕು ಎಂಬ ವಾದಕ್ಕೆ ಮನ್ನಣೆ ನೀಡಿ ಬೋಸುರಾಜು ಅವರಿಗೆ ಹೈಕಮಾಂಡ್ ಮಣೆ ಹಾಕಿದೆ ಎಂದು ತಿಳಿದು ಬಂದಿದೆ.ಇನ್ನು ಇದೇ ಅಸ್ತ್ರವನ್ನು ಇಟ್ಟುಕೊಂಡು ಕೆ.ಗೋವಿಂದರಾಜು ಪರ ಬ್ಯಾಟ್ ಬೀಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಿಂದರಾಜು ಕೂಡ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಅವಕಾಶ ಗಿಟ್ಟಿಸಿಕೊಟ್ಟಿದ್ದಾರೆ.
ಇದಕ್ಕೂ ಮೊದಲು ಹೆಚ್ಚು ಲಾಬಿ ಇರುವುದರಿಂದ ಗೋವಿಂದರಾಜು ಅವರಿಗೆ ಕ್ರೀಡಾ ಕೋಟಾದಡಿ ಅಕ್ಟೋಬರ್‌ನಲ್ಲಿ ಪರಿಷತ್ ಸದಸ್ಯರನ್ನಾಗಿ ಮಾಡುವ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದರು ಎನ್ನಲಾಗಿದೆ.ಸಿದ್ದರಾಮಯ್ಯ, ಹೈಕಮಾಂಡ್ ಮೇಲುಗೈ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್, ಜಗದೇವ್ ಗುತ್ತೇದಾರ್ ಅವರಿಗೆ ಅವಕಾಶ ಒಲಿದಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೋಟಾದಿಂದ ಯತೀಂದ್ರ ಸಿದ್ದರಾಮಯ್ಯ, ಕೆ. ಗೋವಿಂದರಾಜು, ಐವಾನ್ ಡಿಸೋಜಾ ಟಿಕೆಟ್ ಗಿಟ್ಟಿಸಿದ್ದು, ಸಿದ್ದರಾಮಯ್ಯ ಮೇಲುಗೈ ಸಾಧಿಸಿದಂತಾಗಿದೆ.ಪಟ್ಟು ಸಡಿಲಿಸಿದ ಡಿಕೆಶಿ:
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಜಿ. ಪದ್ಮಾವತಿ, ಕಮಲಾಕ್ಷಿ ರಾಜಣ್ಣ, ವಿನಯ್ ಕಾರ್ತಿಕ್ ಹಾಗೂ ಸಂದೀಪ್ ಪರ ಲಾಬಿ ನಡೆಸಿದ್ದರು. ಅಂತಿಮ ಕ್ಷಣದಲ್ಲಿ ಪಟ್ಟು ಹಿಡಿಯದೆ ಸುಮ್ಮನಾದರು. ಪ್ರತಿ ಬಾರಿಯೂ ತಮ್ಮ ಬೆಂಬಲಿಗರಿಗೆ ಪಟ್ಟು ಹಿಡಿದು ಅಧಿಕಾರ ಕೊಡಿಸುತ್ತಿದ್ದ ಶಿವಕುಮಾರ್ ಅವರು ಪಟ್ಟು ಸಡಿಲಿಸಿರುವುದು ಕುತೂಹಲ ಮೂಡಿಸಿದೆ.3 ದಶಕಗಳ ಕಾಯುವಿಕೆಗೆ ಸಿಕ್ಕ ಫಲ:ಇನ್ನು ಮುಸ್ಲಿಂ ಮೀಸಲಾತಿಯಲ್ಲಿ ಬಲ್ಕಿಸ್ ಬಾನು ಅವರ ರೂಪದಲ್ಲಿ ಮುಸ್ಲಿಂ ಮಹಿಳೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ತೀವ್ರ ಲಾಬಿ ಇದ್ದಿದ್ದ ಕಾರಣ ಮಹಿಳೆಯರನ್ನು ಕೈಬಿಡಲು ನಿರ್ಧಿಸಲಾಗಿತ್ತು. ಆದರೆ ಸೋನಿಯಾಗಾಂಧಿ ಅವರು ಮಹಿಳೆಗೆ ಒಂದು ಸ್ಥಾನ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.ಜತೆಗೆ ಅಲ್ತಾಫ್ ಹಳ್ಳೂರು, ಸಚಿವ ಜಮೀರ್ ಅಹಮದ್‌ಖಾನ್ ತನ್ಮೂಲಕ ಸಿದ್ದರಾಮಯ್ಯ ಅವರ ಬೆಂಬಲ ಹೊಂದಿದ್ದ ಇಸ್ಮಾಯಿಲ್ ತಮಟಗಾರ್ ಮತ್ತು ಸೌದಾಗರ್ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಹೀಗಾಗಿ ಮಹಿಳಾ ಕೋಟಾದಡಿ ಬಿಲ್ಕಿಸ್ ಬಾನು ಅವರಿಗೆ ಅಲ್ಪಸಂಖ್ಯಾತ ಟಿಕೆಟ್ ನೀಡಲಾಗಿದೆ. ತನ್ಮೂಲಕ ಮೂರು ದಶಕಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಬಲ್ಕಿಸ್ ಬಾನು ಅವರ ಕಾಯುವಿಕೆಗೆ ಫಲ ಸಿಕ್ಕಂತಾಗಿದೆ.2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅವರು ಇದೀಗ ಮೇಲ್ಮನೆ ಪ್ರವೇಶಿಸುವ ಅವಕಾಶ ಗಿಟ್ಟಿಸಿದ್ದು, ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಕೆ.ಗೋವಿಂದರಾಜು ಹ್ಯಾಟ್ರಿಕ್‌ಕಡೆ ಕ್ಷಣದವರೆಗೆ ತೂಗುಯ್ಯಾಲೆಯಲ್ಲಿದ್ದ ಸಚಿವ ಎನ್.ಎಸ್.ಬೋಸರಾಜು ಹಾಗೂ ಕೆ.ಗೋವಿಂದರಾಜು ಇಬ್ಬರೂ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ತನ್ಮೂಲಕ ಎನ್.ಎಸ್.ಬೋಸರಾಜು ಎರಡನೇ ಬಾರಿಗೆ ವಿಧಾನಪರಿಷತ್ ಸದಸ್ಯರಾಗುವುದು ಖಚಿತವಾಗಿದ್ದು, ಕೆ.ಗೋವಿಂದರಾಜು ಸತತ ಮೂರನೇ ಬಾರಿಗೆ ವಿಧಾನಪರಿಷತ್ ಸದಸ್ಯರಾಗುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಭಾಜನರಾಗಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ಗೋವಿಂದರಾಜು ಮಾತ್ರ ಎನ್ನಲಾಗಿದೆ.ಶೆಟ್ಟರ್ ಸ್ಥಾನಕ್ಕೆ ಬಾದರ್ಲಿ ಅಭ್ಯರ್ಥಿಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಬಸನಗೌಡ ಬಾದರ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದೆ.
ಜಗದೀಶ್ ಶೆಟ್ಟರ್ ಅವರಿಂದ ತೆರವಾದ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೇ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಬಸನಗೌಡ ಬಾದರ್ಲಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.ಇನ್ನು ಬಸನಗೌಡ ಬಾದರ್ಲಿ ಪರ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಭಾವ ಬೀರಿದ್ದರಿಂದ ಅವಕಾಶ ಲಭಿಸಿದೆ ಎನ್ನಲಾಗಿದೆ.ಬಾದರ್ಲಿ ಅವರು ಕೊಪ್ಪಳದಿಂದ ಟಿಕೆಟ್ ಪಡೆಯಲು ಯತ್ನಿಸಿದ್ದರು. ಈ ವೇಳೆ ಸುರ್ಜೆವಾಲ ಅವರು ಬಹಿರಂಗ ಸಮಾವೇಶದಲ್ಲಿ ಬಾದರ್ಲಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಎಸ್.ಆರ್. ಪಾಟೀಲ್ ಅವರ ತೀವ್ರ ಪ್ರಯತ್ನದ ಹೊರತಾಗಿಯೂ ಬಾದರ್ಲಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.