ಉಪ್ಪಿನಂಗಡಿ: ಕಲ್ಲಿನಿಂದ ಜಜ್ಜಿ ಅಸ್ಸಾಂ ಮೂಲದ ಕಾರ್ಮಿಕನ ಕೊಲೆ

| Published : Dec 05 2024, 12:33 AM IST

ಸಾರಾಂಶ

ಕಟ್ಟಡ ಕಾರ್ಮಿಕರು ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಬಂದಾಗ ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ದೀಪಕ್ ಶವ ಪತ್ತೆಯಾಗಿದೆ. ತಲೆಯ ಭಾಗವನ್ನು ಕಲ್ಲಿನಂತಹ ಭಾರವಾದ ವಸ್ತುವಿನಿಂದ ಜಜ್ಜಿರುವುದು ಕಂಡುಬಂದಿದೆ. ಪಕ್ಕದಲ್ಲೇ ಸಿಮ್ ಹಾಗೂ ಬ್ಯಾಟರಿ ತೆಗೆದ ಮೊಬೈಲ್ ಪತ್ತೆಯಾಗಿದೆ

ಉಪ್ಪಿನಂಗಡಿ: ಇಲ್ಲಿನ ಬಸ್‌ ನಿಲ್ದಾಣದ ಸಮೀಪಗ ಗ್ರಾಮ ಪಂಚಾಯಿತಿ ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕನೊಬ್ಬನನ್ನು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ದೀಪಕ್ ಬೆಂಗರ (೩೪) ಕೊಲೆಯಾದ ಕಾರ್ಮಿಕ. ಈತ ಕೆಲ ಸಮಯದ ಹಿಂದೆ ಸ್ಥಳೀಯ ಬಾರ್ ರೆಸ್ಟೋರೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕನಾಗಿದ್ದ ಎನ್ನಲಾಗಿದೆ.

ಕಟ್ಟಡ ಕಾರ್ಮಿಕರು ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಬಂದಾಗ ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ದೀಪಕ್ ಶವ ಪತ್ತೆಯಾಗಿದೆ. ತಲೆಯ ಭಾಗವನ್ನು ಕಲ್ಲಿನಂತಹ ಭಾರವಾದ ವಸ್ತುವಿನಿಂದ ಜಜ್ಜಿರುವುದು ಕಂಡುಬಂದಿದೆ. ಪಕ್ಕದಲ್ಲೇ ಸಿಮ್ ಹಾಗೂ ಬ್ಯಾಟರಿ ತೆಗೆದ ಮೊಬೈಲ್ ಪತ್ತೆಯಾಗಿದೆ. ಸಿಮ್ ತೆಗೆದಿರುವುದರಿಂದ ಮೃತನ ಒಡನಾಟ ಇರಿಸಿಕೊಂಡವರೇ ಹತ್ಯೆ ಮಾಡಿರುವ ಸಾಧ್ಯತೆಯನ್ನು ಶಂಕಿಸಲಾಗಿದೆ. ಮೃತದೇಹದ ಬಳಿ ಇದ್ದ ಚುನಾವಣಾ ಗುರುತು ಪತ್ರದ ಆಧಾರದಲ್ಲಿ ಮೃತನ ಹೆಸರು ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.

ಪಂಚಾಯಿತಿ ಕಾರ್ಯದರ್ಶಿ ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಯತೀಶ್‌ ಎನ್‌., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಜೇಂದ್ರ, ವಿಧಿ ವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.