ಉಪ್ಪಿನಂಗಡಿ: ಬಳಕೆಗೆ ಸಿಗದ ಶಿಥಿಲ ದೋಣಿಗೆ ನದಿಯಿಂದ ಮೋಕ್ಷ!

| Published : May 30 2024, 12:50 AM IST

ಸಾರಾಂಶ

ನದಿಯಲ್ಲಿ ಮುಳುಗಿ ಮೃತಪಡುವ ಪ್ರಕರಣಗಳು ನಡೆದ ಬೆನ್ನಿಗೆ ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಗೆ ೨೦೧೪ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ಸೀಮೆ ಎಣ್ಣೆ ಚಾಲಿತ ಒಬಿಎಂ ಯಂತ್ರ ಸಹಿತ ಮರ ಹಾಗೂ ಫೈಬರ್‌ನಿಂದ ತಯಾರಿಸಲಾದ ದೋಣಿ ಒದಗಿಸಿತ್ತು

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನದಿಯಲ್ಲಿ ಅಪಾಯಕ್ಕೆ ತುತ್ತಾದವರ ರಕ್ಷಣೆಗೆಂದು ಜಿಲ್ಲಾಡಳಿತದಿಂದ ಒದಗಿಸಲಾದ ದೋಣಿ ಸಮರ್ಪಕ ನಿರ್ವಹಣೆ ಇಲ್ಲದೆ, ಬಳಕೆಗೂ ಸಿಗದೆ ಉಪಯೋಗರಹಿತವಾಗಿದ್ದ ಕಾರಣ ಕಂದಾಯ ಇಲಾಖಾಧಿಕಾರಿಗಳು ಕ್ರೇನ್ ಸಹಾಯದಿಂದ ನದಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ಬುಧವಾರ ನಡೆಸಿದರು.

ನದಿಯಲ್ಲಿ ಮುಳುಗಿ ಮೃತಪಡುವ ಪ್ರಕರಣಗಳು ನಡೆದ ಬೆನ್ನಿಗೆ ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಗೆ ೨೦೧೪ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ಸೀಮೆ ಎಣ್ಣೆ ಚಾಲಿತ ಒಬಿಎಂ ಯಂತ್ರ ಸಹಿತ ಮರ ಹಾಗೂ ಫೈಬರ್‌ನಿಂದ ತಯಾರಿಸಲಾದ ದೋಣಿ ಒದಗಿಸಿತ್ತು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಅದನ್ನು ನೇತ್ರಾವತಿ ನದಿಗೆ ಇಳಿಸಲಾಗಿತ್ತು. ಯಂತ್ರದಿಂದ ಮಾತ್ರವೇ ಚಲಾಯಿಸಬಹುದಾಗಿದ್ದ ಈ ದೋಣಿಯನ್ನು ಒಂದು ಬಾರಿ ಹುಟ್ಟು ಹಾಕಿ ಚಲಾಯಿಸಲು ಮುಂದಾದಾಗ ನಿಯಂತ್ರಣ ಕಳೆದುಕೊಂಡು ನೀರಿನ ಸೆಳೆತಕ್ಕೆ ಸಿಲುಕಿ ಹೋಗಿ ದೋಣಿಯಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಬಳಿಕ ಇದನ್ನು ಬಳಸಿದ್ದು ೨೦೧೯ ರ ನೆರೆಯ ಸಂದರ್ಭದಲ್ಲಿ ಮಾತ್ರವಾಗಿತ್ತು.

ಆ ಬಳಿಕ ಶಿಥಿಲ ಸ್ಥಿತಿಗೆ ತಲುಪಿದ ಈ ದೋಣಿಯ ಬದಲು ರಬ್ಬರ್ ದೋಣಿಯನ್ನು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ತಂಡ ಬಳಸಲು ಪ್ರಾರಂಭಿಸಿದ್ದು, ಈ ದೋಣಿಯು ಸರ್ವಕಾಲಿಕ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು.

ಈ ಬಗ್ಗೆ ವ್ಯಕ್ತವಾದ ಸಾರ್ವಜನಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ಎಚ್ಚೆತ್ತ ಕಂದಾಯ ಇಲಾಖೆಯವರು ಪುತ್ತೂರು ಸಹಾಯಕ ಉಪವಿಭಾಗಾಧಿಕಾರಿ ಸೂಚನೆಯಂತೆ ದೋಣಿಯನ್ನು ಕ್ರೇನ್‌ನ ಸಹಾಯದಿಂದ ನದಿಯಿಂದ ಮೇಲೆತ್ತಿ ದೇವಸ್ಥಾನದಿಂದ ಕೆಲವು ಮೀಟರ್‌ಗಳ ದೂರದಲ್ಲಿ ಅದಕ್ಕೆ ಟಾರ್ಪಲಿನ್ ಸುತ್ತಿ ಇರಿಸಿದರು.

ಸಂಪೂರ್ಣ ಶಿಥಿಲಗೊಂಡ ದೋಣಿಗೆ ಈ ಪರಿಯ ರಕ್ಷಣೆ ಯಾಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕಾಲ ಕಾಲಕ್ಕೆ ಸೂಕ್ತ ನಿರ್ವಹಣೆ ಮಾಡುತ್ತಿದ್ದರೆ ದೋಣಿಯು ಬಳಕೆಗೆ ಯೊಗ್ಯವಾಗಿರುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.

ದೋಣಿಯನ್ನು ನದಿಯಿಂದ ತೆರವುಗೊಳಿಸುವ ಸಂದರ್ಭ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ್ ರಾವ್, ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಈಜುಗಾರ ಸುದರ್ಶನ್ ನೆಕ್ಕಿಲಾಡಿ ಮತ್ತಿತರರಿದ್ದರು.