ಉಪ್ಪಿನಂಗಡಿ: ‘ಕಣ್ಮರೆ’ಯಾದ ಆರೋಗ್ಯ ಕವಚ ಉಚಿತ ಆಂಬುಲೆನ್ಸ್‌

| Published : Apr 22 2025, 01:48 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ಹಾಗೂ ನಾಲ್ಕು ತಾಲೂಕುಗಳ ಗಡಿಗ್ರಾಮಗಳನ್ನು ಹೊಂದಿರುವ ಉಪ್ಪಿನಂಗಡಿಯ ಪರಿಸರದಲ್ಲಿ ಸಂಭವಿಸುವ ಅಪಘಾತಗಳ ಸಮಯದಲ್ಲಾಗಲಿ, ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳ ಸಮಯದಲ್ಲಾಗಲಿ ೧೦೮ ಆಂಬುಲೆನ್ಸ್ ಸೇವೆ ಜನತೆಗೆ ಉಪಯುಕ್ತವಾಗಿ ಲಭಿಸುತ್ತಿತ್ತು.

ಉಲುಕ್ ಉಪ್ಪಿನಂಗಡಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಜನತೆಯ ಆರೋಗ್ಯ ಸಮಸ್ಯೆಗೆ ತುರ್ತು ಸ್ಪಂದನೆ ನೀಡುವ ಸಲುವಾಗಿ ಜಾರಿಯಲ್ಲಿರುವ ಆರೋಗ್ಯ ಕವಚ (೧೦೮) ಉಚಿತ ಆಂಬುಲೆನ್ಸ್‌ ಸೇವೆಯು ಉಪ್ಪಿನಂಗಡಿಯಲ್ಲಿ ಸುಮಾರು ೨ ತಿಂಗಳಿಂದ ಕಣ್ಮರೆಯಾಗಿದ್ದು, ರಿಪೇರಿಗೆ ಹೋಗಿದ್ದ ಆಂಬುಲೆನ್ಸ್ ಇನ್ನೂ ಬಂದಿಲ್ಲ ಎಂಬ ಉತ್ತರದಿಂದಾಗಿ ಪ್ರತಿಯೊಂದು ಆರೋಗ್ಯ ಸಂಬಂಧಿ ಸೇವೆಗಾಗಿ ದುಬಾರಿ ಖಾಸಗಿ ಆಂಬುಲೆನ್ಸ್ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ಹಾಗೂ ನಾಲ್ಕು ತಾಲೂಕುಗಳ ಗಡಿಗ್ರಾಮಗಳನ್ನು ಹೊಂದಿರುವ ಉಪ್ಪಿನಂಗಡಿಯ ಪರಿಸರದಲ್ಲಿ ಸಂಭವಿಸುವ ಅಪಘಾತಗಳ ಸಮಯದಲ್ಲಾಗಲಿ, ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳ ಸಮಯದಲ್ಲಾಗಲಿ ೧೦೮ ಆಂಬುಲೆನ್ಸ್ ಸೇವೆ ಜನತೆಗೆ ಉಪಯುಕ್ತವಾಗಿ ಲಭಿಸುತ್ತಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆ ತಲುಪುವ ವರೆಗಿನ ಸೂಕ್ಷ್ಮ ಸಮಯದಲ್ಲಿ ಆಂಬುಲೆನ್ಸ್‌ನಲ್ಲಿಯೇ ತಜ್ಞ ಸಿಬ್ಬಂದಿಯಿಂದ ತುರ್ತು ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗುವ ಕಾರಣಕ್ಕೆ ಈ ಸೇವೆ ಅಕ್ಷರಶಃ ಆರೋಗ್ಯ ರಕ್ಷಕವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ತತ್ ಪರಿಣಾಮ ಬಹಳಷ್ಟು ಜೀವರಕ್ಷಣೆಯ ಕಾರ್ಯವೂ ನಡೆದಿತ್ತು.ಆದರೆ ಕಳೆದ ೨ ತಿಂಗಳಿಂದ ದುರಸ್ತಿಯ ಕಾರಣಕ್ಕೆ ಹೋದ ಆಂಬುಲೆನ್ಸ್ ಹಿಂತಿರುಗಿ ಬಂದಿಲ್ಲ. ಆದ್ದರಿಂದ ಆಂಬುಲೆನ್ಸ್ ಸೇವೆಗೆ ಲಭಿಸದೆ, ಸ್ಥಳೀಯ ಖಾಸಗಿ ಆಂಬುಲೆನ್ಸ್‌ಗಳನ್ನು ಹಣ ತೆತ್ತು ಅವಲಂಭಿಸಬೇಕಾಗಿ ಸ್ಥಿತಿ ಬಂದಿದೆ. ಆದರೆ ಇದರಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ತಜ್ಞರಿಲ್ಲದ ಕಾರಣ ಇದು ರೋಗಿಯನ್ನು ಸಾಗಿಸಲು ಮಾತ್ರ ಬಳಕೆಯಾಗುತ್ತಿದೆ. ಮಾತ್ರವಲ್ಲದೆ ಇದು ಬಡ ರೋಗಿಗಳ ಪಾಲಿಗೆ ದುಬಾರಿಯೆನಿಸಿದೆ.

ಬಾಕ್ಸ್‌

ದುರಸ್ತಿಯಾಗಲು ಇನ್ನೂ ೨೦ ದಿನಗಳು ಬೇಕಾಗಬಹುದುಆಂಬುಲೆನ್ಸ್‌ ಅಲಭ್ಯತೆಯ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಕವಚ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಗುರುರಾಜ್ ನಾಯಕ್, ಎಂಜಿನ್ ಸಮಸ್ಯೆಯ ಕಾರಣಕ್ಕೆ ತಿಂಗಳ ಹಿಂದೆ ರಿಪೇರಿಗೆಂದು ಹೋಗಿರುವ ೧೦೮ ವಾಹನವು ಮತ್ತೆ ಸೇವೆಗೆ ಲಭಿಸಿಲ್ಲ ಎನ್ನುವುದು ವಿಚಾರಿಸಿದಾಗ ದೃಢಪಟ್ಟಿದೆ. ಎಂಜಿನ್ ಸಮಸ್ಯೆಯನ್ನು ಬಗೆಹರಿಸಲು ಇನ್ನೂ ೨೦ ದಿನಗಳು ಬೇಕಾಗಬಹುದೆಂದು ತಿಳಿಸಿದ್ದಾರೆ. ಈ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಮುಂದಿನ ೨೦ ದಿನಗಳ ಬಳಿಕ ಆರೋಗ್ಯ ಕವಚ ಸೇವೆಯನ್ನು ಪುನರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.

ಕೋಟ್‌

ವಾಹನವೊಂದರ ಎಂಜಿನ್ ದುರಸ್ತಿಗೆ ತಿಂಗಳಾನುಗಟ್ಟಲೆ ಸಮಯವನ್ನು ಪಡೆಯುವುದು ಇವತ್ತಿನ ದಿನದಲ್ಲಿ ವ್ಯವಸ್ಥೆಗೆ ಶೋಭೆಯಲ್ಲ. ಬಡ ಜನತೆಗೆ ಅನುಕೂಲವಾಗುವ ಸಲುವಾಗಿ ಉಚಿತ ಸೌಲಭ್ಯವನ್ನು ಕಲ್ಪಿಸಿದಾಗ ರಿಪೇರಿ ಕಾರಣ ಮುಂದೊಡ್ಡಿ ಸೇವೆ ನಿರಾಕರಿಸುವುದು ತರವಲ್ಲ. ವ್ಯವಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಉಳಿಸುವ ಸಲುವಾಗಿ ಆದ್ಯತೆಯ ಮೇರೆಗೆ ತ್ವರಿತ ರಿಪೇರಿ ಮಾಡಿ ಆಂಬುಲೆನ್ಸ್ ವಾಹನವನ್ನು ಸೇವೆಗೆ ಒದಗಿಸಬೇಕು. ಇಲ್ಲವಾದರೆ ಬದಲಿ ವಾಹನದ ವ್ಯವಸ್ಥೆ ಕಲ್ಪಿಸಬೇಕು.

। ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ--------------------ವಾಹನ ರಿಪೇರಿಗೆ ತಿಂಗಳಾನುಗಟ್ಟಲೆ ಸಮಯ ಬೇಕೆನ್ನುವ ನಿಲುವೇ ಅರ್ಥವಾಗುವುದಿಲ್ಲ. ಖಾಸಗಿಯವರ ವಾಹನ ಕೆಟ್ಟರೆ ಒಂದೇ ದಿನದಲ್ಲಿ ದುರಸ್ತಿಯಾಗುತ್ತದೆ. ಸರ್ಕಾರದ ವಾಹನ ಕೆಟ್ಟರೆ ತಿಂಗಳುಗಟ್ಟಲೆ ಸಮಯ ಬೇಕೆನ್ನುವುದರ ಮರ್ಮವೇನು? ಜನರ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಪೂರಕವಾಗಿ ಸರ್ಕಾರ ತಂದಿರುವ ಉಚಿತ ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯನ್ನು ರಿಪೇರಿ ಕಾರಣಕ್ಕೆ ಸ್ಥಗಿತಗೊಳಿಸಿರುವುದು ಸರ್ಕಾರದ ನಿರ್ಲಕ್ಷ್ಯ ನೀತಿಗೆ ಸಾಕ್ಷಿ.

। ಪ್ರಶಾಂತ್ ಡಿಕೋಸ್ಟಾ, ಉಪ್ಪಿನಂಗಡಿ ವರ್ತಕ ಸಂಘ ಅಧ್ಯಕ್ಷಪೋಟೋ ಪೈಲ್ ನೇಮ್ : ಯುಪಿಪಿ_ಎಪ್ರಿಲ್೨೧_೧ ಉಪ್ಪಿನಂಗಡಿಯ ೧೦೮ ಅಂಬುಲೆನ್ಸ್