ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ತಾಲೂಕಿನ ಕರಡಹಳ್ಳಿ ಗ್ರಾಮದ ಬಡ ಕುಟುಂಬದ ರೈತನ ಮಗ ಆರ್.ಧನಂಜಯ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದುವ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತರುವ ಜೊತೆಗೆ ಕುಟುಂಬಸ್ಥರ ಕನಸನ್ನು ನನಸು ಮಾಡಿದ್ದಾರೆ.ಗ್ರಾಮದ ಮಂಗಳಮ್ಮ ಮತ್ತು ರಾಮಚಂದ್ರ ದಂಪತಿ ಪುತ್ರ ಆರ್.ಧನಂಜಯ ಅವರು ಸ್ವಗ್ರಾಮ ಕರಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು, ಮೈಸೂರಿನ ನವ್ಕೀಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ್ದರು. ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗದ ನಂತರ ಹೈದರಾಬಾದ್‌ನಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದು ಬೆಂಗಳೂರಿನ ಅಕ್ಕಾ ಐಎಎಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಜೊತೆಗೆ ತಾವೂ ಕೂಡ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಹಗಲಿರುಳೆನ್ನದೆ ಶ್ರದ್ಧೆವಹಿಸಿ ಓದುತ್ತಿದ್ದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆರ್.ಧನಂಜಯ ಓದು ಮತ್ತು ಕ್ರೀಡೆಯಲ್ಲೂ ಮುಂದಿದ್ದರು. ಶಾಲೆ ಮುಗಿದ ನಂತರ ಹಾಗೂ ರಜಾ ದಿನಗಳಲ್ಲಿ ಪೋಷಕರೊಂದಿಗೆ ಕೃಷಿ ಕಾಯಕ ಮತ್ತು ಮನೆಯಲ್ಲಿ ಸಾಕಿರುವ 25ಕ್ಕೂ ಹೆಚ್ಚು ಮಿಶ್ರತಳಿ ಹಸುಗಳಿಗೆ ಮೇವು ತರುವುದು, ಕಸ ಹಾಕುವುದು, ಹಾಲು ಕರೆಯುವ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಬಿಡುವು ಸಿಕ್ಕಾಗಲೆಲ್ಲ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು.ಮಗನನ್ನು ಓದಿಸಿ ಅತ್ಯುನ್ನತ ಸ್ಥಾನಕ್ಕೇರಿಸಬೇಕೆಂಬ ಕನಸು ಕಟ್ಟಿಕೊಂಡಿದ್ದ ಪೋಷಕರು ಹೊಲ ಮನೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ಓದುವ ಕಡೆ ಗಮನ ಕೊಡುವಂತೆ ಧನಂಜಯನಿಗೆ ಪ್ರೋತ್ಸಾಹ ನೀಡುತ್ತಿದ್ದರು. ತಾಯಿ ತಂದೆಯ ಕನಸನ್ನು ನನಸು ಮಾಡಲೇಬೇಕೆಂದು ಪಣತೊಟ್ಟು ಹಗಲು ರಾತ್ರಿ ಕಷ್ಟಪಟ್ಟು ಓದಿ ಮಹತ್ತರ ಸಾಧನೆ ಮಾಡಿರುವ ಆರ್.ದನಂಜಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆರ್.ದನಂಜಯ ತೇರ್ಗಡೆ ಹೊಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ವಗ್ರಾಮ ಕರಡಹಳ್ಳಿಯಲ್ಲಿ ಪೋಷಕರು ಸ್ಥಳೀಯ ಜನರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.