ಹರಪನಹಳ್ಳಿ: ರೈತರಿಗೆ ವಿತರಿಸಲೆಂದು ಹಾರಕನಾಳು ಸೊಸೈಟಿಗೆ ಬರಬೇಕಾಗಿದ್ದ ಯೂರಿಯಾ ರಸಗೊಬ್ಬರ ಮಧ್ಯದಲ್ಲಿಯೇ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಮಂಗಳವಾರ ತಾಲೂಕಿನ ಹಾರಕನಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಆ. 4ರಂದು ಹೊಸಪೇಟೆಯಿಂದ ಹಾರಕನಾಳು ಕೃಷಿ ಪತ್ತಿನ ಸಂಘದ ಕಚೇರಿಗೆ ಒಂದು ಲೋಡ್ ಯೂರಿಯಾ ಗೊಬ್ಬರವನ್ನು ಕೃಷಿ ಇಲಾಖೆಯಿಂದ ಕಳುಹಿಸಲಾಗಿದೆ. ಆದರೆ. ಆ ಗೊಬ್ಬರದ ಲೋಡ್ ಸೊಸೈಟಿಗೆ ಮುಟ್ಟದೆ ದಾರಿ ಮಧ್ಯೆ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಹಾರಕನಾಳು ಕೃಷಿ ಪತ್ತಿನ ಸಹಕಾರ ಸಂಘಕ್ಕೆ 7 ಹಳ್ಳಿಗಳು ಒಳಪಡುತ್ತವೆ. ಕಳೆದ ವಾರ ಸ್ವಲ್ಪ ಮಟ್ಟಿನ ಮಳೆ ಬಂದಿದ್ದು, ರೈತರು ಯೂರಿಯಾಗಾಗಿ ಕಾಯುತ್ತಿದ್ದರು. ನಂತರ ಬಂದಿದೆ. ಆದರೆ, ಸೊಸೈಟಿ ತಲುಪಿಲ್ಲ. ಮಧ್ಯವರ್ತಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂದು ಆರೋಪಿಸಿ ಕೂಡಲೇ ಕಾಣೆಯಾದ ಒಂದು ಲೋಡ್ ಗೊಬ್ಬರ ಹಾರಕನಾಳು ಸೊಸೈಟಿಗೆ ತರಿಸಬೇಕು. 7 ಹಳ್ಳಿಯ ಎಲ್ಲ ರೈತರಿಗೂ ಸ್ವಲ್ಪವಾದರೂ ಸಿಗಲಿ ಎಂದು ಆಗ್ರಹಿಸಿದರು.
ಸೊಸೈಟಿಗೆ ಗೊಬ್ಬರ ಬರದಿದ್ದರೆ ಸಂಬಂಧಿಸಿದ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಇನ್ನೂ ತೀವ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಿಪಿಐ ಪಕ್ಷದ ಹಾವೇರಿ ದೊಡ್ಡಬಸಪ್ಪ, ರೈತ ಮಂಜನಾಯ್ಕ ತಿಳಿಸಿದರು.ಪ್ರತಿಭಟನೆಯಲ್ಲಿ ಮಂಡನಾಯ್ಕ, ಪೀರನಾಯ್ಕ, ಡಿ.ಕೆ. ಹಾಲೇಶ, ಎಚ್. ಚೆನ್ನಬಸಪ್ಪ, ಏಕಲವ್ಯ, ಆರ್. ಜಾದವ, ನವೀನ ಇತರರು ಇದ್ದರು.
ಯೂರಿಯಾ ಗೊಬ್ಬರ ಬಂದಿದೆ ಎಂದು ರೈತರು ಮಾತನಾಡಿಕೊಳ್ಳುತ್ತಾರೆ. ಕೃಷಿ ಅಧಿಕಾರಿಗಳು ಕಳಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ, ಅದು ಎಲ್ಲಿಗೆ ಹೋಗಿದೆ ಎಂದು ಗೊತ್ತಿಲ್ಲ. ನಮ್ಮ ಸೊಸೈಟಿಗಂತೂ ಬಂದಿಲ್ಲ ಎಂದು ಹಾರಕನಾಳು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಶಮಿ ಉಲ್ಲಾ ತಿಳಿಸಿದರು,
ಆ. 4ರಂದೆ ಒಂದು ಲೋಡ್ ಗೊಬ್ಬರ ಹಾರಕನಾಳು ಸೊಸೈಟಿಗೆ ಕಳಿಸಿದ್ದೇವೆ. ಆದರೆ. ಅಲ್ಲಿಗೆ ಮುಟ್ಟಿಲ್ಲ ಅಂದರೆ ನಮ್ಮ ಸಹಾಯಕ ಕೃಷಿ ನಿರ್ದೆಶಕರಿಂದ ತನಿಖೆ ಮಾಡಿಸುತ್ತೇನೆ ಎಂದು ವಿಜಯನಗರ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದ್ದಾರೆ.